ಬೆಳಗಾವಿ: ಇಲ್ಲಿನ ಅನಗೋಳದ ಧರ್ಮವೀರ ಸಂಭಾಜಿ ವೃತ್ತದಲ್ಲಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ವಿಷಯ ಈಗ ವಿವಾದದ ಸ್ವರೂಪ ಪಡೆದಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತು ಶ್ರೀರಾಮ ಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿಯೂ ಆಗಿದ್ದ ರಮಾಕಾಂತ ಕೊಂಡೂಸ್ಕರ್ ಬೆಂಬಲಿಗರ ಮಧ್ಯೆ ಜಟಾಪಟಿ ಏರ್ಪಟ್ಟಿದೆ.
ಅನಗೋಳದ ಪ್ರಮುಖ ವೃತ್ತದಲ್ಲಿ 21 ಅಡಿ ಎತ್ತರದ ಪ್ರತಿಮೆಯನ್ನು ಜ.5ರಂದು ಅನಾವರಣ ಮಾಡುವ ಕುರಿತು ಮೇಯರ್ ಸವಿತಾ ಕಾಂಬಳೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಆದರೆ, ಗುರುವಾರ ಬೆಳಿಗ್ಗೆಯೇ ಅನಾವರಣಕ್ಕೆ ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವ್ಹಾಣ ಮುಂದಾದರು. ಇದಕ್ಕೆ ಶ್ರೀರಾಮ ಸೇನೆ ಹಿಂದೂಸ್ತಾನ್ ಸಂಘಟನೆ ಕಾರ್ಯಕರ್ತರು ಮತ್ತು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು.
'ಕಾಮಗಾರಿ ಅಂತಿಮ ಹಂತ ತಲುಪಿದೆ. ಇನ್ನೂ ಒಂದಿಷ್ಟು ಕೆಲಸ ನಡೆದಿವೆ. ಹೀಗಿರುವಾಗ, ಈಗಲೇ ಪ್ರತಿಮೆ ಅನಾವರಣಗೊಳಿಸುವುದು ಸರಿಯಲ್ಲ' ಎಂದು ತಕರಾರು ತೆಗೆದರು.
ಈ ಮಧ್ಯೆ ಪ್ರತಿಮೆ ಸ್ಥಳದಲ್ಲಿ ಪೂಜೆ ನೆರವೇರಿಸಿದ ಮೇಯರ್ ಸವಿತಾ ಕಾಂಬಳೆ ಸುದ್ದಿಗಾರರ ಜತೆ ಮಾತನಾಡಿ, 'ಸಭೆಯಲ್ಲಿ ನಿರ್ಧರಿಸಿದಂತೆ 5ರಂದೇ ಪ್ರತಿಮೆ ಅನಾವರಣ ಮಾಡುತ್ತೇವೆ. ಈಗ ಪ್ರತಿಮೆ ಕೆಳಭಾಗದಲ್ಲಿರುವ ಸಭಾ ಭವನದಲ್ಲಿ ಪೂಜೆ ಮಾತ್ರ ನೆರವೇರಿಸುತ್ತಿದ್ದೇವೆ. ಯಾರೂ ಅನಗತ್ಯವಾಗಿ ಗೊಂದಲ ಸೃಷ್ಟಿಸಬಾರದು' ಎಂದರು.
'ಪ್ರತಿಮೆ ಅನಾವರಣಕ್ಕೂ ಮುನ್ನ ಪೂಜೆ ಮಾಡುವ ಕುರಿತಾಗಿ ಸಭೆಯಲ್ಲಿ ಚರ್ಚಿಸಲಾಗಿತ್ತೇ' ಎಂಬ ಪ್ರಶ್ನೆಗೆ, ಉತ್ತರಿಸಲು ನಿರಾಕರಿಸಿದರು.
ಈಗ ವೃತ್ತದಲ್ಲಿ ಎರಡೂ ಗುಂಪಿನ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಸೇರುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಮುಂದಾದರು.
ವೃತ್ತದಲ್ಲಿ ಜಮಾಯಿಸುವ ಕಾರ್ಯಕರ್ತರ ಸಂಖ್ಯೆ ಹೆಚ್ಚುತ್ತಲೇ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.