ADVERTISEMENT

ಬೆಳಗಾವಿ ಪೊಲೀಸರ ಕಾರ್ಯಾಚರಣೆ: ಕಾಂಬೋಡಿಯಾದಲ್ಲಿ ಒತ್ತೆಯಾಳಾಗಿದ್ದ ಮೂವರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 4:07 IST
Last Updated 15 ಜನವರಿ 2026, 4:07 IST
   

ಬೆಳಗಾವಿ: ಸೈಬರ್ ಅಪರಾಧ ಮಾಡಿಸುವ ಉದ್ದೇಶದಿಂದ ಕಾಂಬೋಡಿಯಾ ದೇಶದಲ್ಲಿ ಒತ್ತೆ ಆಳಾಗಿ ಇರಿಸಿಕೊಂಡಿದ್ದ ಮೂವರನ್ನು ಬೆಳಗಾವಿಯ ಸೈಬರ್‌ ಅಪರಾಧ ವಿಭಾಗದ ಪೊಲೀಸರು ರಕ್ಷಿಸಿದ್ದಾರೆ.

‘ಇಲ್ಲಿನ ಪಾರ್ವತಿ ನಗರದ ನಿವಾಸಿ ಆಕಾಶ ವಿಠ್ಠಲ ಕಾಗಿನಕರ, ಅವಳಿಗಳಾದ ಓಂಕಾರ ಸಂಭಾಜಿ ಲೋಕಂಡೆ ಮತ್ತು ಸಂಸ್ಕಾರ್‌ ಸಂಭಾಜಿ ಲೋಕಂಡೆ ಸುರಕ್ಷಿತವಾಗಿ ದೇಶಕ್ಕೆ ಮರಳಿದ್ದಾರೆ. ನಗರದ ಶಹಾಪುರದ ನಿವಾಸಿ ಪ್ರಸನ್ನ ಹುಂದ್ರೆ, ಆಸಿಫ್‌ ಮತ್ತು ಪಂಜಾಬ್‌ನ ಅಮಿತ್‌ ಎಂಬ ಆರೋಪಿಗಳು, ಮೂವರಿಗೂ ಡಾಟಾ ಎಂಟ್ರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಿದೇಶದಲ್ಲಿ ಮಾರಾಟ ಮಾಡಿದ್ದರು ಎಂದು ದೂರು ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ನಡೆದಿದ್ದೇನು?: 

ADVERTISEMENT

ಬ್ಯಾಂಕಾಕ್ ದೇಶದ ಹಾಂಕಾಂಗ್‌ ಸಿಟಿಯಲ್ಲಿ ಡಾಟಾ ಎಂಟ್ರಿ ಕೆಲಸಕ್ಕೆ ತಿಂಗಳಿಗೆ ₹1.25 ಲಕ್ಷ ವೇತನವಿದೆ. ಅದನ್ನು ಕೊಡಿಸುತ್ತೇನೆ ಎಂದು ಪ್ರಸನ್ನ ಮೂವರನ್ನೂ ಪುಸಲಾಯಿಸಿ ಕರೆದೊಯ್ದಿದ್ದ. ಅವರಿಂದ ₹2.50 ಲಕ್ಷ ಹಣ ಪಡೆದಿದ್ದ. ಹಾಂಕಾಂಗ್‌ ನಗರಕ್ಕೆ ಕರೆದೊಯ್ಯುವುದಾಗಿ ಹೇಳಿ ಆರೋಪಿಗಳಾದ ಆಸಿಫ್ ಮತ್ತು ಅಮಿತ್, ಮೂವರನ್ನು ಕಾಂಬೋಡಿಯಾಗೆ ಕರೆದೊಯ್ದರು.

2025ರ ಡಿಸೆಂಬರ್‌ 12ರಂದು ಆಕಾಶ, ಓಂಕಾರ್ ಮತ್ತು ಸಂಸ್ಕಾರ್‌ ಅವರಿಗೆ ತಿಂಗಳಿಗೆ ₹1 ಲಕ್ಷ ಸಂಬಳ ಕೊಡುವುದಾಗಿ ಹೇಳಿ, ಭಾರತೀಯ ಪ್ರಜೆಗಳಿಗೆ ಕರೆ ಮಾಡಿ ಸೈಬರ್ ಅಪರಾಧ ಮಾಡುವ ಕೆಲಸ ನೀಡಲಾಗಿತ್ತು. ಅವರಂತೆಯೇ 20 ಭಾರತೀಯ ಪ್ರಜೆಗಳನ್ನು ಅಲ್ಲಿ ಒತ್ತೆ ಆಳಾಗಿ ಇಟ್ಟುಕೊಳ್ಳಲಾಗಿತ್ತು. ಎಲ್ಲರೂ ಸೈಬರ್‌ ವಂಚನೆ ಪ್ರಕರಣದಲ್ಲಿ ತೊಡಗಿದ್ದು ಈ ಮೂವರಿಗೂ ಅರಿವಾಯಿತು. ಮೂವರೂ ಈ ಕೆಲಸ ಮಾಡಲು ನಿರಾಕರಿಸಿದರು.

‘ನಿಮ್ಮ ಎಜೆಂಟರಾದ ಆಸಿಫ್ ಮತ್ತು ಅಮಿತ್‌ ನಮ್ಮ ಕಡೆಯಿಂದ ತಲಾ ₹3 ಲಕ್ಷ ಹಣ ಪಡೆದು, ನಿಮ್ಮನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ. ನೀವು ಕೆಲಸ ಮಾಡಲೇಬೇಕು’ ಎಂದು ಕಂಪನಿಯವರು ತಿಳಿಸಿದರು. ಅದಕ್ಕೆ ಒಪ್ಪದಿದ್ದಾಗ ಮೊಬೈಲ್‌ ಫೋನ್‌ಗಳನ್ನು ಕಿತ್ತುಕೊಂಡು ಮೂವರನ್ನೂ ಒಂದು ಕೊಠಡಿಯಲ್ಲಿ ಕೂಡಿ ಹಾಕಿದ್ದರು’ ಎಂದು ನಗರ ಪೊಲೀಸ್‌ ಕಮಿಷನರ್‌ ಭೂಷಣ್‌ ಬೊರಸೆ ತಿಳಿಸಿದರು.

‘ಮೂವರ ಸಂಪರ್ಕ ಕಡಿತಗೊಂಡಿದ್ದರಿಂದ ಆತಂಕಗೊಂಡ ಸಚಿನ್‌ ವಿಠ್ಠಲ ಕಾಗನಕರ ಅವರು ಡಿ.25ರಂದು ದೂರು ದಾಖಲಿಸಿದ್ದರು. ಪ್ರಕರಣದ ಬೆನ್ನು ಹತ್ತಿದ ಬೆಳಗಾವಿ ಸೈಬರ್‌ ಠಾಣೆ ಪೊಲೀಸರು, ಬೆಂಗಳೂರಿನ ವಲಸೆ ಕಚೇರಿ ಮತ್ತು ಸಿಐಡಿ ಕಚೇರಿಗೆ ಸಂಪರ್ಕ ಮಾಡಿ ಮೂವರನ್ನು ರ‌ಕ್ಷಿಸುವಲ್ಲಿ ಯಶಸ್ವಿಯಾದರು’ ಎಂದು ಅವರು ಹೇಳಿದರು.

‘ಜನವರಿ 9ರಂದು ಎಲ್ಲರೂ ಬೆಳಗಾವಿಗೆ ಮರಳಿದ್ದಾರೆ. ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ. ಸೈಬರ್‌ ಅಪರಾಧ ಠಾಣೆಯ ಇನ್‌ಸ್ಪೆಕ್ಟರ್‌ ಜೆ.ಎಂ. ಕಾಲಿಮಿರ್ಚಿ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.