ADVERTISEMENT

ಕರಾಳ ದಿನಾಚರಣೆ | ನ. 1ರ ಬದಲಾಗಿ ಬೇರೊಂದು ದಿನ ಪ್ರತಿಭಟನೆ ನಡೆಸಲು ಡಿ.ಸಿ ತಾಕೀತು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 12:30 IST
Last Updated 15 ಅಕ್ಟೋಬರ್ 2024, 12:30 IST
<div class="paragraphs"><p>ಬೆಳಗಾವಿಯಲ್ಲಿ ಎಂಇಎಸ್‌ ಕಾರ್ಯಕರ್ತರು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರಿಗೆ ಮನವಿ ಸಲ್ಲಿಸಿದರು</p></div>

ಬೆಳಗಾವಿಯಲ್ಲಿ ಎಂಇಎಸ್‌ ಕಾರ್ಯಕರ್ತರು ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರಿಗೆ ಮನವಿ ಸಲ್ಲಿಸಿದರು

   

ಬೆಳಗಾವಿ: ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಕರಾಳ ದಿನ ಆಚರಣೆಗೆ ಅನುಮತಿ ಕೋರಿ ಮಂಗಳವಾರ ಬಂದಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಕಾರ್ಯಕರ್ತರಿಗೆ ಬುದ್ಧಿವಾದ ಹೇಳಿದ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ಅವರು, ‘ಯಾವ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡುವುದಿಲ್ಲ’ ಎಂದು ತಿಳಿಸಿದರು.

ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ದಿನದಂದು ಎಂಇಎಸ್‌ನವರು ಕರಾಳ ದಿನ ಆಚರಿಸಿ, ನಾಡವಿರೋಧಿ ನಿಲುವು ತಳೆಯುತ್ತ ಬಂದಿದ್ದಾರೆ. ಈ ಬಾರಿಯೂ ಅನುಮತಿ ಕೋರಿ ಜಿಲ್ಲಾಧಿಕಾರಿ ಕಚೇರಿಗೆ ಎಂಇಎಸ್‌ ನಿಯೋಗ ಬಂದಿತ್ತು.

ADVERTISEMENT

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾನೂನಿನ ಚೌಕಟ್ಟಿನಡಿ ಪ್ರತಿಭಟಿಸಲು ಎಲ್ಲರಿಗೂ ಹಕ್ಕು ಇದೆ. ರಾಜ್ಯೋತ್ಸವದ ದಿನ ಬಿಟ್ಟು, ಬೇರೆ ಯಾವ ದಿನದಂದು ನಿಮಗೆ ಪ್ರತಿಭಟಿಸಲು ಅವಕಾಶ ಕೊಡುತ್ತೇನೆ. ಆದರೆ, ರಾಜ್ಯೋತ್ಸವದಂದೇ ಕರ್ನಾಟಕದ ಐಕ್ಯತೆಗೆ ಧಕ್ಕೆ ತರುವಂಥ ಹೋರಾಟಕ್ಕೆ ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ’ ಎಂದು ಡಿ.ಸಿ ಸ್ಪಷ್ಟಪಡಿಸಿದರು.

‘ಬೆಳಗಾವಿ ಮಹಾನಗರದಲ್ಲಿ ಈಚೆಗೆ ಗಣೇಶೋತ್ಸವ ಮತ್ತು ಈದ್‌–ಮಿಲಾದ್ ಹಬ್ಬವನ್ನು ಎಲ್ಲರೂ ಸೇರಿಕೊಂಡು ಸಾಮರಸ್ಯದಿಂದ ಆಚರಿಸಿದ್ದೇವೆ. ಹಾಗಾಗಿ ರಾಜ್ಯೋತ್ಸವ ದಿನ ಬಿಟ್ಟು, ಬೇರೆ ದಿನಗಳಂದು ನೀವು ಹೋರಾಟ ಮಾಡಬೇಕು’ ಎಂದ ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಎಂಇಎಸ್ ಮುಖಂಡರು, ‘ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿದೆ. ನಮಗೆ ನ್ಯಾಯ ಕೋರಿ ಬಹಳ ವರ್ಷಗಳಿಂದ ನಾವು ರಾಜ್ಯೋತ್ಸವ ದಿನದಂದೇ ಕರಾಳ ದಿನ ಆಚರಿಸುತ್ತಿದ್ದೇವೆ. ಹಾಗಾಗಿ ನಮಗೆ ಅನುಮತಿ ಕೊಡಲೇಬೇಕು’ ಎಂದು ಪಟ್ಟು ಹಿಡಿದರು. 

ಆಗ ಪ್ರತಿಕ್ರಿಯಿಸಿದ ಮೊಹಮ್ಮದ್‌ ರೋಷನ್‌, ‘ನಾನು ನಿಮ್ಮ ಭಾವನೆ ಗೌರವಿಸುತ್ತೇನೆ. ಆದರೆ, ಬೆಳಗಾವಿ ನಗರದಲ್ಲಿ ಭಾಷಾ ಸಾಮರಸ್ಯ ಕಾಪಾಡುವುದು ಬಹಳ ಮುಖ್ಯವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟರೆ, ಸುಪ್ರೀಂ ಕೋರ್ಟ್ ನನ್ನನ್ನೇ ಕೇಳುತ್ತದೆ. ಇಲ್ಲಿ ಪ್ರತಿ ರಾಜ್ಯೋತ್ಸವದಲ್ಲಿ 2 ಸಾವಿರ ಪ್ರಕರಣ ದಾಖಲಾಗುತ್ತವೆ.‌ ಹಾಗಾಗಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನನ್ನ ಮೇಲಿದೆ. ನನ್ನ ನಿರ್ಧಾರಕ್ಕೆ ನೀವು ಸಹಮತ ವ್ಯಕ್ತಪಡಿಸಬೇಕು’ ಎಂದರು. 

ಮುಖಂಡರಾದ ಮನೋಹರ ಕಿಣೇಕರ, ಮಾಲೋಜಿರಾವ್‌ ಅಷ್ಟೇಕರ, ವಿಕಾಸ ಕಲಘಟಗಿ ಇತರರಿದ್ದರು.

‘ರಾಜ್ಯೋತ್ಸವದ ಭವ್ಯ ಮೆರವಣಿಗೆ’

‘ಬೆಳಗಾವಿಯಲ್ಲಿ ನವೆಂಬರ್‌ 1ರಂದು ಕರ್ನಾಟಕ ರಾಜ್ಯೋತ್ಸವದ ಭವ್ಯ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ’ ಎಂದು  ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಂದು ರಾಣಿ ಚನ್ನಮ್ಮನ ವೃತ್ತದಲ್ಲಿ ಮೆರವಣಿಗೆ ವೀಕ್ಷಣೆಗಾಗಿ ಮಹಿಳೆಯರಿಗೆ ಗ್ಯಾಲರಿ ನಿರ್ಮಿಸಲಾಗುವುದು. ಜನರ ಸಹಕಾರದೊಂದಿಗೆ ರಾಜ್ಯೋತ್ಸವ ಆಚರಣೆಗೆ ಅನುದಾನದ ಕೊರತೆ ಇಲ್ಲ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.