ADVERTISEMENT

ಅಮಿತ್‌ ಶಾ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧವೂ ಪ್ರಕರಣ ದಾಖಲಿಸಿ: ಭೀಮಪ್ಪ ಗಡಾದ

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 16:41 IST
Last Updated 12 ಜನವರಿ 2022, 16:41 IST

ಬೆಳಗಾವಿ: ‘ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ನಡೆದಿರುವ ಪಾದಯಾತ್ರೆಯಲ್ಲಿ ಭಾಗಿಯಾಗಿರುವ ಕಾಂಗ್ರೆಸ್ ಮುಖಂಡರು ಮತ್ತು ಗಣ್ಯರ ಮೇಲೆ ಪ್ರಕರಣ ದಾಖಲಿಸಿದಂತೆ, ಹೋದ ವರ್ಷ ಬೆಳಗಾವಿಯಲ್ಲಿ ‘ಜನಸೇವಕ ಸಮಾವೇಶದ ಸಮಾರೋಪ’ ಆಯೋಜಿಸಿದ್ದ ಬಿಜೆಪಿ ಮುಖಂಡರ ಮೇಲೂ ಕ್ರಮ ಕೈಗೊಳ್ಳಬೇಕು. ಕೇಂದ್ರ ಸಚಿವ ಅಮಿತ್ ಶಾ ಮೊದಲಾದವರ ಮೇಲೆ ಪ್ರಕರಣ ದಾಖಲಿಸಬೇಕು’ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಆಗ್ರಹಿಸಿದ್ದಾರೆ.

ಈ ಬಗ್ಗೆ ಸರ್ಕಾರಕ್ಕೆ ಬರೆದಿರುವ ಪತ್ರವನ್ನು ಅವರು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾರೆ.

‘ಆಡಳಿತ ಪಕ್ಷ, ವಿರೋಧ ಪಕ್ಷದವರು, ಪ್ರಧಾನಿಯಿಂದ ಹಿಡಿದು ಸಾಮಾನ್ಯ ಪ್ರಜೆವರೆಗೆ ಎಲ್ಲರಿಗೂ ಒಂದೇ ಕಾನೂನು ಎನ್ನುವುದನ್ನು ಮರೆಯಬಾರದು’ ಎಂದಿದ್ದಾರೆ.

ADVERTISEMENT

‘ಹೋದ ವರ್ಷ ಜ.17ರಂದು ಕೋವಿಡ್ ನಡುವೆಯೂ ಬಿಜೆಪಿಯವರು ಸಮಾವೇಶ ನಡೆಸಿದ್ದರು. ಅಮಿತ್ ಶಾ, ಅಂದಿನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು, ಸಚಿವರು ಮತ್ತು ಆ ಪಕ್ಷದ ಶಾಸಕರು ಭಾಗವಹಿಸಿದ್ದರು. ಗ್ರಾಮ ಪಂಚಾಯ್ತಿಗಳ ಸದಸ್ಯರು ಸೇರಿದಂತೆ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿದ್ದರು‌. ಆ ವೇಳೆಯೂ ಕೋವಿಡ್ ಹೆಚ್ಚಿತ್ತು. ನಿತ್ಯ ನೂರಾರು ಜನರು ಸಾವಿಗೀಡಾಗುತ್ತಿದ್ದರು. ಸಮಾವೇಶ ರದ್ದುಪಡಿಸುವಂತೆ ಮಾಡಿಕೊಂಡಿದ್ದ ಮನವಿಗೆ ಸ್ಪಂದನೆ ದೊರೆತಿರಲಿಲ್ಲ. ಆಗ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸದಿದ್ದರೆ, ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.