ಚಿಕ್ಕೋಡಿ: ನಲವತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಜೇವರ್ಗಿ-ಸಂಕೇಶ್ವರ, ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಗಳು ಸೇರಿದಂತೆ ಹಲವು ನಗರ, ಪಟ್ಟಣಗಳಿಗೆ ಸಂಪರ್ಕಿಸುವ ಪ್ರಮುಖ ರಸ್ತೆಗಳು ಇವೆ. ಆದರೆ ಬಹುತೇಕ ರಸ್ತೆಗಳ ವಿಭಜಕಗಳಲ್ಲಿ ಮುಳ್ಳು ಕಂಟಿ, ಕಸ ಕಡ್ಡಿ ಬೆಳೆದು ನಿಂತಿದ್ದರಿಂದ ವಾಹನ ಸವಾರರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ.
ಚಿಕ್ಕೋಡಿ ಉಪ ವಿಭಾಗದ ಶಕ್ತಿ ಸೌಧವಾಗಿರುವ ಹಲವು ಇಲಾಖೆಗಳ ಕಚೇರಿಯನ್ನು ಹೊಂದಿರುವ ಮಿನಿ ವಿಧಾನಸೌಧದ ಕೂಗಳತೆಯಲ್ಲಿಯೇ ಮರವೊಂದು ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯಲ್ಲಿ ಧರೆಗುರುಳಿ ನಾಲ್ಕು ದಿನಗಳೇ ಕಳೆಯುತ್ತ ಬಂತು. ಇದುವರೆಗೂ ಮರವನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವ ಕಾರ್ಯವನ್ನು ಯಾರೂ ಮಾಡುತ್ತಿಲ್ಲ.
ತಾಲ್ಲೂಕು ಪಂಚಾಯಿತಿ ಕಚೇರಿ ಎದುರಿನಲ್ಲಿಯೇ ಮರ ಉರುಳಿ ಬಿದ್ದಿದ್ದು, ಸುಗಮ ಸಂಚಾರ ನೋಡಿಕೊಳ್ಳುವ ಜವಾಬ್ದಾರಿ ಹೊತ್ತ ಟ್ರಾಫಿಕ್ ಪೊಲೀಸ್ ಠಾಣೆಯೂ ಹತ್ತಿರದಲ್ಲಿಯೇ ಇದ್ದರೂ ಮರ ತೆರವುಗೊಳಿಸುವ ಕಾರ್ಯಕ್ಕೆ ಗಮನ ಹರಿಸಿಲ್ಲ.
ಇನ್ನು, ಚಿಕ್ಕೋಡಿ ಪಟ್ಟಣ ವ್ಯಾಪ್ತಿಯಲ್ಲಿ ಯಕ್ಸಂಬಾ ರಸ್ತೆಯ ವಿಭಜಕದಲ್ಲಿ ಅಲಂಕಾರಿಕ ಅಥವಾ ಹೂವಿನ ಗಿಡ ಬೆಳೆಸಬೇಕಾದ ಜಾಗೆಯಲ್ಲಿ ಪುರಸಭೆಯ ನಿರ್ಲಕ್ಷ್ಯದಿಂದ ಕಸ ಬೆಳೆದು ನಿಂತಿದೆ. ರಸ್ತೆಯಲ್ಲಿ ಸಂಚರಿಸುವವರಿಗೆ ಆಹ್ಲಾದಕರ ವಾತಾವರಣ ನಿರ್ಮಾಣ ಮಾಡಬೇಕಾದ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಅದಕ್ಕೂ ತಮಗೂ ಸಂಬಂಧ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಚಿಕ್ಕೋಡಿ-ಸದಲಗಾ ಶಾಸಕ ಗಣೇಶ ಹುಕ್ಕೇರಿ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಸ್ವಗ್ರಾಮ ಯಕ್ಸಂಬಾ ಪಟ್ಟಣ ಸಂಪರ್ಕಿಸುವ ರಸ್ತೆಯ ಸ್ಥಿತಿಯೇ ಹೀಗಿರಬೇಕಾದರೆ, ಇನ್ನಿತರ ರಸ್ತೆಗಳ ಸ್ಥಿತಿಯು ಹೇಗಿರಬೇಡ ಹೇಳಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಪಟ್ಟಣದ ಪರಟಿ ನಾಗಲಿಂಗೇಶ್ವರ ದೇವಸ್ಥಾನದ ಬಳಿಯಲ್ಲಿ ಹಾದು ಹೋಗುವ ಸಂಕೇಶ್ವರ-ಜೇವರ್ಗಿ ಹೆದ್ದಾರಿಯ ವಿಭಜಕಗಳಲ್ಲಿ ದೊಡ್ಡ ದೊಡ್ಡ ಮುಳ್ಳು ಕಂಟಿಗಳೇ ಬೆಳೆದು ನಿಂತಿವೆ. ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ತಗ್ಗು ಬಿದ್ದಿದ್ದು, ತಗ್ಗು ತಪ್ಪಿಸಿ ಸಂಚಾರ ಮಾಡುವ ಹಲವು ವಾಹನ ಸವಾರರು ಮುಳ್ಳು ಕಂಟಿಗಳು ತರಚಿ ಗಾಯ ಮಾಡಿಕೊಂಡ ಉದಾಹರಣೆಗಳೂ ಇವೆ.
ರಸ್ತೆ, ಬಸ್ ನಿಲ್ದಾಣಗಳು ಆಯಾ ಗ್ರಾಮ, ಪಟ್ಟಣದ ಆಡಳಿತ ವೈಖರಿ ಹೇಗಿದೆ ಎಂದು ಹೇಳುತ್ತವೆಯಂತೆ. ಹಾಗೆಯೇ ಚಿಕ್ಕೋಡಿ ಪುರಸಭೆಯ ಆಡಳಿತ ಚುಕ್ಕಾಣಿ ಹಿಡಿದ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ ಸುಂದರ ಚಿಕ್ಕೋಡಿ ಪಟ್ಟಣವನ್ನಾಗಿಸುವ ಪ್ರಯತ್ನಕ್ಕೆ ಮುಂದಾಗಬೇಕಿದೆ.
ಚಿಕ್ಕೋಡಿ ಪಟ್ಟಣವನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳು ಹಾಗೂ ರಸ್ತೆಗಳಲ್ಲಿ ಬೆಳೆದು ನಿಂತು ಮುಳ್ಳು ಕಂಟಿಗಳನ್ನು ತೆರವುಗೊಳಿಸಿ ಅಲಂಕಾರಿಕ ಗಿಡ ಬೆಳೆಸಿ ಸೌಂದರ್ಯೀಕರಣಕ್ಕೆ ಪುರಸಭೆಯು ಒತ್ತು ನೀಡಬೇಕುರವೀಂದ್ರ ಬಾವಿಮನಿ ಚಿಕ್ಕೋಡಿ ನಿವಾಸಿ
ಪಟ್ಟಣದ ಪ್ರಮುಖ ರಸ್ತೆಗಳ ವಿಭಜಕಗಳಲ್ಲಿ ಸಂಬಂಧಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಿ ಸೌಂದರ್ಯೀಕರಣ ಮಾಡುವ ವಿಚಾರವಿದೆ. ಮುಳ್ಳು ಕಂಟಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುತ್ತೇನೆವೆಂಕಟೇಶ ನಾಗನೂರ ಮುಖ್ಯಾಧಿಕಾರಿ ಪುರಸಭೆ ಚಿಕ್ಕೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.