ADVERTISEMENT

ಕಾಂಗ್ರೆಸ್‌ ದಲ್ಲಾಳಿಗಳು, ಏಜೆಂಟರ ಪಕ್ಷ: ಪ್ರಲ್ಹಾದ ಜೋಶಿ ವಾಗ್ದಾಳಿ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 10:47 IST
Last Updated 6 ಅಕ್ಟೋಬರ್ 2020, 10:47 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಬೆಳಗಾವಿ: ‘ಕಾಂಗ್ರೆಸ್ ದಲ್ಲಾಳಿಗಳು, ಮಧ್ಯವರ್ತಿಗಳು ಹಾಗೂ ಏಜೆಂಟರ ಪಕ್ಷ’ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರ ಅನುಕೂಲಕ್ಕಾಗಿ ನಮ್ಮ ಸರ್ಕಾರ ಕೃಷಿ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಆದರೆ, ಈ ವಿಷಯದಲ್ಲಿ ಕಾಂಗ್ರೆಸ್‌ ರಾಜಕೀಯಕ್ಕಾಗಿ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

‘ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಹೇಳಿತ್ತು. ಇದು ಅತ್ಯಗತ್ಯ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಹೇಳಿದ್ದರು. ಈಗ ನಾವು ರೈತರನ್ನು ಬಂಧ ಮುಕ್ತ ಮಾಡಿದ್ದೇವೆ. ಇದರಿಂದ ರಾಹುಲ್ ಗಾಂಧಿಗೆ ಆಗಿರುವ ತೊಂದರೆ ಏನು?’ ಎಂದು ಕೇಳಿದರು.

ADVERTISEMENT

ವಿನಾಕಾರಣ ಗೊಂದಲ:

‘ಈ ಬಗ್ಗೆ ನಮ್ಮ ಪ್ರಣಾಳಿಕೆಯಲ್ಲೂ ಹೇಳಿದ್ದೆವು. ಕಾಂಗ್ರೆಸ್‌ನವರಿಗೆ ಮಾತು-ಕೃತಿಯಲ್ಲಿ ಅಂತರ ಇರಬಹುದು. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಆ ಪಕ್ಷ ಎಂದೂ ಅನುಷ್ಠಾನಕ್ಕೆ ತಂದಿಲ್ಲ. ಆದರ, ನಾವು ಭರವಸೆ ಉಳಿಸಿಕೊಂಡಿದ್ದೇವೆ. ಆದರೂ ವಿರೋಧ ಪಕ್ಷದವರು ವಿನಾಕಾರಣ ಗೊಂದಲ ಮೂಡಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಎಪಿಎಂಸಿಗಳನ್ನು ಬಂದ್ ಮಾಡುವುದಿಲ್ಲ. ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ, ರೈತರು ತಮ್ಮ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಬಹುದು. ಎಪಿಎಂಸಿಯಿಂದ ಹೊರಗೆ ಮಾರಿದರೆ ಕಮಿಷನ್ ಕೊಡುವಂತಿಲ್ಲ. ಕಾಂಗ್ರೆಸ್‌ನವರಿಗೆ ಇದರಿಂದ ಆಗುವ ಬೇನೆ ಏನು‘ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ ಇತಿಹಾಸ ಗಮನಿಸಿದರೆ, ಅಲ್ಲಿನ ವರಿಷ್ಠರ ಕುಟುಂಬಕ್ಕೂ ಕಮಿಷನ್ ಏಜೆಂಟರು ಬೇಕು ಮತ್ತು ಕೃಷಿ ವಲಯದಲ್ಲೂ ಕಮಿಷನ್ ಏಜೆಂಟರಿರಬೇಕು ಎನ್ನುವುದು ಸ್ಪಷ್ಟವಾಗಿ ತಿಳಿದುಬರುತ್ತದೆ. ಬಡ ರೈತರ ರಕ್ತ ಹೀರಿ ಕಮಿಷನ್ ಏಜೆಂಟರಿಗೆ ಹಣ ಕೊಡಿಸಬೇಕು ಎನ್ನುವುದು ಅವರ ಉದ್ದೇಶ. ಅದಕ್ಕೆ ತಡೆ ಹಾಕಿದ್ದರಿಂದ, ಕಾಂಗ್ರೆಸ್ಸಿಗರಿಗೆ ದುಃಖವಾಗುತ್ತಿದೆ. ಆ ಪಕ್ಷ ರೈತರ ಪರವೋ, ದಲ್ಲಾಳಿಗಳ ಪರವೋ ಸ್ಪಷ್ಟಪಡಿಸಲಿ’ ಎಂದರು.

ಎಂಎಸ್‌ಪಿ ರದ್ದುಪಡಿಸುವುದಿಲ್ಲ

‘ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ರದ್ದುಗೊಳಿಸುವುದಿಲ್ಲ. ಎಂ.ಎಸ್. ಸ್ವಾಮಿನಾಥನ್ ಆಯೋಗದ ವರದಿಯ ಶಿಫಾರಸುಗಳನ್ನು ಜಾರಿಗೆ ತರುತ್ತಿದ್ದೇವೆ. ನಾವು ರೈತರ ಪರವಿರುವುದು ತಪ್ಪೇ?’ ಎಂದು ಕೇಳಿದರು.

‘ಕಾಯ್ದೆಗೆ ತಿದ್ದುಪಡಿ ತಂದಿದ್ದರ ಮಹತ್ವ ಅರ್ಥ ಮಾಡಿಕೊಳ್ಳದೆ ರೈತ ಸಂಘಗಳು ಹೋರಾಟ ಮಾಡುತ್ತಿವೆ’ ಎಂದು ಪ್ರತಿಕ್ರಿಯಿಸಿದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ್‌ ಪಠಾಣ, ಪಕ್ಷದ ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ಮುಖಂಡರಾದ ಎಂ.ಬಿ. ಝಿರಲಿ, ದೀಪಾ ಕುಡಚಿ, ಉಜ್ವಲಾ ಬಡವನಾಚೆ, ರಾಜೇಂದ್ರ ಹರಕುಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.