ADVERTISEMENT

ಬೆಳಗಾವಿ: ಬೆಂಗಳೂರಿನಲ್ಲಿ ಸಣ್ಣ ಹೋಟೆಲ್‌ ನಡೆಸುತ್ತಿರುವವರ ಪುತ್ರಿ 4 ಚಿನ್ನದ ಪದಕ

ಇಮಾಮ್‌ಹುಸೇನ್‌ ಗೂಡುನವರ
Published 8 ಮಾರ್ಚ್ 2024, 6:04 IST
Last Updated 8 ಮಾರ್ಚ್ 2024, 6:04 IST
<div class="paragraphs"><p>ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 23ನೇ ವಾರ್ಷಿಕ ಘಟಿಕೋತ್ಸವ–2ರಲ್ಲಿ ನಾಲ್ಕು ಚಿನ್ನದ ಪದಕ ಗಳಿಸಿದ ಬೆಂಗಳೂರಿನ ಸಿಎಂಆರ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಎಂಬಿಎ ವಿಭಾಗದ ವಿದ್ಯಾರ್ಥಿನಿ ಜಿ.ತನು ಹೆತ್ತವರೊಂದಿಗೆ ಸಂಭ್ರಮಿಸಿದ್ದು ಹೀಗೆ</p></div>

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 23ನೇ ವಾರ್ಷಿಕ ಘಟಿಕೋತ್ಸವ–2ರಲ್ಲಿ ನಾಲ್ಕು ಚಿನ್ನದ ಪದಕ ಗಳಿಸಿದ ಬೆಂಗಳೂರಿನ ಸಿಎಂಆರ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಎಂಬಿಎ ವಿಭಾಗದ ವಿದ್ಯಾರ್ಥಿನಿ ಜಿ.ತನು ಹೆತ್ತವರೊಂದಿಗೆ ಸಂಭ್ರಮಿಸಿದ್ದು ಹೀಗೆ

   

– ಪ್ರಜಾವಾಣಿ ಚಿತ್ರ:ಏಕನಾಥ ಅಗಸಿಮನಿ

ಬೆಳಗಾವಿ: ‘₹50 ಸಾವಿರ ಬಂಡವಾಳ ಹಾಕಿ, ಬೆಂಗಳೂರಿನಲ್ಲಿ ಸಣ್ಣ ಹೋಟೆಲ್‌ ನಡೆಸುತ್ತಿರುವೆ. ನಾನು ಓದಿದ್ದು 6ನೇ ತರಗತಿ. ಪತ್ನಿ 10ನೇ ತರಗತಿ. ಇಬ್ಬರೂ ಕಾಲೇಜು ಮೆಟ್ಟಿಲೇರಿಲ್ಲ. ಪುತ್ರಿ ಚಿನ್ನದ ಪದಕ ಗಳಿಸಿದ್ದನ್ನು ನೋಡಲು ಮೊದಲ ಬಾರಿ ವಿಶ್ವವಿದ್ಯಾಲಯ ಮೆಟ್ಟಿಲೇರಿದ್ದೇವೆ. ಮಗಳ ಸಾಧನೆ ನಮ್ಮ ನೋವನ್ನೆಲ್ಲ ಮರೆಸಿದೆ’

ADVERTISEMENT

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ 23ನೇ ವಾರ್ಷಿಕ ಘಟಿಕೋತ್ಸವ–2ರಲ್ಲಿ 4 ಚಿನ್ನದ ಪದಕಗಳ ಗೌರವಕ್ಕೆ ಪಾತ್ರರಾದ ಬೆಂಗಳೂರಿನ ಸಿಎಂಆರ್‌ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ ಎಂಬಿಎ ವಿಭಾಗದ ವಿದ್ಯಾರ್ಥಿನಿ ಜಿ.ತನು ಅವರ ತಂದೆ ಗೋಪಿ ಮತ್ತು ಮಂಗಲಾ ‘ಪ್ರಜಾವಾಣಿ’ ಜೊತೆ ಸಂಭ್ರಮ ಹಂಚಿಕೊಂಡಿದ್ದು ಹೀಗೆ.

‘ನಾವು ಚಿಕ್ಕಬಳ್ಳಾಪುರದವರು. ಕಷ್ಟದ ಮಧ್ಯೆ ಹೆತ್ತವರು ಕಲಿಕೆಗೆ ಪ್ರೋತ್ಸಾಹಿಸಿದ್ದರು. ಹೆಚ್ಚಿನ ಅಂಕ ಪಡೆಯುವಂತೆ ಒತ್ತಡ ಹೇರಿರಲಿಲ್ಲ. ಎಂಬಿಎನಲ್ಲಿ ಮೊದಲ ರ್‍ಯಾಂಕ್‌ ಸಿಗುತ್ತದೆ ಎಂಬ ನಿರೀಕ್ಷೆ ಇರಲಿಲ್ಲ. ಈ ಸಾಧನೆಯನ್ನು ಹೆತ್ತವರು, ಉಪನ್ಯಾಸಕ ಬಳಗಕ್ಕೆ ಅರ್ಪಿಸುತ್ತೇನೆ’ ಎಂದು ತನು ಹೇಳಿದರು. ಅವರು ರಿಸರ್ಚ್‌ ಅನಾಲಿಸ್ಟ್‌ ಆಗಿದ್ದಾರೆ. ಈ ಕೆಲಸದ ಜೊತೆಗೆ ಉನ್ನತ ವ್ಯಾಸಂಗಕ್ಕೆ ತಯಾರಿ ನಡೆಸಿದ್ದಾರೆ.

ಮೂರು ಪದಕಕ್ಕೆ ಮುತ್ತಿಕ್ಕಿದ ಪೂಜಾ: ‘ಸರ್ಕಾರಿ ಕಾಲೇಜುಗಳಲ್ಲಿ ಓದಲು ಕೆಲವರು ಹಿಂಜರಿಯುತ್ತಾರೆ. ಅಲ್ಲಿ ಏನೂ ಕಲಿಸಲ್ಲ ಎಂಬುದು ಅವರ ಕಲ್ಪನೆ. ಆದರೆ, ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸ್ವಯಂ ಅಧ್ಯಯನಕ್ಕೆ ಹೆಚ್ಚಿನ ಅವಕಾಶ ಸಿಗುತ್ತದೆ. ಉಪನ್ಯಾಸಕರೂ ಪ್ರೋತ್ಸಾಹಿಸುತ್ತಾರೆ. ಆರ್ಥಿಕತೆ ದೃಷ್ಟಿಯಿಂದಲೂ ಉತ್ತಮ. ಮೂರು ಚಿನ್ನದ ಪದಕ ಸಿಕ್ಕಿದ್ದಕ್ಕೆ ಖುಷಿಯಾಗಿದೆ’ ಎಂದರು ದಾವಣಗೆರೆಯ ಯುಬಿಡಿಟಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನ  ಎಂ.ಟೆಕ್‌ ಇನ್‌ ಪವರ್‌ಸಿಸ್ಟಮ್‌ ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಎಂ.ಪೂಜಾ.

ಸದ್ಯ ಬಹುರಾಷ್ಟ್ರೀಯ ಕಂಪನಿಯಲ್ಲಿ ಸಾಫ್ಟ್‌ವೇರ್‌ ಡೆವಲಪರ್‌ ಆಗಿದ್ದಾರೆ. ಅಲ್ಲಿಯೇ ಕೆಲಸ ಮುಂದುವರಿಸುವ ಜತೆಗೆ, ಪಿಎಚ್‌.ಡಿ ಮಾಡುವ ಕನಸು ಅವರದ್ದು. ಅವರ ತಂದೆ ಮಂಜುನಾಥ ನಿವೃತ್ತ ಶಿಕ್ಷಕ. ತಾಯಿ ಅಂಬುಜಾಕ್ಷಿ ಗೃಹಿಣಿ.

3 ಪದಕ: ‘ನಮ್ಮ ಕಾಲೇಜಿನಲ್ಲಿ ಚಿನ್ನದ ಪದಕ ಪಡೆಯುತ್ತಿರುವ ಮೊದಲಿಗಳು ನಾನೇ. ಇತಿಹಾಸ ಸೃಷ್ಟಿಸಿದ ಖುಷಿ ಇದ್ದು, 3 ಚಿನ್ನದ ಸಿಕ್ಕಿದ್ದಕ್ಕೆ ಸಂತಸವಾಗಿದೆ. ಕ್ಯಾಂಪಸ್‌ ಸಂದರ್ಶನವೊಂದರಲ್ಲಿ ಕೆಲಸ ಸಿಕ್ಕಿದೆ. ಆಫರ್‌ ಲೆಟರ್‌ಗಾಗಿ ಕಾಯುತ್ತಿದ್ದೇನೆ’ ಎಂದು ಹುಬ್ಬಳ್ಳಿಯ ಕೆಎಲ್‌ಇ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಎಂಸಿಎ ವಿಭಾಗದ ವಿದ್ಯಾರ್ಥಿನಿ ಅಕ್ಷತಾ ನಾಯ್ಕ ಹೇಳಿದರು. ಟೇಲರ್‌ ಶ್ರೀಧರ ಪುತ್ರಿಯಾಗಿರುವ ಅವರಿಗೆ ಭವಿಷ್ಯದಲ್ಲಿ ಐಟಿ ಕಂಪನಿಯಲ್ಲೇ ಬದುಕು ಕಟ್ಟಿಕೊಳ್ಳುವ ತವಕ.

‘ನಾನು ದಾವಣಗೆರೆಯ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಉಪನ್ಯಾಸಕಿಯಾಗಿದ್ದೇನೆ. 12 ವರ್ಷ ಶೈಕ್ಷಣಿಕ ಬಿಡುವು ಪಡೆದ ನಂತರವೂ, ಎಂ.ಟೆಕ್‌ ಇನ್‌ ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯುನಿಕೇಷನ್‌ ಎಂಜಿನಿಯರಿಂಗ್‌ ವ್ಯಾಸಂಗ ಮುಂದುವರಿಸಿದ್ದೆ. ಪತಿ ಮತ್ತು ಹೆತ್ತವರ ಪ್ರೋತ್ಸಾಹದಿಂದ ಉತ್ತಮ ಅಂಕ ಗಳಿಕೆ ಸಾಧ್ಯವಾಗಿದೆ’ ಎಂದು ಎರಡು ಚಿನ್ನದ ಪದಕ ಗಳಿಸಿದ ದಾವಣಗೆರೆಯ ಯುಬಿಡಿಟಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ನ ಎ.ಎಸ್‌.ನಿತ್ಯಾ ತಿಳಿಸಿದರು.

ಬೆಳಗಾವಿಯ ಎಸ್‌.ಜಿ.ಬಾಳೇಕುಂದ್ರಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಕ್ರಾಂತಿ ಮೋರೆ, ಚಿಕ್ಕಮಗಳೂರಿನ ಆದಿಚುಂಚನ ಗಿರಿ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಚೇತನ ಎಚ್‌.ಪಿ. ತಲಾ 2 ಚಿನ್ನದ ಪದಕ ಗಳಿಸಿದರು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 23ನೇ ವಾರ್ಷಿಕ ಘಟಿಕೋತ್ಸವ–2ರಲ್ಲಿ ಚಿನ್ನದ ಪದಕ ಗಳಿಸಿದ ವಿದ್ಯಾರ್ಥಿಗಳಾದ ಕ್ರಾಂತಿ ಮೋರೆ ಚೇತನ ಎಚ್‌.ಪಿ. ತನು ಜಿ. ಅಕ್ಷತಾ ನಾಯಕ ಪೂಜಾ ಎಂ. ನಿತ್ಯಾ ಎ.ಎಸ್‌. ಸಂಭ್ರಮ –

ಪದವಿ ಪ್ರದಾನ ಈ ಘಟಿಕೋತ್ಸವದಲ್ಲಿ 4514 ಎಂಬಿಎ 4024 ಎಂಸಿಎ 920 ಎಂ.ಟೆಕ್‌ 44 ಎಂ.ಆರ್ಚ್‌ 27 ಎಂ.ಪ್ಲ್ಯಾನ್‌ ಪದವಿ 667 ಪಿಎಚ್‌.ಡಿ‌ 2 ಎಂ.ಎಸ್ಸಿ ಎಂಜಿನಿಯರಿಂಗ್‌ ಬೈ ರಿಸರ್ಚ್‌ ಹಾಗೂ 2 ಇಂಟಿಗ್ರೇಟೆಡ್‌ ಡ್ಯುಯೆಲ್‌ ಡಿಗ್ರಿ ಟು ರಿಸರ್ಚ್‌ ಸಂಶೋಧನಾ ಪದವಿಗಳನ್ನು ಪ್ರದಾನ ಮಾಡಲಾಯಿತು. ‘ನಾನು ವಿವಿಧ ವಿಶ್ವವಿದ್ಯಾಲಯಗಳ ಘಟಿಕೋತ್ಸವದಲ್ಲಿ ಭಾಗವಹಿಸಿದ್ದೇನೆ. ಇಷ್ಟೊಂದು ಜನರಿಗೆ ಸಂಶೋಧನಾ ಪದವಿ ನೀಡುತ್ತಿರುವುದನ್ನು ಮೊದಲ ಬಾರಿ ವೀಕ್ಷಿಸುತ್ತಿದ್ದೇನೆ. ಇದೊಂದು ದಾಖಲೆ’ ಎಂದು ರಾಜ್ಯಪಾಲ ಥಾವರಚಂದ ಗೆಹ್ಲೋತ್‌ ಹೇಳಿದರು. ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್‌ ಸೆಲ್ಕೋ ಫೌಂಡೇಷನ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರೀಶ ಹಂದೆ ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.