ADVERTISEMENT

ಕೊರೊನಾ ಭೀತಿ: ಸರಳ ಶ್ರಾವಣ ಸೋಮವಾರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 12:04 IST
Last Updated 20 ಜುಲೈ 2020, 12:04 IST

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶ್ರಾವಣ ಮಾಸದ ಮೊದಲ ಸೋಮವಾರದ ಆಚರಣೆಯು ಕೊರೊನಾ ಸೋಂಕಿನ ಭೀತಿಯಿಂದಾಗಿ ಸರಳವಾಗಿತ್ತು.

ಹಿಂದಿನ ವರ್ಷಗಳಲ್ಲಿ ದೇವಸ್ಥಾನಗಳಲ್ಲಿ, ಮಠಗಳಲ್ಲಿ ಶ್ರಾವಣ ಮಾಸದ ಮೊದಲ ಸೋಮವಾರದ ಅಂಗವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಅದ್ಧೂರಿಯಾಗಿ ಹಮ್ಮಿಕೊಳ್ಳಲಾಗುತ್ತಿತ್ತು. ಪ್ರವಚನ ಇರುತ್ತಿತ್ತು. ನೂರಾರು ಭಕ್ತರು ನೆರೆಯುತ್ತಿದ್ದರು. ಆದರೆ, ಈ ಬಾರಿ ದೇಗುಲಗಳಲ್ಲಿ ಪೂಜೆ–ಪುನಸ್ಕಾರಗಳಿಗಷ್ಟೇ ಸೀಮಿತವಾಯಿತು. ಮೂರ್ತಿಗಳನ್ನು ಸರಳವಾಗಿ ಅಲಂಕರಿಸಲಾಗಿತ್ತು. ಬೆರಳೆಣಿಕೆಯ ಭಕ್ತರಷ್ಟೇ ಕಂಡುಬಂದರು.

ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಲಾಕ್‌ಡೌನ್‌ ಇರುವುದರಿಂದ ಆ ಭಾಗದ ದೇಗುಲಗಳಲ್ಲಿ ಸಂಭ್ರಮವಿರಲಿಲ್ಲ. ಸವದತ್ತಿ ತಾಲ್ಲೂಕಿನ ಸುಕ್ಷೇತ್ರ ಜಾಲಿಕಟ್ಟಿ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಅಂಗವಾಗಿ ಸಾರ್ವಜನಿಕರು ಪೂಜೆ ಸಲ್ಲಿಸಲು ಅವಕಾಶ ಇರಲಿಲ್ಲ.

ADVERTISEMENT

ಮುನವಳ್ಳಿಯ ಸೋಮಶೇಖರ ಮಠದ ಮುರುಘರಾಜೇಂದ್ರ ಶ್ರೀಗಳ ಸಮ್ಮುಖದಲ್ಲಿ ಶ್ರಾವಣ ಮಾಸ ಅಂಗವಾಗಿ ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದ್ದ ಪಥಸಂಚಲನವನ್ನು ಕೊರೊನಾ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ.

ನಿಪ್ಪಾಣಿಯಲ್ಲಿ ವೀರಶೈವ ಸಮಾಜ ಮತ್ತು ಮಹಾದೇವ ದೇವಸ್ಥಾನ ಟ್ರಸ್ಟ್‌ 16 ವರ್ಷಗಳಿಂದ ಪ್ರತಿ ಶ್ರಾವಣ ಮಾಸದಲ್ಲಿ ಹಮ್ಮಿಕೊಳ್ಳುತ್ತಿದ್ದ ಜಪನಾಮ ಕಾರ್ಯಕ್ರಮವನ್ನು ಈ ಬಾರಿ ರದ್ದುಗೊಳಿಸಲಾಯಿತು. ಹೂವಿನ ಅಲಂಕಾರ ಮಾಡಿ ಪೂಜೆ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.