ADVERTISEMENT

ಕೊರೊನಾ ಆಟ: ಚಿತ್ರಮಂದಿರ ನಂಬಿದವರು ಕಂಗಾಲು

ನೂರಾರು ಮಂದಿಗೆ ಸಂಕಷ್ಟ; ನೆರವಿಗೆ ಮನವಿ

ಎಂ.ಮಹೇಶ
Published 8 ಮೇ 2020, 2:23 IST
Last Updated 8 ಮೇ 2020, 2:23 IST
   

ಬೆಳಗಾವಿ: ಮಾರಕ ಕೊರೊನಾ ಉಂಟು ಮಾಡಿರುವ ತಲ್ಲಣದ ‘ಆಟ’ದಿಂದಾಗಿ ಜಾರಿಯಾಗಿರುವ ಲಾಕ್‌ಡೌನ್‌ ಪರಿಣಾಮ ಚಲನಚಿತ್ರ ಮಂದಿರಗಳನ್ನು ನಂಬಿದ್ದವರು ಕಂಗಾಲಾಗಿದ್ದಾರೆ.

ಮಾರ್ಚ್‌ 15ರಿಂದ ಚಲನಚಿತ್ರ ಮಂದಿರಗಳು ಹಾಗೂ ಮಲ್ಟಿಫ್ಲೆಕ್ಸ್‌ಗಳನ್ನು ಬಂದ್ ಮಾಡಲಾಗಿದೆ. ನಗರವೊಂದರಲ್ಲೇ ಪ್ರಸ್ತುತ ಆರು ಚಲನಚಿತ್ರ ಮಂದಿರ (ಒಂದು ಪರದೆ)ಗಳಿವೆ. ಮಲ್ಟಿಪ್ಲೆಕ್ಸ್‌ಗಳಲ್ಲಿ ಐದು ಪರದೆಗಳಿವೆ. ಜಿಲ್ಲೆಯಲ್ಲಿ ತಾಲ್ಲೂಕು ಕೇಂದ್ರ, ಪಟ್ಟಣ ಹಾಗೂ ದೊಡ್ಡ ಗ್ರಾಮಗಳಲ್ಲಿ ಥಿಯೇಟರ್‌ಗಳಿವೆ. ಇವುಗಳನ್ನು ಗುತ್ತಿಗೆ ಪಡೆದವರು ಅಥವಾ ಬಾಡಿಗೆಗೆ ತೆಗೆದುಕೊಂಡು ನಡೆಸುವವರು ನಷ್ಟಕ್ಕೆ ಒಳಗಾಗಿದ್ದಾರೆ.

ಅವುಗಳಲ್ಲಿ ಕೆಲಸ ಮಾಡುತ್ತಿದ್ದ ಆಪರೇಟರ್‌ಗಳು, ತಾಂತ್ರಿಕ ಸಿಬ್ಬಂದಿ, ಸ್ವಚ್ಛತೆಯ ಕೆಲಸ ಮಾಡುವವರು, ಡೋರ್‌ ಕೀಪರ್ಸ್‌, ಪಾರ್ಕಿಂಗ್‌ ನಿರ್ವಹಣೆ, ಭದ್ರತೆ, ಲೆಕ್ಕಪತ್ರ ಹಾಗೂ ಬುಕ್ಕಿಂಗ್‌ ವಿಭಾಗದಲ್ಲಿ ಸರಾಸರಿ 15ರಿಂದ 20 ಮಂದಿ ಕೆಲಸ ಮಾಡುತ್ತಿರುತ್ತಾರೆ. ಅವರಿಗೆ ಲಾಕ್‌ಡೌನ್‌ ಬರೆ ಎಳೆದಿದೆ. ಕೆಲಸವೂ ಇಲ್ಲದೆ ಸಂಬಳವೂ ಇಲ್ಲದೆ ತೊಂದರೆಗೆ ಒಳಗಾಗಿದ್ದಾರೆ. ಕೆಲವು ಮಾಲೀಕರು ಮಾನವೀಯತೆಯ ದೃಷ್ಟಿಯಿಂದ ಒಂದಷ್ಟು ಸಂಬಳ ನೀಡಿರುವುದು ಗೊತ್ತಾಗಿದೆ.

ADVERTISEMENT

ಪರಿಹಾರ ಕೊಡಿ

ಚಲನಚಿತ್ರ ಮಂದಿರ ಚಾಲೂ ಇದ್ದರೆ ಅಲ್ಲಿ ಕುರುಕಲು ತಿನಿಸುಗಳು, ತಂಪು ಪಾನೀಯಗಳನ್ನು ಮಾರುವವರು ಅಂಗಡಿ ಹಾಕಿರುತ್ತಾರೆ. ಸುತ್ತಮುತ್ತಲೂ ಹಲವು ಚಟುವಟಿಕೆಗಳು ನಡೆಯುತ್ತಿರುತ್ತವೆ. ಈ ಮಂದಿರಗಳನ್ನು ನಂಬಿದ್ದ ಹಲವು ವರ್ಗದವರು ಹಾಗೂ ಅವರ ಕುಟುಂಬದವರಿಗೆ ಲಾಕ್‌ಡೌನ್‌ನಿಂದ ಸಂಕಷ್ಟ ಎದುರಾಗಿದೆ. ಅಸಂಘಟಿತ ವರ್ಗಕ್ಕೆ ಸೇರಿದ ಈ ಕೆಲಸಗಾರರು ಸರ್ಕಾರದಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

‘ಕೋವಿಡ್‌–19 ಲಾಕ್‌ಡೌನ್‌ ಪರಿಣಾಮ ಸಂಕಷ್ಟಕ್ಕೆ ಸಿಲುಕಿರುವವರಿಗೆ ಸರ್ಕಾರ ಈಚೆಗೆ ಪರಿಹಾರದ ಪ್ಯಾಕೇಜ್ ಘೋಷಿಸಿದೆ. ಇದರಲ್ಲಿ ನಮ್ಮನ್ನೂ (ಚಲನಚಿತ್ರ ಮಂದಿರಗಳಲ್ಲಿ ಕೆಲಸ ಮಾಡುವವರು) ಸೇರಿಸಬೇಕಿತ್ತು. ಸಿನಿಮಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸದೆ ಇರುವುದರಿಂದ ನಾವು ಬಹಳ ತೊಂದರೆಗೆ ಸಿಲುಕಿದ್ದೇವೆ. ಕೇವಲ ಸಂಬಳವನ್ನು ನಂಬಿ ಬದುಕುತ್ತಿದ್ದೇವೆ. ನಮಗೆ ಪಿಎಫ್‌, ಇಎಸ್‌ಐ ಮೊದಲಾದ ಯಾವುದೇ ಸೌಲ‌ಭ್ಯವಿಲ್ಲ. ಸರ್ಕಾರ ನಮ್ಮ ಕಡೆಗೂ ಗಮನಹರಿಸಬೇಕು. ಪರಿಹಾರ ನೀಡಬೇಕು’ ಎಂದು ಬೈಲಹೊಂಗಲದ ಸಂಗಂ ಚಲನಚಿತ್ರ ಮಂದಿರದ ಆಪರೇಟರ್‌ ಪರಶುರಾಮ ಕೆ. ಪಾಟೀಲ ಒತ್ತಾಯಿಸಿದರು.

ಬಹಳ ತೊಂದರೆ

‘ಬೇಸಿಗೆ ರಜೆ, ಮದುವೆ, ಜಾತ್ರೆಗಳ ಸೀಸನ್ ಇದಾಗಿತ್ತು. ಈ ಸಂದರ್ಭದಲ್ಲಿ ಕಲೆಕ್ಷನ್‌ ಚೆನ್ನಾಗಿರುತ್ತಿತ್ತು. ಒಳ್ಳೆಯ ಸಿನಿಮಾಗಳು ಬಂದಿದ್ದರೆ ಹೆಚ್ಚಿನ ಜನರು ವೀಕ್ಷಿಸಲು ಬರುತ್ತಿದ್ದರು. ಆದರೆ, ಈಗ ಸಿನಿಮಾ ಪ್ರದರ್ಶನ ಇಲ್ಲದಿರುವುದರಿಂದ ನಾವೂ ನಷ್ಟ ಅನುಭವಿಸಿದ್ದೇವೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಚಿತ್ರಮಂದಿರ ನವೀಕರಿಸಿದವರು ಮತ್ತು ಪ್ರೇಕ್ಷಕರಿಗೆ ಉತ್ತಮ ಅನುಭವ ಸಿಗಲೆಂದು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿದವರೂ ಇದ್ದಾರೆ. ಸಾಲ ಕಟ್ಟುವುದಕ್ಕೂ ಪರದಾಡುವ ಸ್ಥಿತಿ ಇದೆ. ಹೀಗಾಗಿ, ಚಿತ್ರಮಂದಿರ ಆರಂಭಕ್ಕೆ ಅನುಮತಿ ದೊರೆತಾಗ ಬನ್ನಿ ಎಂದು ನೌಕರರನ್ನು ಕಳುಹಿಸಿದ್ದೇನೆ. ಕೆಲಸವಿಲ್ಲದೇ ಅವರಿಗೆ ಸಂಬಳ ಕೊಡುವಷ್ಟು ಚೈತನ್ಯವಿಲ್ಲ’ ಎಂದು ಪ್ರದರ್ಶಕರೊಬ್ಬರು ಪ್ರತಿಕ್ರಿಯಿಸಿದರು.

‘ನಮ್ಮೆಲ್ಲರ ಕೈ ಮೀರಿದ ಸಮಸ್ಯೆಯನ್ನು ಕೊರೊನಾ ವೈರಾಣು ಸೃಷ್ಟಿಸಿದೆ. ಚಲನಚಿತ್ರ ಮಂದಿರಗಳಿಗೆ ನಿರ್ಬಂಧ ಹೇರಿ ಎರಡು ತಿಂಗಳೇ ಆಗುತ್ತಿದೆ. ಬಹಳ ಕುಟುಂಬಗಳು ಇವುಗಳನ್ನು ನಂಬಿಕೊಂಡಿವೆ.ನನ್ನ ಥಿಯೇಟರ್‌ನ ಸಿಬ್ಬಂದಿಗೆ ಹೋದ ತಿಂಗಳ ಸಂಬಳ ಕೊಟ್ಟಿದ್ದೇನೆ. ಲಾಕ್‌ಡೌನ್‌ನಿಂದಾಗಿ ಬ್ಯುಸಿನೆಸ್ ಇಲ್ಲದಿರುವುದರಿಂದ ನಮಗೂ ಬಹಳ ತೊಂದರೆಯಾಗಿದೆ’ ಎಂದು ಚಲನಚಿತ್ರ ಪ್ರದರ್ಶಕರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಅವಿನಾಶ ಪೋತದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.