ADVERTISEMENT

ಕುಂದಾನಗರಿಯಲ್ಲಿ ಸಂಭ್ರಮದ ದೀಪಾವಳಿ; ಗೌಳಿಗರಿಂದ ಎಮ್ಮೆಗಳ ‘ಫ್ಯಾಷನ್ ಷೋ’

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2020, 14:55 IST
Last Updated 16 ನವೆಂಬರ್ 2020, 14:55 IST
   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನು ಜನರು ಸಂಭ್ರಮದಿಂದ ಆಚರಿಸಿದರು.

ಬಹುತೇಕ ಮನೆಗಳ ಎದುರು ವಿವಿಧ ವಿನ್ಯಾಸದ ಆಕಾಶಬುಟ್ಟಿಗಳು ಬೆಳಕು ಚೆಲ್ಲುತ್ತಾ ಕಂಗೊಳಿಸುತ್ತಿವೆ. ವೈವಿಧ್ಯದಿಂದ ಕೂಡಿದ್ದ ರಂಗೋಲಿಗಳು ಆಕರ್ಷಿಸಿದವು. ಹಣತೆಗಳು ಹಬ್ಬದ ಮೆರುಗು ಹೆಚ್ಚಿಸಿದವು.

ನಗರವೂ ಸೇರಿದಂತೆ ಬೆಳಗಾವಿ, ಖಾನಾಪುರ, ನಿಪ್ಪಾಣಿ ಮೊದಲಾದ ತಾಲ್ಲೂಕುಗಳಲ್ಲಿ ಮಕ್ಕಳು ಆಯಾ ಬಡಾವಣೆಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯ ಬಿಂಬಿಸುವ ಕೋಟೆಗಳ ಮಾದರಿಗಳನ್ನು ಮಾಡಿದ್ದು ಗಮನಸೆಳೆಯಿತು. ಕೆಲವು ಕೋಟೆಗಳ ಮಾದರಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿದ್ದು ಆಕರ್ಷಿಸಿತು.

ADVERTISEMENT

ಗೌಳಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿರುವ ಗೌಳಿ ಗಲ್ಲಿ ಮೊದಲಾದ ಕಡೆಗಳಲ್ಲಿ ಆ ಸಮಾಜದವರು ಎಮ್ಮೆಗಳನ್ನು ಅಲಂಕರಿಸಿ ಮೆರವಣಿಗೆ ನಡೆಸಿದರು. ಯುವಕರು ದ್ವಿಚಕ್ರವಾಹನಗಳಲ್ಲಿ ಕರ್ಕಶ ಶಬ್ದ ಮಾಡುತ್ತಾ ಎಮ್ಮೆ ಹಾಗೂ ಕೋಣಗಳನ್ನು ಬೆದರಿಸುತ್ತಾ ಓಡಿಸುತ್ತಾ ಸಂಭ್ರಮಿಸಿದರು. ಜನರು ಎಮ್ಮೆಗಳ ಫ್ಯಾಷನ್ ಷೋ ಮಾದರಿಯ ಮೆರವಣಿಗೆ ಕಣ್ತುಂಬಿಕೊಂಡರು. ಹೈನುಗಾರಿಕೆಯನ್ನೇ ನಂಬಿರುವ ತಮಗೆ ಆರ್ಥಿಕ ಶಕ್ತಿ ತಂದುಕೊಡುವ ಎಮ್ಮೆಗಳನ್ನು ಗೌಳಿಗರು ಈ ರೀತಿ ಮೆರವಣಿಗೆ ನಡೆಸಿ ಪೂಜಿಸುವುದು, ಈ ಮೂಲಕ ಧನ್ಯತಾ ಭಾವ ಮೆರೆಯುವುದು ಇಲ್ಲಿನ ಸಂಪ್ರದಾಯ. ಮೆರವಣಿಗೆಗೆ ಚವಾಟ ಗಲ್ಲಿಯಲ್ಲಿ ಶಾಸಕ ಅನಿಲ ಬೆನಕೆ ಅವರು ಅಲಂಕೃತ ಎಮ್ಮೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಮೂಡಲಗಿ ಭಾಗದಲ್ಲಿ ಹಾಲುಮತಸಮಾಜದವರು ಕುರಿಗಳನ್ನು ಬೆದರಿಸುವ ಸ್ಪರ್ಧೆಯನ್ನು ಸಂಭ್ರಮದಿಂದ ನಡೆಸಿದರು.

ಕೋವಿಡ್-19 ಭೀತಿ ಕಾರಣದಿಂದಾಗಿ ಈ ಬಾರಿ ಪಟಾಕಿಗಳಿಗೆ ಅವಕಾಶ ಇರಲಿಲ್ಲ. ಆದರೂ ಅಲ್ಲಲ್ಲಿ ಪಟಾಕಿಗಳನ್ನು ಸುಡುವುದು ಕಂಡುಬಂತು. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪಟಾಕಿಗಳ ಅಬ್ಬರ ತಗ್ಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.