ADVERTISEMENT

ಬೆಳಗಾವಿ| ಹೈಕಮಾಂಡ್‌ ರಾಜಣ್ಣ ವಿರುದ್ಧ ಮಾತ್ರ ಕ್ರಮ ವಹಿಸಿದ್ದೇಕೆ:ರಾಜಶೇಖರ ತಳವಾರ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 9:26 IST
Last Updated 13 ಆಗಸ್ಟ್ 2025, 9:26 IST
   

ಬೆಳಗಾವಿ: ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತು ನಂಬಿ ಕಾಂಗ್ರೆಸ್‌ ಹೈಕಮಾಂಡ್‌ನವರು ಕೆ.ಎನ್‌.ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವುದು ಸರಿಯಲ್ಲ’ ಎಂದು ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ರಾಜಶೇಖರ ತಳವಾರ ಆರೋಪಿಸಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಶಾಸಕ ಬಿ.ಆರ್‌.ಪಾಟೀಲ ಅನೇಕ ಸಲ ಕಾಂಗ್ರೆಸ್‌ ವಿರುದ್ಧ ಮಾತನಾಡಿ, ಸರ್ಕಾರಕ್ಕೆ ಮುಜುಗರ ತಂದಿದ್ದಾರೆ. ಸಂಸದರಾದ ಶಶಿ ತರೂರ, ರಾಜೀವ್‌ ಶುಕ್ಲಾ ಅವರೂ ಕಾಂಗ್ರೆಸ್‌ ವಿರುದ್ಧ ಹೇಳಿಕೆ ಕೊಟ್ಟಿದ್ದಾರೆ. ಅವರ ವಿರುದ್ಧ ಕ್ರಮ ವಹಿಸದ ಕಾಂಗ್ರೆಸ್‌ ಹೈಕಮಾಂಡ್‌ ರಾಜಣ್ಣ ವಿರುದ್ಧ ಮಾತ್ರ ಈ ನಿಲುವು ತಳೆದಿದ್ದು ಏಕೆ’ ಎಂದು ಪ್ರಶ್ನಿಸಿದರು.

‘ರಾಜಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗ. ಹೀಗಿರುವಾಗ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವ ಏಕೆ ತಡೆಯಲಿಲ್ಲ ಎಂಬುದನ್ನು ಸಿದ್ದರಾಮಯ್ಯ ಅವರೂ ಸ್ಪಷ್ಟಪಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ವಾಲ್ಮೀಕಿ ಸಮುದಾಯದ ನಾಯಕರಾದ ರಾಜಣ್ಣ ಅವರನ್ನು ಈಗ ಬಲಿಪಶು ಮಾಡಲಾಗಿದೆ. ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮೂವರು ಸಚಿವರಿದ್ದರು. ಈ ಪೈಕಿ ಇಬ್ಬರನ್ನು ಈಗ ಸಂಪುಟದಿಂದ ಕೈಬಿಡಲಾಗಿದೆ. ರಾಜ್ಯದಲ್ಲಿರುವ ಅಹಿಂದ ವರ್ಗದವರು ಈ ಬೆಳವಣಿಗೆ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕಾಗಿದೆ’ ಎಂದರು.

‘ಸಿದ್ದರಾಮಯ್ಯ ಅವರನ್ನು ಸಿ.ಎಂ ಸ್ಥಾನದಿಂದ ಕೆಳಗಿಳಿಸಲು ಹುನ್ನಾರ ನಡೆಸಿರುವ ಕೆಲವರು, ಮುಖ್ಯಮಂತ್ರಿ ಆಪ್ತರನ್ನೇ ಟಾರ್ಗೆಟ್‌ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ನವರು ತಕ್ಷಣವೇ ರಾಜಣ್ಣ ಅವರನ್ನು ಸಂಪುಟಕ್ಕೆ ಸೇರಿಸಕೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.