ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಅಂಗನವಾಡಿ ನೌಕರರಿಂದ ಬೃಹತ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 11:24 IST
Last Updated 10 ಜುಲೈ 2019, 11:24 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿ (ಸಿಐಟಿಯು) ಸದಸ್ಯರು ಬೆಳಗಾವಿಯಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿ (ಸಿಐಟಿಯು) ಸದಸ್ಯರು ಬೆಳಗಾವಿಯಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು   

ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಸಮಿತಿ (ಸಿಐಟಿಯು) ಸದಸ್ಯರು ನಗರದಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಸಂಘದ ಅಧ್ಯಕ್ಷೆ ದೊಡ್ಡವ್ವ ಪೂಜಾರಿ ಮಾತನಾಡಿ, ‘ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಅಂಗನವಾಡಿಗಳಲ್ಲೇ ಆರಂಭಿಸಬೇಕು. ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭಿಸಲಾಗಿರುವ ಹಾಗೂ ಪ್ರಾರಂಭಿಸಲಾಗುತ್ತಿರುವ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಸರ್ಕಾರ ಮುಚ್ಚಿಸಬೇಕು.ಅಂಗನವಾಡಿ ಕೇಂದ್ರಗಳನ್ನು ಮಕ್ಕಳ ಪಾಲನಾ ಮತ್ತು ಕಲಿಕೆಯ ಕೇಂದ್ರಗಳನ್ನಾಗಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಬೇಕು.ಮೂಲ ಸೌಕರ್ಯ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ಜಿಲ್ಲೆಯ ಅನೇಕ ಅಂಗನವಾಡಿಗಳಿಗೆ ತರಕಾರಿ ಹಾಗೂ ಮೊಟ್ಟೆಗೆ ಸರ್ಕಾರದಿಂದ ನೀಡಲಾಗುವ ಅನುದಾನ ಮೂರ್ನಾಲ್ಕು ತಿಂಗಳಿಂದ ಬಂದಿಲ್ಲ. ಕೂಡಲೇ ಈ ಹಣವನ್ನು ಬಿಡುಗಡೆ ಮಾಡಬೇಕು. ಮಾತೃಪೂರ್ಣ ಯೋಜನೆಯನ್ನು ಯಶಸ್ವಿಯಾಗಿಸಲು ಹೆಚ್ಚುವರಿ ಸಹಾಯಕಿಯನ್ನು ನೇಮಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಕನಿಷ್ಠ ವೇತನ ಕೊಡಿ:ಕಾರ್ಯದರ್ಶಿ ಗೋದಾವರಿ ರಾಜಾಪುರೆ ಮಾತನಾಡಿ, ‘ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವಧನವನ್ನು ಹೆಚ್ಚಿಸಿ, ಕನಿಷ್ಠ ₹ 18,000 ಗೌರವಧನ ನೀಡಬೇಕು. ನಿವೃತ್ತ ನೌಕರರಿಗೆ ₹ 3,000 ಪಿಂಚಣಿ ಕೊಡಬೇಕು. ನಿಧನರಾದ ನೌಕರರ ಕುಟುಂಬಕ್ಕೆ ಶೀಘ್ರ ಪಿಂಚಣಿ ಒದಗಿಸಬೇಕು. ಅನುಕಂಪದ ಆಧಾರದ ಮೇಲೆ ಕುಟುಂಬಸ್ಥರಿಗೆ ನೌಕರಿ ಕೊಡಬೇಕು. ನೌಕರರು ಇಲಾಖೆಯ ಕೆಲಸಗಳಿಗೆ ಓಡಾಡುವಾಗ ಆಕಸ್ಮಿಕವಾಗಿ ಅಪಘಾತ ಸಂಭವಿಸಿದರೇ, ಚಿಕಿತ್ಸೆಯ ಖರ್ಚನ್ನು ಸರ್ಕಾರವೇ ಭರಿಸಬೇಕು. 5 ವರ್ಷ ಸೇವೆ ಪೂರೈಸಿದ ಮೇಲ್ವಿಚಾರಕಿಯರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಸಂಚಾರ ಅಸ್ತವ್ಯಸ್ತ:

ಚನ್ನಮ್ಮ ವೃತ್ತದಿಂದ ಮೆರವಣಿಗೆ ಮೂಲಕ ಆಗಮಿಸಿದ ಸಾವಿರಕ್ಕೂ ಹೆಚ್ಚು ನೌಕರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುರಿಯುತ್ತಿದ್ದ ಮಳೆಯ ನಡುವೆಯೂ ಧರಣಿ ನಡೆಸಿದರು. ಜಿಲ್ಲಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಿಂದ ಸಂಚಾರ ಅಸ್ತವ್ಯಸ್ತವಾಯಿತು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತವನ್ನು ಸಂಪರ್ಕಿಸುವ ರಸ್ತೆಯಲ್ಲಿ ಕೆಲ ಗಂಟೆಗಳ ಕಾಲ ಪೊಲೀಸರು ಸಂಚಾರ ಸ್ಥಗಿತಗೊಳಿಸಿದ್ದರಿಂದ ವಾಹನ ಸವಾರರು ಬೇರೆ ಮಾರ್ಗಗಳ ಮೂಲಕ ಸಂಚರಿಸಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.