ಬೆಳಗಾವಿ: ನಗರದಲ್ಲಿ ದಂಡು ಮಂಡಳಿ ವ್ಯಾಪ್ತಿಯಡಿ ಬರುವ ನಾಗರಿಕ ಕ್ಷೇತ್ರವನ್ನು ಮಹಾನಗರ ಪಾಲಿಕೆಗೆ ಹಸ್ತಾಂತರಿಸುವ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೊಂದಿಗೆ ಸಂಸದ ಶೆಟ್ಟರ್ ಬುಧವಾರ ಚರ್ಚೆ ನಡೆಸಿದರು.
ನವ ದೆಹಲಿಯಲ್ಲಿ ರಾಜನಾಥ ಸಿಂಗ್ ಅವರನ್ನು ಭೇಟಿ ಮಾಡಿದ ಶೆಟ್ಟರ್, ‘ರಕ್ಷಣಾ ಸಚಿವಾಲಯದ ಆದೇಶದಂತೆ ಬೆಳಗಾವಿ ದಂಡು ಮಂಡಳಿ ವ್ಯಾಪ್ತಿಯಡಿ ಬರುವ ನಾಗರಿಕ ಕ್ಷೇತ್ರವನ್ನು ಗುರುತಿಸಲಾಗಿದೆ. ಇದನ್ನು ಶೀಘ್ರ ಮಹಾನಗರ ಪಾಲಿಕೆ ಬೆಳಗಾವಿಗೆ ಹಸ್ತಾಂತರಿಸುವ ಕ್ರಮ ಕೈಗೊಳ್ಳಬೇಕು. ಇದರ ಸಮಗ್ರ ಮಾಹಿತಿಯನ್ನು ಈಗಾಗಲೇ ಕರ್ನಾಟಕ ರಾಜ್ಯದ ಮುಖ್ಯ ಕಾರ್ಯದರ್ಶಿಗಳು, ನವ ದೆಹಲಿ ರಕ್ಷಣಾ ಇಲಾಖೆ ಕಾರ್ಯದರ್ಶಿ ಅವರಿಗೆ ಕಳುಹಿಸಲಾಗಿದೆ’ ಎಂದು ಮನವರಿಕೆ ಮಾಡಿದರು.
ಬೆಳಗಾವಿಯಲ್ಲಿ ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಮಾಡುವ ಕೈಗಾರಿಕೆಗಳನ್ನು ಸ್ಥಾಪಿಸಲು ಜಮೀನು ಇತ್ಯಾದಿಗಳ ಸೌಲಭ್ಯ ಲಭ್ಯವಿರುವ ಪ್ರಯುಕ್ತ ಈ ನಿಟ್ಟಿನಲ್ಲಿಯೂ ಸಹ ವಿಷಯವನ್ನು ಅವಲೋಕಿಸುವಂತೆ ಕೋರಿದರು.
ಪ್ರಸ್ತಾಪಿತ ವಿಷಯಗಳ ಕುರಿತು ಅವಲೋಕಿಸಿ, ಶೀಘ್ರ ಕ್ರಮವನ್ನು ಜರುಗಿಸುವುದಾಗಿ ಕೇಂದ್ರ ರಕ್ಷಣಾ ಸಚಿವ ಭರವಸೆ ನೀಡಿದ್ದಾರೆ ಎಂದು ಶೆಟ್ಟರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.