ADVERTISEMENT

PV Web Exclusive| ಸೋಂಕು ಹೆಚ್ಚುತ್ತಿರುವಾಗ ಪರೀಕ್ಷೆ ಇಳಿಕೆ!

ಬೆಳಗಾವಿ: 100 ಮಂದಿ ಪರೀಕ್ಷಿಸಿದರೆ 33 ಮಂದಿಗೆ ಸೋಂಕು ದೃಢ

ಎಂ.ಮಹೇಶ
Published 14 ಮೇ 2021, 14:52 IST
Last Updated 14 ಮೇ 2021, 14:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಳಗಾವಿ: ದಿನೇ ದಿನೇ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣವನ್ನು ಕಡಿತಗೊಳಿಸಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೆ, ಹಲವು ಅನುಮಾನಗಳಿಗೂ ಕಾರಣವಾಗಿದೆ.

ಕೋವಿಡ್ 2ನೇ ಅಲೆಯಲ್ಲಿ ಅಂದರೆ ಮಾರ್ಚ್‌ 17ರಿಂದ ಮೇ 13ರವರೆಗೆ 15ಸಾವಿರ ಮಂದಿಗೆ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ. 6,248 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಆಗಿದ್ದಾರೆ. 36 ಮಂದಿ ಸಾವಿಗೀಡಾಗಿದ್ದಾರೆ. ಕಳೆದ 10 ದಿನಗಳಿಂದ ಪಾಸಿಟಿವಿಟಿ ಪ್ರಮಾಣವು ಶೇ 33.20ಕ್ಕೆ ತಲುಪಿದೆ. ಅದಕ್ಕಿಂತ ಕೆಲವು ದಿನಗಳ ಹಿಂದೆ ಇದು ಶೇ 20ರಷ್ಟಿತ್ತು. ಕೆಲವೇ ದಿನಗಳಲ್ಲಿ ಏರಿಕೆಯಾಗಿದೆ. 100 ಮಂದಿಯನ್ನು ಪರೀಕ್ಷಿಸಿದರೆ ಸರಾಸರಿ 33 ಮಂದಿಗೆ ಕೋವಿಡ್–19 ದೃಢಪಡುತ್ತಿರುವುದು ವರದಿಯಾಗಿದೆ.

ಸಾಮರ್ಥ್ಯ ಹೆಚ್ಚಿಸಲಿಲ್ಲ:ಕಳೆದ ವಾರ ದಿನವೂ 6ಸಾವಿರಕ್ಕೂ ಹೆಚ್ಚಿನ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತಿತ್ತು. ಇದನ್ನು ಮೂರ್ನಾಲ್ಕು ದಿನಗಳಿಂದ ಸರಾಸರಿ 2,600ಕ್ಕೆ ಇಳಿಸಲಾಗಿದೆ. ಸೋಂಕು ಪತ್ತೆ ಪ್ರಮಾಣ ಕಡಿಮೆ ಆಗುತ್ತಿದೆ ಎಂದು ಬಿಂಬಿಸುವುದಕ್ಕೆ ಪರೀಕ್ಷೆಯನ್ನೇ ಕಡಿಮೆ ಮಾಡಲಾಗುತ್ತಿದೆಯೇ ಎನ್ನುವ ಅನುಮಾನವೂ ಮೂಡುತ್ತಿದೆ.‌ ಜೊತೆಗೆ, ಸ್ಥಳೀಯವಾಗಿ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯದಿಂದ ದೂರ ಸರಿಯುವ ತಂತ್ರವೂ ಇದಾಗಿಯೇ ಎಂಬ ಸಂಶಯವೂ ಇದೆ. ಕೋವಿಡ್ ಪರೀಕ್ಷಾ ಪ್ರಮಾಣ ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಸೂಚನೆ ನೀಡಿದ್ದಾರೆ. ಅದಕ್ಕೆ ತದ್ವಿರುದ್ಧವಾದ ಬೆಳವಣಿಗೆ ಇಲ್ಲಿ ನಡೆಯುತ್ತಿದೆ.

ADVERTISEMENT

ಕೋವಿಡ್ ಪತ್ತೆಗಾಗಿ ಜಿಲ್ಲೆಯಲ್ಲಿ ಸಂಗ್ರಹಿಸಲಾಗುವ ಮಾದರಿಯ ಪರೀಕ್ಷೆಗೆ ಬೇರೆ ಜಿಲ್ಲೆಗಳ ಪ್ರಯೋಗಾಲಯಕ್ಕೆ‌ ಕಳಿಸುವ ಬದಲು ಎಲ್ಲವನ್ನೂ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಹಾಗೂ ಎನ್.ಐ.ಟಿ.ಎಂ. ಪ್ರಯೋಗಾಲಯಲ್ಲೇ ಪರೀಕ್ಷಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಈವರೆಗೂ ಸಾಧ್ಯವಾಗಿಲ್ಲ.

ಜಿಲ್ಲೆಯಲ್ಲಿ ನಿತ್ಯ 6 ಸಾವಿರ ಜನರಿಂದ ಮಾದರಿ ಸಂಗ್ರಹಿಸಿದರೆ, ಅದರಲ್ಲಿ 3ಸಾವಿರ‌ ಮಾದರಿಗಳನ್ನು ಬಿಮ್ಸ್ ಹಾಗೂ ಎನ್.ಐ.ಟಿ.ಎಂ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತಿತ್ತು. ಇನ್ನುಳಿದ ಮಾದರಿಗಳನ್ನು ಧಾರವಾಡ ಜಿಲ್ಲೆಗೆ ಕಳುಹಿಸಲಾಗುತ್ತಿತ್ತು. ಇದರಿಂದ ವರದಿ ಬರುವುದು ವಿಳಂಬವಾಗುತ್ತಿತ್ತು. ಪರೀಕ್ಷೆಗೆ ಮಾದರಿ ಕೊಟ್ಟವರು ವರದಿ ಬರುವವರೆಗೂ ಎಲ್ಲೆಂದರಲ್ಲಿ ಓಡಾಡುತ್ತಿದ್ದರು. ಸೋಂಕಿದ್ದವರು ಇತರರಿಗೂ ಹರಡುತ್ತಿದ್ದರು.

ಪ್ರಾದೇಶಿಕ ಆಯುಕ್ತರು ಸೂಚಿಸಿದ್ದರು: ಪರೀಕ್ಷಾ ವರದಿ ಪಡೆಯಲು ಇರುವ ಅವಲಂಬನೆ ಮತ್ತು ವಿಳಂಬ ತಪ್ಪಿಸಲು ವರ್ಷದಿಂದಲೂ ಅಗತ್ಯ ಕ್ರಮ ಜರುಗಿಸುವ ಕೆಲಸವಾಗಿಲ್ಲ. ಈ ನಿಟ್ಟಿನಲ್ಲಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಏ.21ರಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದರು. ಸ್ಥಳೀಯವಾಗಿ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಕ್ಕೆ ಸೂಚನೆಯನ್ನೂ ನೀಡಿದ್ದರು. ಆದರ ಬದಲಿಗೆ ಪರೀಕ್ಷಾ ಪ್ರಮಾಣವನ್ನೇ ಇಳಿಕೆ ಮಾಡಲಾಗಿದೆ! ಅಗತ್ಯ ಸಿಬ್ಬಂದಿ ಹಾಗೂ ಮೂಲಸೌಲಭ್ಯ ಕೊರತೆಯೂ ಇದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ. ‘ಹೋದ ವಾರದವರೆಗೂ ರ‍್ಯಾಂಡಮ್ ಆಗಿ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸುತ್ತಿದ್ದೆವು. ದಿನವೂ ಸರಾಸರಿ 6ಸಾವಿರ ಮಾದರಿಗಳನ್ನು ಸಂಗ್ರಹಿಸಲಾಗುತ್ತಿತ್ತು. ಈಗ ಸೋಂಕು ಸಮುದಾಯದಲ್ಲಿ ಹರಡಿರುವುದರಿಂದಾಗಿ ರ‍್ಯಾಡಮ್ ಪರೀಕ್ಷೆ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದೆ’ ಎಂದು ತಿಳಿಸಿದರು.

‘ರೋಗ ಲಕ್ಷಣ ಇರುವವರು, ಸೋಂಕಿತರ ಪ್ರಾಥಮಿಕ ಸಂಪರ್ಕಿತರು, ಮಧುಮೇಹ ಮೊದಲಾದ ನ್ಯೂನತೆಯುಳ್ಳವರನ್ನು ಮಾತ್ರವೇ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ನಿರ್ದಿಷ್ಟ ಗುರಿಯ ಕಾರ್ಯಕ್ರಮ ಇದಾಗಿದೆ. ಹೆಚ್ಚು ಮಂದಿ ಪರೀಕ್ಷೆಗೆ ಒಳಪಡಿಸಿದರೆ ವರದಿ ಬರುವುದು ಕೂಡ ವಿಳಂಬವಾಗುತ್ತದೆ. ಹೀಗಾಗಿ, ಈಗ 2,600 ಮಾದರಿ ಸಂಗ್ರಹಿಸಲಾಗುತ್ತಿದೆ. 600 ಮಾದರಿಗಳನ್ನು ಧಾರವಾಡಕ್ಕೆ ಕಳುಹಿಸಲಾಗುತ್ತಿದೆ. 36 ಗಂಟೆಯೊಳಗೆ ವರದಿ ನೀಡುವುದಕ್ಕೆ ಪ್ರಯತ್ನಿಸಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.