ADVERTISEMENT

ಗುಡಗೇರಿ: ಅವಸಾನದತ್ತ ಹರಿಜಗೇರಿ ಕೆರೆ

ಗ್ರಾಮದ ಜಲಮೂಲವಾಗಿದ್ದ ಏಳು ಕೆರೆಗಳಲ್ಲಿ ಕೊನೆಗೆ ಉಳಿದಿದ್ದು ಒಂದೇ ಕೆರೆ

ವಾಸುದೇವ ಮುರಗಿ
Published 25 ಮಾರ್ಚ್ 2025, 5:12 IST
Last Updated 25 ಮಾರ್ಚ್ 2025, 5:12 IST
ಗುಡಗೇರಿಯ ಹರಿಜಗೇರಿ ಕೆರೆ
ಗುಡಗೇರಿಯ ಹರಿಜಗೇರಿ ಕೆರೆ   

ಗುಡಗೇರಿ: ಬಾದಾಮಿ ಚಾಲುಕ್ಯರ ಕಾಲದಲ್ಲಿ ಗುಡಗೇರಿ ಸುತ್ತಮುತ್ತಲು ಏಳು ಕೆರೆಗಳಿದ್ದು, ಅವೆಲ್ಲ ಕಣ್ಮರೆಗೊಂಡಿದೆ. ಇರುವ ಹರಿಜಗೇರಿ ಕೆರೆಗೆ ಸೂಕ್ತ ಸಂರಕ್ಷಣೆ ಇಲ್ಲದೆ, ಅಭಿವೃದ್ಧಿ ಕಾಣದೆ ಕುಡುಕರ ತಾಣವಾಗಿದೆ.

ಗ್ರಾಮದ ಹಿರಿಯರು ಜನರಿಗಾಗಿ ಹರಜಗೇರಿ, ಕೋಟೆ ಹೊಂಡ, ಸಿದ್ದನ ಹೊಂಡ ಸೇರಿದಂತೆ ಏಳು ಕೆರೆಗಳನ್ನು ನಿರ್ಮಿಸಿದ್ದರು. ಈ ಜಲ ಮೂಲಗಳು ನೀರಿನ ದಾಹ ಇಂಗಿಸುತ್ತಿದ್ದವು. ಕೊಳವೆ ಬಾವಿಗಳು ಬಂದ ನಂತರ ಕೆರೆಗಳ ನಿರ್ಲಕ್ಷಕ್ಕೊಳಗಾಗಿ ಕಣ್ಮರೆಗೂಂಡಿವೆ. ಗ್ರಾಮದಲ್ಲಿ ಇರುವ ಕೋಟೆ ಹೊಂಡ, ಸಿದ್ದನ ಹೊಂಡ ತನ್ನ ಸ್ವರೂಪವನ್ನೇ ಕಳೆದುಕೊಂಡು ಅವನತಿ ಕಂಡಿವೆ.

ಈಗ ಇರುವ ಹರಿಜಗೇರಿ ಸುಮಾರು 12 ಎಕರೆ ವಿಸ್ತೀರ್ಣ ಹೊಂದಿದ್ದು ಈಗಲೂ ಮೈದುಂಬಿ ಕೊಂಡಿದೆ. ಸಂರಕ್ಷಣೆ ಇಲ್ಲದೆ ಇರುವುದರಿಂದ ಕೆರೆಯ ದಂಡೆ ಮೇಲೆ ಮುಳ್ಳಿನ ಕಂಠಿ ಬೆಳೆದು ನೀರು ಮಲಿನಗೊಂಡಿದೆ. ಇನ್ನೊಂದೆಡೆ ಮದ್ಯಪಾನಿಗಳು  ಕೆರೆ ದಡವನ್ನು ತಮ್ಮ ಅಡ್ಡ ಮಾಡಿಕೊಂಡು ಮದ್ಯದ ಬಾಟಲಿಗಳನ್ನು ಅಲ್ಲಲ್ಲೇ ಬಿಸಾಡುತ್ತಿದ್ದಾರೆ. ಮಕ್ಕಳು ಕೆರೆಯಲ್ಲಿ ಈಜುವುದರಿಂದ ನೀರು ಕಲುಷಿತವಾಗುತ್ತಿದ್ದು, ಸ್ಥಳೀಯ ಆಡಳಿತ ಮಾತ್ರ ಗಮನ ಹರಿಸುತ್ತಿಲ್ಲ.

ADVERTISEMENT

ಈ ಕುರಿತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೆಂಕನಗೌಡ ಹಿರೇಗೌಡ್ರ ‘ಪ್ರಜಾವಾಣಿ’ ಜೊತೆ ಮಾತನಾಡಿ, ‘ಮೊದಲು ಒಬ್ಬ ಕಾವಲುಗಾರನ್ನು ನೇಮಿಸಿ ಕೆರೆ ಕಾಯುವುದರೊಂದಿಗೆ ಕೆರೆಯ ಸ್ವಚ್ಛತೆಯನ್ನು ಕಾಪಾಡಲಾಗುತ್ತಿತ್ತು. ಈಗ ಕಾವಲು ಗಾರು ಇಲ್ಲದಿರುವುದರಿಂದ ಕೆರೆ ಮಲಿನಗೊಂಡಿದೆ. ಕಾವಲುಗಾರರನ್ನು ನೇಮಿಸಬೇಕು’ ಎಂದು ಒತ್ತಾಯಿಸಿದರು.

ಏಳು ಕೆರೆಗಳಲ್ಲಿ ಉಳಿದಿರುವುದು ಹರಿಜಗೇರಿ ಮಾತ್ರ. ಈ ಕೆರೆಯನ್ನು ನಿರ್ಲಕ್ಷಿಸಿದರೆ ಗ್ರಾಮದ ಜಲ ಮೂಲಗಳೆ ಇಲ್ಲದಂತಾಗುತ್ತದೆ. ವಿದ್ಯುತ್ ಹಾಗೂ ಕೊಳವೆ ಬಾವಿಗಳು ಕೈ ಕೊಟ್ಟಾಗ ಈ ಹರಜಗೇರಿ ನೀರನ್ನೇ ಜನರು ಬಳಕೆ ಮಾಡುತ್ತಿದ್ದು, ಈ ಕೆರೆ ಹಾಳಾದರೆ ನೀರಿನ ಸಮಸ್ಯೆ ತಲೆದೋರಲಿದೆ. ಇನ್ನು ಮುಂದಾದರೂ ಸ್ಥಳೀಯ ಆಡಳಿತ ಕೆರೆ ಅಭಿವೃದ್ಧಿಯತ್ತ ಗಮನ ಹರಿಸಲಿ ಎಂಬುದು ಅವರ ಆಗ್ರಹವಾಗಿದೆ.

ಹರಿಜಗೇರಿ ಕೆರೆ ಮಲಿನಗೊಂಡಿರುವ ಬಗ್ಗೆ ದೂರುಗಳು ಬಂದಿದ್ದು ಬರುವ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ
- ಬಿ.ಎನ್. ರಾಘವೇಂದ್ರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.