ADVERTISEMENT

ಬೆಳಗಾವಿ| ಸಹಕಾರಿ ಸಂಸ್ಥೆಗಳ ಬೇಡಿಕೆಯಂತೆ ನೀತಿ ರೂಪಿಸುತ್ತೇವೆ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 10:52 IST
Last Updated 28 ಡಿಸೆಂಬರ್ 2025, 10:52 IST
   

ಬೆಳಗಾವಿ: ‘ರಾಜ್ಯದಲ್ಲಿನ ಸೌಹಾರ್ದ ಸಹಕಾರಿ ಸಂಸ್ಥೆಗಳ ಬೇಡಿಕೆಯಂತೆ ನಾವು ನೀತಿ ರೂಪಿಸುತ್ತೇವೆ. ನಿಮ್ಮ ಬೆಳವಣಿಗೆಗಾಗಿ ಸಹಕಾರ ನೀಡಲು ಬದ್ಧರಿದ್ದೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

ಇಲ್ಲಿನ ಕೆಎಲ್‌ಇ ಸೆಂಟೇನರಿ ಕನ್ವೆನ್ಷನ್‌ ಸೆಂಟರ್‌ ಡಾ.ಬಿ.ಎಸ್‌.ಜೀರಗೆ ಸಭಾಭವನದಲ್ಲಿ ಭಾನುವಾರ ಸೌಹಾರ್ದ ಸಹಕಾರ ಚಳವಳಿಯ ‘ರಜತ ಮಹೋತ್ಸವ’ದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸಹಕಾರಿ ಸಂಸ್ಥೆಗಳ ಮೇಲೆ ಒಂದಿಷ್ಟಾದರೂ ಸರ್ಕಾರದ ನಿಯಂತ್ರಣವೂ ಬೇಕಾಗುತ್ತದೆ. ಹಾಗೆಂದು ನಾವು ತೊಂದರೆ ಕೊಡುವುದಿಲ್ಲ. ಸಹಕಾರಿ ಸಂಸ್ಥೆಗಳಲ್ಲಿ ಗ್ರಾಹಕರು ಠೇವಣಿ ಇರಿಸುವ ಹಣ ಸುರಕ್ಷಿತವಾಗಿ ಇರಬೇಕು ಎಂಬುದಷ್ಟೇ ನಮ್ಮ ಕಳಕಳಿ. ನಿಮ್ಮ ಬೇಡಿಕೆಗಳ ಕುರಿತಾಗಿ ವಿಸ್ತೃತವಾಗಿ ಚರ್ಚೆ ಮಾಡಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ನಿಯೋಗ ಕರೆದುಕೊಂಡು ಹೋಗಿ, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಯತ್ನಿಸುವೆ’ ಎಂದರು.

ADVERTISEMENT

ಶಾಸಕ ಲಕ್ಷ್ಮಣ ಸವದಿ, ‘ಸಹಕಾರ ಸಂಸ್ಥೆಗಳು ಬಡವರ ಆರ್ಥಿಕತೆ ಸುಧಾರಿಸಲು ವಿವಿಧ ಯೋಜನೆ ರೂಪಿಸಬೇಕು. ನಾನು ಸದಾ ಸಹಕಾರಿ ಸಂಸ್ಥೆಗಳ ಜತೆಗಿರುತ್ತೇನೆ’ ಎಂದು ಭರವಸೆ ಕೊಟ್ಟರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ‘ಬೆಳಗಾವಿಗೂ, ಸಹಕಾರ ರಂಗಕ್ಕೂ ಅವಿನಾಭಾವ ಸಂಬಂಧವಿದೆ. ಜಿಲ್ಲೆಯ ಅನೇಕ ದಿಗ್ಗಜರು ಕ್ರಿಯಾಶೀಲವಾಗಿ ಕೆಲಸ ಮಾಡಿ, ಸಹಕಾರ ರಂಗಕ್ಕೆ ಹೆಸರು ತಂದಿದ್ದಾರೆ’ ಎಂದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ.ನಂಜನಗೌಡ ಅಧ್ಯಕ್ಷತೆ ವಹಿಸಿದ್ದರು.

ಸಂಸದ ಜಗದೀಶ ಶೆಟ್ಟರ್‌, ಶಾಸಕ ಆಸಿಫ್ ಸೇಠ್‌, ಮಾಜಿ ಸಚಿವ ಎಸ್‌.ಎಸ್‌.ಪಾಟೀಲ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಪ್ರಥಮ ಅಧ್ಯಕ್ಷ ಮನೋಹರ ಮಸ್ಕಿ, ಉಪಾಧ್ಯಕ್ಷ ಎ.ಆರ್‌.ಪ್ರಸನ್ನಕುಮಾರ, ವಿಶ್ವನಾಥ ಹಿರೇಮಠ, ಎಸ್.ಆರ್.ಸತೀಶ್ಚಂದ್ರ, ಎಚ್.ವಿ.ರಾಜೀವ್ , ಯು.ಎಚ್.ರಾಮಪ್ಪ , ಅನೂಪ್‌ ದೇಶಪಾಂಡೆ, ಗುರುನಾಥ ಜ್ಯಾಂತಿಕರ, ಬಿ.ಎಚ್.ಕೃಷ್ಣಾರೆಡ್ಡಿ, ಸಚಿನ ಪಾಟೀಲ ಇತರರಿದ್ದರು. ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಜಗದೀಶ ಕವಟಗಿಮಠ ಸ್ವಾಗತಿಸಿದರು.

ದೇವರ ಸೇವೆ ಇದ್ದಂತೆ: ಹೆಬ್ಬಾಳಕರ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ‘ಸಹಕಾರ ರಂಗದಲ್ಲಿ ಮಾಡುವ ಸೇವೆಯೂ ದೇವರ ಸೇವೆ ಇದ್ದಂತೆ. ಬಡ ಜನರ ಆರ್ಥಿಕ ಸ್ಥಿತಿ ಸುಧಾರಣೆಯಲ್ಲಿ ಸಹಕಾರ ಸಂಸ್ಥೆಗಳ ಕೊಡುಗೆಯೂ ದೊಡ್ಡದಿದೆ’ ಎಂದರು.

‘ಕೆಲ ಸಂಸ್ಥೆಗಳು ವಂಚನೆ ಮಾಡಿದಾಗ, ಹಣ ಕಳೆದುಕೊಂಡವರು ಸಹಾಯ ಕೋರಿ ಜನಪ್ರತಿನಿಧಿಗಳ ಬಳಿ ಬರುತ್ತಾರೆ. ಸಹಕಾರಿ ಸಂಸ್ಥೆಗಳು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಬೇಕು’ ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಸೌಹಾರ್ದ ಸಹಕಾರಿ ಸಂಸ್ಥೆಗಳು ಗ್ರಾಹಕರ ವಿಶ್ವಾಸ ಗಳಿಸಿವೆ. ಮನೆ–ಮನೆಗೆ ಹಣ ತಲುಪಿಸುವ ಕೆಲಸ ಮಾಡುತ್ತಿವೆ. ಇಂಥ ಸಂಸ್ಥೆಗಳು ಇನ್ನಷ್ಟು ಪ್ರಗತಿಯತ್ತ ಸಾಗಲಿ
ಸತೀಶ ಜಾರಕಿಹೊಳಿ, ಸಚಿವ
ಸಹಕಾರ ರಂಗ ಆರಂಭವಾಗಿ 120 ವರ್ಷಗಳಾಯಿತು. ಈಗಲೂ ಸಹಕಾರ ಚಳವಳಿ ಜೀವಂತವಾಗಿದೆ. ರಾಜ್ಯದಲ್ಲಿ ಸಹಕಾರಿ ಸಂಸ್ಥೆಗಳ ಸರ್ಕಾರದ ಸಂಪೂರ್ಣ ನಿಯಂತ್ರಣ ಬೇಡ
ಪ್ರಭಾಕರ ಕೋರೆ, ರಾಜ್ಯಸಭಾ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.