ಬೆಳಗಾವಿ: ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಕೈಗಾರಿಕಾ ಉತ್ಪನ್ನಗಳು ತಯಾರಾಗುತ್ತವೆ. ಜತೆಗೆ ಕೃಷಿ ಉತ್ಪನ್ನಗಳಲ್ಲೂ ಜಿಲ್ಲೆ ಪಾರಮ್ಯ ಸಾಧಿಸಿದೆ. ಈ ಎರಡೂ ಉತ್ಪನ್ನಗಳನ್ನು ವಿದೇಶಗಳಿಗೆ ಸಾಗಣೆ ಮಾಡಲು ಸರಕು ಸಾಗಣೆ ವಿಮಾನ ಸಂಚಾರ (ಕಾರ್ಗೊ) ಆರಂಭಿಸಬೇಕು ಎಂಬ ಬೇಡಿಕೆ ಮತ್ತೆ ಕೇಳಿಬಂದಿದೆ.
1,000ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗೆಳು ಜಿಲ್ಲೆಯಲ್ಲಿವೆ. ಇಲ್ಲಿ ಉತ್ಪಾದನೆ ಆಗುವ ಹೈಡ್ರಾಲಿಕ್‌ಗಳು, ವಿವಿಧ ಆಟೊಮೊಬೈಲ್ ಮತ್ತು ಬಾಹ್ಯಾಕಾಶ ಸಂಶೋಧನೆಯ ಬಿಡಿಭಾಗಗಳು, ವಾಯುಯಾನ ಉದ್ಯಮದ ಅಗತ್ಯತೆ, ರಕ್ಷಣಾ ಉತ್ಪನ್ನಗಳನ್ನು ವಿದೇಶಕ್ಕೆ ರವಾನಿಸಲಾಗುತ್ತದೆ. ಇಲ್ಲಿ ಬೆಳೆಸಲಾಗುವ ತರಕಾರಿಗಳು, ಹಣ್ಣುಗಳಿಗೆ ವಿದೇಶದಲ್ಲಿ ಗ್ರಾಹಕರಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣದಿಂದ ದೆಹಲಿಗೆ ಮಾತ್ರ ಸರಕು ಸೇವೆ ಲಭ್ಯವಿದ್ದು, ವಿದೇಶಕ್ಕೆ ನೇರ ಸೌಲಭ್ಯ ಇಲ್ಲ. ಹೀಗಾಗಿ ರಸ್ತೆ ಮೂಲಕ ಮುಂಬೈ ಮತ್ತು ಗೋವಾದ ಮೋಪಾ ವಿಮಾನ ನಿಲ್ದಾಣಕ್ಕೆ ತೆರಳಿ, ಅಲ್ಲಿಂದ ವಿದೇಶಕ್ಕೆ ಇಲ್ಲಿನ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತದೆ. ಇದರಿಂದ ವೆಚ್ಚ ಹೆಚ್ಚಳ ಆಗುವುದು ಅಲ್ಲದೇ ದೀರ್ಘ ಸಮಯ ವ್ಯಯವಾಗುತ್ತದೆ.
‘ಬೆಳಗಾವಿ ಜಿಲ್ಲೆಯ ಕೈಗಾರಿಕಾ ಮತ್ತು ಕೃಷಿ ಉತ್ಪನ್ನಗಳ ಬಗ್ಗೆ ವಿದೇಶಿಯರಿಗೆ ಆಸಕ್ತಿ ಇದೆ. ಆದರೆ, ನೇರವಾಗಿ ವಿದೇಶಕ್ಕೆ ಸರಕು ಸಾಗಿಸಲು ಅವಕಾಶ ಇಲ್ಲದ್ದರಿಂದ ತೊಂದರೆಯಾಗುತ್ತಿದೆ. ಸಕಾಲಕ್ಕೆ ಉತ್ಪನ್ನಗಳನ್ನು ತಲುಪಿಸಲು ಆಗುತ್ತಿಲ್ಲ’ ಎಂದು ಬೆಳಗಾವಿ ವಾಣಿಜ್ಯೋದ್ಯಮ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಸಂಜೀವ ಕತ್ತಿಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸಾಂಬ್ರಾ ನಿಲ್ದಾಣದಿಂದ ವಿದೇಶಕ್ಕೆ ಸರಕು ಸಾಗಣೆ ಸೇವೆ ಆರಂಭಕ್ಕೆ ಹಲವು ವರ್ಷಗಳಿಂದ ಮನವಿ ಸಲ್ಲಿಸುತ್ತಿದ್ದೇವೆ. ವಿದೇಶಿ ಸರಕು ಸಾಗಣೆ ಸೇವೆ ಆರಂಭಿಸಿದ್ದಲ್ಲಿ, ಎಲ್ಲಾ ಸ್ವರೂಪದಲ್ಲಿ ಅನುಕೂಲ ಆಗುತ್ತದೆ. ಜಿಲ್ಲೆಯ ಪ್ರಗತಿಗೂ ಪೂರಕವಾಗುತ್ತದೆ’ ಎಂದು ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯರೂ ಆಗಿರುವ ಉದ್ಯಮಿ ಭರತ್ ದೇಶಪಾಂಡೆ ಹೇಳಿದರು.
‘ಸದ್ಯಕ್ಕೆ ನಮ್ಮ ವಿಮಾನ ನಿಲ್ದಾಣದಲ್ಲಿ ಎ-320 ವಿಮಾನ ಬಳಸಿ, ದೆಹಲಿಗೆ ಸರಕು ಸೇವೆ ಒದಗಿಸಿದ್ದೇವೆ. ವಾರ್ಷಿಕವಾಗಿ 40 ಮೆಟ್ರಿಕ್ ಟನ್ ಸರಕು ನಿರ್ವಹಿಸುತ್ತಿದ್ದೇವೆ. ಪ್ರಸ್ತುತ ಮೂರು ಪಾರ್ಕಿಂಗ್ ಬೇ ಇವೆ. ಹೊಸ ಟರ್ಮಿನಲ್ ಕಾಮಗಾರಿ ಮುಗಿದ ನಂತರ, 12 ಪಾರ್ಕಿಂಗ್ ಬೇ ಸಿಗಲಿವೆ. ಆಗ ಅಂತರರಾಷ್ಟ್ರೀಯ ಸರಕು ಸೇವೆ ಆರಂಭಿಸಲು ಪ್ರಯತ್ನಿಸಬಹುದು’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಎಸ್.ತ್ಯಾಗರಾಜನ್ ತಿಳಿಸಿದರು.
ಸಾಂಬ್ರಾ ವಿಮಾನ ನಿಲ್ದಾಣದಿಂದ ಅಂತರರಾಷ್ಟ್ರೀಯ ಕಾರ್ಗೊ ಸೇವೆ ಆರಂಭಕ್ಕೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆಜಗದೀಶ ಶೆಟ್ಟರ್ ಸಂಸದ ಬೆಳಗಾವಿ
ಅಂತರರಾಷ್ಟ್ರೀಯ ಸರಕು ಸೇವೆ ಆರಂಭಕ್ಕಾಗಿ ವಿಮಾನ ನಿಲ್ದಾಣದ ಪ್ರಾಧಿಕಾರದ ಜೊತೆ ಸಭೆ ನಡೆಸಲಾಗಿದೆ. ತ್ವರಿತವಾಗಿ ಈ ಬೇಡಿಕೆ ಈಡೇರಿಸಬೇಕುಸಂಜೀವ ಕತ್ತಿಶೆಟ್ಟಿ ಅಧ್ಯಕ್ಷ ಬೆಳಗಾವಿ ವಾಣಿಜ್ಯೋದ್ಯಮ ಮತ್ತು ಕೈಗಾರಿಕೆ ಸಂಸ್ಥೆ
ಅಂತರರಾಷ್ಟ್ರೀಯ ಸರಕು ಸೇವೆಗೆ ಬೇಡಿಕೆ ಹೆಚ್ಚಿರುವುದನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಹೊಸ ಟರ್ಮಿನಲ್ ಕೆಲಸ ಪೂರ್ಣಗೊಂಡ ನಂತರ ಅದು ಕಾರ್ಯರೂಪಕ್ಕೆ ಬರಬಹುದುಎಸ್.ತ್ಯಾಗರಾಜನ್ ನಿರ್ದೇಶಕ ಸಾಂಬ್ರಾ ವಿಮಾನ ನಿಲ್ದಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.