ADVERTISEMENT

ಕರಾಡ-ಧಾರವಾಡ ರೈಲು: ಕನಸು ನನಸಾದೀತೆ?

ಧಾರವಾಡ–ಬೆಳಗಾವಿ ರೈಲು ವಿಸ್ತರಿಸಲು ಆಗ್ರಹ

ಸುಧಾಕರ ಎಸ್.ತಳವಾರ, ಬೆಂಗಳೂರು
Published 30 ಸೆಪ್ಟೆಂಬರ್ 2020, 19:30 IST
Last Updated 30 ಸೆಪ್ಟೆಂಬರ್ 2020, 19:30 IST
ಬಿ.ಆರ್. ಸಂಗಪ್ಪಗೋಳ
ಬಿ.ಆರ್. ಸಂಗಪ್ಪಗೋಳ   

ಚಿಕ್ಕೋಡಿ: ಕರ್ನಾಟಕ-ಮಹಾರಾಷ್ಟ್ರದ ಬಹು ಬೇಡಿಕೆಯ ಕರಾಡ–ಧಾರವಾಡ ರೈಲು ಮಾರ್ಗ ಯೋಜನೆ ಗಡಿ ಭಾಗದ ಜನರ ಕನಸಾಗಿಯೇ ಉಳಿದಿದೆ.

ಕರಾಡ-ಧಾರವಾಡ (ಕೊಲ್ಹಾಪುರ, ನಿಪ್ಪಾಣಿ, ಸಂಕೇಶ್ವರ, ಬೆಳಗಾವಿ, ಕಿತ್ತೂರ ಮಾರ್ಗ) ಹೊಸ ರೈಲು ಮಾರ್ಗ ನಿರ್ಮಾಣಕ್ಕಾಗಿ 2012ರಲ್ಲಿ ರೈಲ್ವೆ ಇಲಾಖೆ ಸರ್ವೇ ಕೈಗೊಂಡಿತ್ತು. ಈಚೆಗೆ, ಧಾರವಾಡ-ಬೆಳಗಾವಿ ಹೊಸ ರೈಲು ಮಾರ್ಗಕ್ಕೆ ಸರ್ಕಾರ ಮಂಜೂರಾತಿ ನೀಡಿದೆ. ಆದರೆ, ಬೆಳಗಾವಿಯಿಂದ ಕರಾಡ ಹೊಸ ರೈಲು ಮಾರ್ಗದ ಮಂಜೂರಾತಿ ನನೆಗುದಿಗೆ ಬಿದ್ದಿದೆ. ಕೇಂದ್ರ ರೈಲ್ವೆ ಸಚಿವ ಸುರೇಶ ಅಂಗಡಿ ಅವರು ವಿಶೇಷ ಪ್ರಯತ್ನ ಮಾಡಿ ಗಡಿ ಜನರ ಬೇಡಿಕೆ ಈಡೇರಿಸುತ್ತಾರೆ ಎಂಬ ಆಶಾಭಾವ ಇಲ್ಲಿನ ಜನರಲ್ಲಿತ್ತು. ಆದರೆ, ಅವರ ಅಕಾಲಿಕ ನಿಧನದಿಂದಾಗಿ ನಿರಾಸೆ ಉಂಟಾಗಿದೆ.

ಈ ಮಾರ್ಗ ರಚನೆ ಆಗಬೇಕೆಂದು ಆಗಿನ ನಿಪ್ಪಾಣಿ ಶಾಸಕರಾಗಿದ್ದ ಕಾಕಾಸಾಹೇಬ ಪಾಟೀಲ ಪ್ರಯತ್ನಿಸಿದ್ದರು. ಯುಪಿಎ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿದ್ದ ಶರದ ಪವಾರ್‌ ಮೂಲಕ ಅಂದಿನ ಕೇಂದ್ರ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ, ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಕಾಕಾಸಾಹೇಬ ಪಾಟೀಲ ನೇತೃತ್ವದಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು.

ADVERTISEMENT

ಆಶಾಭಾವ ಮೂಡಿತ್ತು:

ಪ್ರಸ್ತಾವ ಪುರಸ್ಕರಿಸಿದ ರೈಲ್ವೆ ಇಲಾಖೆಯು 2012ರಲ್ಲಿ ಸರ್ವೇ ಪೂರ್ಣಗೊಳಿಸಿತ್ತು. ಇದರಿಂದ ಬೆಳಗಾವಿಯಿಂದ ಕರಾಡವರೆಗೆ ಹೊಸ ರೈಲು ಮಾರ್ಗ ನಿರ್ಮಾಣಗೊಳ್ಳುತ್ತದೆ ಎಂದು ಚಿಕ್ಕೋಡಿ, ಸಂಕೇಶ್ವರ, ನಿಪ್ಪಾಣಿ ಹಾಗೂ ಮಹಾರಾಷ್ಟ್ರದ ಗಡಿ ಭಾಗದ ಜನರಲ್ಲಿ ಆಶಾಭಾವ ಮೂಡಿತ್ತು.

ಕರ್ನಾಟಕ–ಮಹಾರಾಷ್ಟ್ರದ ಕೊಲ್ಹಾಪುರ, ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಗೆ ನೇರವಾಗಿ ರೈಲು ಸಂಪರ್ಕ ಕಲ್ಪಿಸುವ ಮಾರ್ಗವಿದು. ಬೆಳಗಾವಿಯಿಂದ ಕರಾಡವರೆಗೆ 191 ಕಿ.ಮೀ. ಆಗುತ್ತದೆ. ಇದರಲ್ಲಿ ಮಹಾರಾಷ್ಟ್ರ ವ್ಯಾಪ್ತಿಯ 97 ಕಿ.ಮೀ. ಹಾಗೂ ಕರ್ನಾಟಕ ವ್ಯಾಪ್ತಿಯ 94 ಕಿ.ಮೀ. ಬರುತ್ತದೆ. ಜಿಲ್ಲೆಯ ಪರಕನಟ್ಟಿ-ಸಂಕೇಶ್ವರ-ನಿಪ್ಪಾಣಿ-ಗುಡಮುಡಸಿಂಗಿ ಮಾರ್ಗದಿಂದ ಕೊಲ್ಹಾಪುರವರೆಗಿನ 85 ಕಿ.ಮೀ. ಮತ್ತು ಬೆಳಗಾವಿ-ಹಂದಿಗನೂರ–ದಡ್ಡಿ-ಹಲಕರ್ಣಿ–ಸಂಕೇಶ್ವರ-ನಿಪ್ಪಾಣಿ-ಕರಾಡವರೆಗೆ 21 ನಿಲ್ದಾಣಗಳನ್ನು ಹೊಂದಿ ಹೊಸ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಯೋಜಿಸಲಾಗಿತ್ತು.

ಬೇಡಿಕೆ ಈಡೇರಿಸಬೇಕು

‘ಬಹುದಿನಗಳ ಬೇಡಿಕೆಯಾದ ಬೆಳಗಾವಿ-ಧಾರವಾಡ ರೈಲು ಯೋಜನೆ ಮಂಜೂರು ಮಾಡಿರುವ ಕ್ರಮ ಸ್ವಾಗತಾರ್ಹ. ಅಂತೆಯೇ ನನೆಗುದಿಗೆ ಬಿದ್ದಿರುವ ಬೆಳಗಾವಿ-ಕರಾಡ ರೈಲ್ವೆ ಯೋಜನೆ ಮಂಜೂರಾತಿಗೂ ಸರ್ಕಾರ ಒತ್ತು ನೀಡಿ, ಗಡಿ ಜನರ ಬೇಡಿಕೆ ಈಡೇರಿಸಬೇಕು’ ಎಂದು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಮುಖಂಡ ಬಿ.ಆರ್. ಸಂಗಪ್ಪಗೋಳ ಒತ್ತಾಯಿಸಿದರು.

‘ಕರಾಡ-ಧಾರವಾಡ ಹೊಸ ರೈಲ್ವೆ ಮಾರ್ಗ ನನ್ನ ಕನಸು. ಈ ಯೋಜನೆ ಮಂಜೂರಾತಿಗೆ ಸಾಕಷ್ಟು ಪ್ರಯತ್ನ ಮಾಡಿದ್ದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬರಲಿಲ್ಲ. ಯೋಜನೆ ನನೆಗುದಿಗೆ ಬಿದ್ದಿದೆ. ಈಗಿನ ಸರ್ಕಾರ ಧಾರವಾಡ-ಬೆಳಗಾವಿ ಯೋಜನೆಗೆ ಮಂಜೂರಾತಿ ನೀಡಿದ್ದು, ಅದನ್ನು ಕರಾಡವರೆಗೆ ವಿಸ್ತರಣೆ ಮಾಡಬೇಕು' ಎಂದು ಕಾಂಗ್ರೆಸ್ ಮುಖಂಡ ಕಾಕಾಸಾಹೇಬ ಪಾಟೀಲ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.