
ಬೆಳಗಾವಿ: ಸೈಬರ್ ವಂಚನೆಗೆ ಅನುಕೂಲವಾಗುವಂತೆ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆದು ನಿರ್ವಹಿಸುತ್ತಿದ್ದ ಆರೋಪದ ಮೇಲೆ ಜಿಲ್ಲೆಯ ನಿಪ್ಪಾಣಿ ನಗರದ ಐವರ ವಿರುದ್ಧ ಸೈಬರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಶುಭಂ ಲಕ್ಕಣ್ಣವರ, ಅಮಿತ ಶೇಖರ ಶಿಂಧೆ, ರಾಹುಲ ಶಿವಾಜಿ ಹಂಚನಾಳೆ, ಅಕ್ಷಯ ಅನಿಲ ಪಸಾರೆ ಮತ್ತು ಗಜಾನನ ಚಂದ್ರಕಾಂತ ದರ್ಮೋಡೆ ಅವರ ವಿರುದ್ಧ ಐಟಿ ಕಾಯ್ದೆ ಮತ್ತು ಬಿಎನ್ಎಸ್‌ನ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಇವರು ಫೆಡರಲ್ ಬ್ಯಾಂಕಿನಲ್ಲಿ ಖಾತೆಗಳನ್ನು ತೆರೆದಿದ್ದರು.
ಪಶ್ಚಿಮ ಬಂಗಾಳದಿಂದ ಕಾರ್ಯನಿರ್ವಹಿಸುತ್ತಿರುವ ಸೈಬರ್ ಅಪರಾಧಿಗಳು ಆನ್‌ಲೈನ್ ವಂಚನೆಗಳ ಮೂಲಕ ಪಡೆದ ಹಣವನ್ನು ಚಾನೆಲ್ ಮಾಡಲು ಸ್ಥಳೀಯ ನಿವಾಸಿಗಳ ಬ್ಯಾಂಕ್ ಖಾತೆಗಳನ್ನು ಬಳಸುತ್ತಿದ್ದರು. ಸಾಕ್ಷ್ಯ ನಾಶ ಮಾಡಲು ಹಣವನ್ನು ಇಲ್ಲಿನವರ ಖಾತೆಗಳಿಗೆ ವರ್ಗಾಯಿಸುತ್ತಿದ್ದರು. ಇದರಿಂದ ವಂಚನೆಯಿಂದ ಪಡೆದ ಹಣ ಎಲ್ಲಿಗೆ ಹೋಗಿದೆ ಎಂಬುದು ಪತ್ತೆ ಆಗದಂತೆ ಮಾಡಲಾಗುತ್ತಿತ್ತು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣದ ಕುರಿತು ಜಿಲ್ಲೆಯ ಕೆಲವು ಖಾತೆಗಳ ಮೇಲೂ ಸೈಬರ್ ಪೊಲೀಸರು ಕಣ್ಣಿಟ್ಟಿದ್ದರು. ಪರಿಣಾಮ ಐವರ ಖಾತೆಗಳು ಪತ್ತೆಯಾಗಿವೆ ಎಂದು ತಿಳಿಸಲಾಗಿದೆ.
ಬೈಕ್ ಸವಾರರ ಸಾವು: ಖಾನಾಪುರ ತಾಲ್ಲೂಕಿನ ನಾಗರಗಾಳಿ ಗ್ರಾಮದ ಹದ್ದಿಯ ಬಳಿ ರಾಮನಗರ– ಅಳ್ನಾವರ ರಸ್ತೆಯ ಮೇಲೆ ಬೈಕ್ ಅಪಘಾತಕ್ಕೀಡಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೋಯಿಡಾದ ನಿವಾಸಿ ದಿಗಂಬರ ಪಾಂಡುರಂಗ ಗಾವಡೆ (27) ಮೃತಪಟ್ಟವರು. ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಯುವಕರು ಸಾವು
ಬೆಳಗಾವಿ: ಜಿಲ್ಲೆಯ ವಿವಿಧೆಡೆ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟಿದ್ದಾರೆ.
ರಾಯಬಾಗ ತಾಲ್ಲೂಕಿನ ಖೈರಕೋಡ ಗ್ರಾಮದ ಬಳಿ ಶನಿವಾರ ರಾತ್ರಿ ರಸ್ತೆ ಬದಿ ನಿಲ್ಲಿಸಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವಕ ಸಾವನ್ನಪ್ಪಿದ್ದಾನೆ. ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಆನಂದ ಸುರೇಶ ಪೂಜಾರಿ (22) ಮೃತರು. ರಾಯಬಾಗ ತಾಲ್ಲೂಕಿನ ಖೈರಖೋಡ ಗ್ರಾಮದ ಮಾಯಪ್ಪ ಸಾತು ಪಾಟೀಲ ಟ್ರ್ಯಾಕ್ಟರ್ ಮಾಲೀಕ. ರಸ್ತೆಯ ಮೇಲೆ ಕತ್ತಲಲ್ಲಿ ಟ್ರ್ಯಾಕ್ಟರ್ ನಿಲ್ಲಿಸಿದ್ದೇ ಅಪಘಾತಕ್ಕೆ ಕಾರಣ ಎಂದು ರಾಯಬಾಗ ಪೊಲೀಸರು ತಿಳಿಸಿದ್ದಾರೆ. ಇನ್ನೊಂದೆಡೆ ಕಟಕೋಳ– ಮುನವಳ್ಳಿ ರಸ್ತೆಯ ಮೇಲೆ ಪದಮಂಡಿ ಗ್ರಾಮದ ಬಳಿ ರಸ್ತೆಯ ಮೇಲೆ ಹೊರಟಿದ್ದ ಕಬ್ಬು ತುಂಬಿ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಸವಾರ ಸಾವನ್ನಪ್ಪಿದ್ದಾನೆ. ಸವದತ್ತಿ ತಾಲ್ಲೂಕು ಇಂಚಲ ಗ್ರಾಮದ ಶಿವು ಮಲ್ಲನಾಯ್ಕ ಜಕ್ಕಪ್ಪನ್ನವರ ಮೃತರು. ರಾಮದುರ್ಗ ಉಜ್ಜಿನಕೊಪ್ಪ ಗ್ರಾಮದ ಸುರೇಶ ವೆಂಕನಾಯ್ಕ ನಾಯ್ಕರ ಟ್ರ್ಯಾಕ್ಟರ್ ಚಾಲಕ. ಟ್ರ್ಯಾಕ್ಟರ್ ಅನ್ನು ಸಂಚಾರಕ್ಕೆ ಅಡ್ಡಿಯಾಗುವಂತೆ ನಿಲ್ಲಿಸಿದ್ದೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.