ADVERTISEMENT

ಹಂಪಿ ವಿಶ್ವವಿದ್ಯಾಲಯಕ್ಕೆ ಅನುದಾನ: ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 13:37 IST
Last Updated 18 ಡಿಸೆಂಬರ್ 2020, 13:37 IST
ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೂಡಲೇ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೂಡಲೇ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ‘ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಕೂಡಲೇ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

‘ಅನುದಾನದ ಕೊರತೆಯಿಂದಾಗಿ ಹಲವು ವರ್ಷಗಳಿಂದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕ ಮಾಡಲಾಗಿಲ್ಲ. ಇರುವ ಸಿಬ್ಬಂದಿಗೆ ವೇತನದ ಸಮಸ್ಯೆ ಎದುರಾಗಿದೆ. ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪ್ರತಿಭಟಿಸಿದರೂ ಪ್ರಯೋಜನವಾಗಿಲ್ಲ. ರಾಜ್ಯದ ಹೆಮ್ಮೆಯ ವಿಶ್ವವಿದ್ಯಾಲಯಕ್ಕೆ ಈ ದುಃಸ್ಥಿತಿ ಬರುವಂತೆ ಸರ್ಕಾರ ನಡೆದುಕೊಂಡಿರುವುದು ಖಂಡನೀಯ’ ಎಂದರು.

‘ಕನ್ನಡದ ಬೆಳವಣಿಗೆ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಸ್ಥಾಪಿಸಿದ ವಿಶ್ವವಿದ್ಯಾಲಯದ ಮೂಲ ಅಶಯವನ್ನು ರಾಜಕೀಯ ಕಾರಣಗಳಿಗಾಗಿ ಬಲಿ ಕೊಡಬಾರದು. ಕನ್ನಡದ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುವುದು ನೋವಿನ ಸಂಗತಿಯಾಗಿದೆ’ ಎಂದು ತಿಳಿಸಿದರು.

ADVERTISEMENT

‘ಹಿಂದೆ ಆ ವಿ.ವಿ. ನಿರ್ವಹಣೆಗೆ ವಾರ್ಷಿಕ ₹ 5 ಕೋಟಿ ಕೊಡಲಾಗುತ್ತಿತ್ತು. ಈಗ ಪ್ರಕೃತಿ ವಿಕೋಪ ಹಾಗೂ ಕೊರೊನಾ ನೆಪವೊಡ್ಡಿ ₹ 50 ಲಕ್ಷಕ್ಕೆ ಸೀಮಿತಗೊಳಿಸಿ, ಅದರಲ್ಲಿ ₹ 12 ಲಕ್ಷವನ್ನಷ್ಟೆ ಬಿಡುಗಡೆ ಮಾಡಲಾಗಿದೆ. ಇದು ಸರಿಯಲ್ಲ. ಅಗತ್ಯ ಅನುದಾನ ಒದಗಿಸಿ ಕನ್ನಡದ ಕೆಲಸಕ್ಕೆ ಪ್ರೋತ್ಸಾಹ ಕೊಡಬೇಕು’ ಎಂದು ಆಗ್ರಹಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಬಾಬು ಸಂಗೋಡಿ, ಮಂಜುನಾಥ ಪಾಟೀಲ, ಬಸು ದೊಡ್ಡಮನಿ, ನಾಗರಾಜ ದೊಡ್ಡಮನಿ, ಪ್ರವೀಣ ಬಡಿಗೇರ, ಮಂಜು ಹಡಪದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.