ADVERTISEMENT

ಬೆಳಗಾವಿ: ಪ್ರವಾಹ ಪ್ರದೇಶ ವೀಕ್ಷಿಸಿದ ಜಿಲ್ಲಾಧಿಕಾರಿ

ಪರಿಹಾರ ಕೇಂದ್ರಗಳಲ್ಲಿ ಎಲ್ಲ ವ್ಯವಸ್ಥೆ ಕಲ್ಪಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 17:18 IST
Last Updated 17 ಆಗಸ್ಟ್ 2020, 17:18 IST
ಗೋಕಾಕ ಹೊರವಲಯದ ಲೊಳಸೂರ ಸೇತುವೆ ಜಲಾವೃತವಾಗಿರುವುದನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ  ವೀಕ್ಷಿಸಿದರು
ಗೋಕಾಕ ಹೊರವಲಯದ ಲೊಳಸೂರ ಸೇತುವೆ ಜಲಾವೃತವಾಗಿರುವುದನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ  ವೀಕ್ಷಿಸಿದರು   

ಬೆಳಗಾವಿ: ಜಿಲ್ಲೆಯ ವಿವಿಧೆಡೆ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೋಮವಾರ ವೀಕ್ಷಿಸಿದರು. ಮಲಪ್ರಭಾ ನದಿ ತೀರದ ವಿವಿಧ ಗ್ರಾಮಗಳು ಮತ್ತು ಮುಂಜಾಗ್ರತಾ ಕ್ರಮವಾಗಿ ಆರಂಭಿಸಲಾಗಿರುವ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಸವದತ್ತಿ ತಾಲ್ಲೂಕಿನ ನವೀಲುತೀರ್ಥ ಜಲಾಶಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ನೀರಿನ ಒಳ ಹರಿವು ಮತ್ತು ಹೊರ ಹರಿವು ಪ್ರಮಾಣದ ಮಾಹಿತಿಯನ್ನು ಪಡೆದುಕೊಂಡರು. ‘ಜಲಾಶಯದ ನೀರಿನ ಮಟ್ಟದ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು. ನೀರು ಬಿಡುಗಡೆಗಿಂತ ಮುಂಚೆ ನದಿ ತೀರದ ಜನರಿಗೆ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ಮುಂಚಿತವಾಗಿ ನೀಡಬೇಕು’ ಎಂದು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನವೀಲುತೀರ್ಥ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣಾಜಿರಾವ್ ಉಪಸ್ಥಿತರಿದ್ದರು.

ADVERTISEMENT

ಬೈಲಹೊಂಗಲ ಪಟ್ಟಣದ ಕೆಲ ಪ್ರದೇಶಗಳಲ್ಲಿ ಸುತ್ತಾಡಿದ ಜಿಲ್ಲಾಧಿಕಾರಿ, ನೆರೆಹಾವಳಿಯಿಂದ ಉಂಟಾಗುವ ಸಮಸ್ಯೆಗಳ ಕುರಿತು ಪರಿಶೀಲನೆ ಕೈಗೊಂಡರು. ನಯಾನಗರ ಸೇತುವೆ ವೀಕ್ಷಿಸಿದರು.

ಪರಿಹಾರ ಕೇಂದ್ರ:

‘ಮಲಪ್ರಭಾ ನದಿ ತೀರದ ರಾಮದುರ್ಗ ತಾಲ್ಲೂಕಿನ ಹಿರೇ ಹಂಪಿಹೊಳಿ ಹಾಗೂ ಚಿಕ್ಕ ಹಂಪಿಹೊಳಿ ಗ್ರಾಮದ 51 ಕುಟುಂಬಗಳನ್ನು ಮುಂಜಾಗ್ರತಾ ಕ್ರಮವಾಗಿ ಸುರೇಬಾನದ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಸುರೇಬಾನದ ಎಪಿಎಂಸಿ ಆವರಣದ ಕೇಂದ್ರದಲ್ಲಿ 12 ಕುಟುಂಬಗಳು ಮತ್ತು ಪ್ರೌಢಶಾಲೆಯಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರದಲ್ಲಿ 39 ಕುಟುಂಬಗಳಿಗೆ ಆಶ್ರಯ ಕಲ್ಪಿಸಲಾಗಿದೆ. ಈ ಕುಟುಂಬಗಳಿಗೆ ಊಟೋಪಹಾರ ಸೇರಿದಂತೆ ಕೋವಿಡ್-19 ಹಿನ್ನೆಲೆಯಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕೂಡ ಒದಗಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

'ಪರಿಹಾರ ಕೇಂದ್ರಗಳನ್ನು ವೀಕ್ಷಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಪರಿಹಾರ ಕೇಂದ್ರಗಳಲ್ಲಿ ಇರುವವರಿಗೆ ಮಾಸ್ಕ್, ಸ್ಯಾನಿಟೈಸರ್, ಪಲ್ಸ್ ಆಕ್ಸಿಮೀಟರ್ ಮತ್ತಿತರ ಅಗತ್ಯ ಉಪಕರಣ ನೀಡಲಾಗಿದ್ದು, ಪ್ರತಿ ಪರಿಹಾರ ಕೇಂದ್ರಕ್ಕೆ ವೈದ್ಯರ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು ಸೇರಿದಂತೆ ಐದು ಜನರ ಪ್ರತ್ಯೇಕ ತಂಡ ನಿಯೋಜಿಸಲಾಗಿದೆ' ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ‘ಪರಿಹಾರ ಕೇಂದ್ರಗಳಲ್ಲಿ ಆಸರೆ ಪಡೆದುಕೊಂಡಿರುವ ಕುಟುಂಬಗಳಿಗೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ಕ್ರಮ ಕೈಗೊಳ್ಳಬೇಕು. ಕಳೆದ ವರ್ಷದ ಸಂತ್ರಸ್ತರಿಗೆ ಬಾಕಿ ಉಳಿದಿರುವ ಪರಿಹಾರದ ಹಣವನ್ನು ತಕ್ಷಣ ನೀಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ರೀತಿ ರಾಮದುರ್ಗ ತಾಲ್ಲೂಕಿನ ಗೊನ್ನಾಗರದಲ್ಲಿರುವ ಪರಿಹಾರ ಕೇಂದ್ರಕ್ಕೂ ಭೇಟಿ ನೀಡಿದ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು, ಅಲ್ಲಿನ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.

ಈ ಕೇಂದ್ರದಲ್ಲಿ 48 ಕುಟುಂಬಗಳ 200ಕ್ಕೂ ಅಧಿಕ ಜನರು ಆಶ್ರಯ ಪಡೆದುಕೊಂಡಿದ್ದಾರೆ. ಪರಿಹಾರ ಕೇಂದ್ರದಲ್ಲಿನ ವ್ಯವಸ್ಥೆಯ ಕುರಿತು ಗ್ರಾಮಸ್ಥರಿಂದಲೂ ಮಾಹಿತಿಯನ್ನು ಪಡೆದುಕೊಂಡರು.

‘ಸದ್ಯಕ್ಕೆ ಪ್ರವಾಹ ಸ್ಥಿತಿ ಎದುರಾಗಿಲ್ಲ. ಆದಾಗ್ಯೂ ಮುಂಜಾಗ್ರತಾ ಕ್ರಮವಾಗಿ ನದಿತೀರದ ಕೆಲ ಗ್ರಾಮಗಳ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.