ADVERTISEMENT

ಸಾಹುಕಾರ್ ದಿವಾಳಿಯಾಗುತ್ತಿದ್ದಾರೆ: ಡಿ.ಕೆ. ಶಿವಕುಮಾರ್‌ ಟೀಕೆ

ಹಣ ವಸೂಲಿಗೆ ಸರ್ಕಾರ ಕ್ರಮ ಕೈಗೊಳ್ಳಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಮೇ 2022, 13:30 IST
Last Updated 7 ಮೇ 2022, 13:30 IST
ಡಿ.ಕೆ.ಶಿವಕುಮಾರ್‌
ಡಿ.ಕೆ.ಶಿವಕುಮಾರ್‌   

ಬೆಳಗಾವಿ: ‘ಸಾಹುಕಾರ್ ದಿವಾಳಿಯಾಗುತ್ತಿದ್ದಾರೆ. ದಿವಾಳಿಯಾಗಿದ್ದೇವೆ, ಬರ್ಬಾದ್ ಆಗಿದ್ದೇವೆ ಮತ್ತು ಭಿಕ್ಷುಕರಾಗಿದ್ದೇವೆ ಎಂದು ಸೌಭಾಗ್ಯಲಕ್ಷ್ಮಿ ಕಾರ್ಖಾನೆಯಿಂದ ಜಾಹೀರಾತು ನೀಡಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಉತ್ತರಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಒತ್ತಾಯಿಸಿದರು.

ಇಲ್ಲಿ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ ಅವರು, ‘ಆ ಮಾಜಿ ಸಚಿವರು ₹600 ಕೋಟಿಗೂ ಜಾಸ್ತಿ ಹಣವನ್ನು ಅಪೆಕ್ಸ್ ಬ್ಯಾಂಕ್‌ಗೆ ಕಟ್ಟಬೇಕು. ಈ ಸಂಬಂಧ ಬ್ಯಾಂಕ್‌ನವರು ಜಿಲ್ಲಾಧಿಕಾರಿಗೆ ಪತ್ರ ಬರೆದು 2 ವರ್ಷಗಳಾದರೂ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ರೈತರಿಗೆ ನೀಡಬೇಕಿರುವ ₹50 ಕೋಟಿ ಕೊಡಿಸುವುದು ಜಿಲ್ಲಾಡಳಿತದ ಕರ್ತವ್ಯ. ಆದರೆ, ಮುಖ್ಯಮಂತ್ರಿ ಆ ಶಾಸಕರ ಬೆನ್ನಿಗೆ ನಿಂತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

‘ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಬೇನಾಮಿ ಹೆಸರಿನಲ್ಲಿ ಹಣ ಪಡೆದು ಕಾರ್ಖಾನೆ ನಡೆಸುವ ಕೆಲಸವಾಗುತ್ತಿದೆ. ಈ ವಿಚಾರವನ್ನು ಕೇಂದ್ರ ಸಚಿವರಿಗೆ ತಿಳಿಸಬೇಕು. ಹಣ ವಸೂಲಿಗೆ ಆಸ್ತಿ ಜಪ್ತಿ ಮಾಡಬೇಕು. ಶಾಸಕರಿಗೆ ರಕ್ಷಣೆ ನೀಡಿದ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ರೈತರು ಹಾಗೂ ಬ್ಯಾಂಕ್‌ಗೆ ಹಣ ಸಿಗಬೇಕು. ಮಂಗಳೂರು, ತುಮಕೂರು, ವಿಜಯಪುರ ಡಿಸಿಸಿ ಬ್ಯಾಂಕ್‌ಗಳು ಹಾಗೂ ಅಪೆಕ್ಸ್ ಬ್ಯಾಂಕಿನವರು ಹಣ ವಸೂಲಿ ಮಾಡಬೇಕು. ಈ ವಿಷಯದಲ್ಲಿ ಹೋರಾಟ ಮುಂದುವರಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ಬಿಜೆಪಿ ನಾಯಕರ ಮನೆಗೆ ಹೋಗಿ ಐಟಿ ಹಾಗೂ ಇಡಿ ಪ್ರಕರಣಗಳಿಂದ ರಕ್ಷಿಸುವಂತೆ ಕೋರಿದ್ದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿದ್ದಾರೆ. ಆ ಮೆಂಟಲ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ಮುಖಂಡ ಪ್ರಮೋದ ಮಧ್ವರಾಜ್ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಅವರಿಗೆ ಒಳ್ಳೆಯದಾಗಲಿ’ ಎಂದರು.

ರೇಟ್ ಫಿಕ್ಸ್ ಸರ್ಕಾರ

ಬಿಜೆಪಿ ಸರ್ಕಾರವು ಪ್ರತಿ ಕೆಲಸ, ಹುದ್ದೆ, ಸ್ಥಾನಮಾನಕ್ಕಾಗಿ ರೇಟ್ ಫಿಕ್ಸ್‌ ಮಾಡಿದೆ. ದರ ನಿಗದಿ ಸರ್ಕಾರವಿದು.

–ಡಿ.ಕೆ. ಶಿವಕುಮಾರ್‌, ಅಧ್ಯಕ್ಷ, ಕೆಪಿಸಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.