ADVERTISEMENT

ಬೆಳಗಾವಿಯಲ್ಲಿ ಬಾಧಿಸುತ್ತಿದೆ ಡೆಂಗಿ, ಚಿಕೂನ್‌ಗುನ್ಯಾ

ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಕ್ರಮ

ಎಂ.ಮಹೇಶ
Published 5 ಸೆಪ್ಟೆಂಬರ್ 2021, 19:30 IST
Last Updated 5 ಸೆಪ್ಟೆಂಬರ್ 2021, 19:30 IST
ಮೂಡಲಗಿಯ ವಿದ್ಯಾನಗರದಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಪುರಸಭೆಯ ಆರೋಗ್ಯ ನಿರೀಕ್ಷಣಾ ವಿಭಾಗದಿಂದ ಮಿಲಾಥಿನ್‌ ಪುಡಿಯನ್ನು ಹಾಕಲಾಗಿದೆ
ಮೂಡಲಗಿಯ ವಿದ್ಯಾನಗರದಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ಪುರಸಭೆಯ ಆರೋಗ್ಯ ನಿರೀಕ್ಷಣಾ ವಿಭಾಗದಿಂದ ಮಿಲಾಥಿನ್‌ ಪುಡಿಯನ್ನು ಹಾಕಲಾಗಿದೆ   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕೊರೊನಾ ಭೀತಿಯಿಂದಾಗಿ ಕಂಗೆಟ್ಟಿರುವ ಜನರನ್ನು ಡೆಂಗಿ, ಚಿಕೂನ್‌ಗುನ್ಯಾ, ಮಲೇರಿಯಾ ಮೊದಲಾದ ಕಾಯಿಲೆಗಳು ಬಾಧಿಸುತ್ತಿವೆ. ಒಬ್ಬರು ಶಂಕಿತ ಡೆಂಗಿಯಿಂದ ಸಾವಿಗೀಡಾದುದು ವರದಿಯಾಗಿದೆ.

ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇರುವುದರಿಂದಾಗಿ, ಇತರ ಕಾಯಿಲೆಗಳಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಾಗುತ್ತಿದೆ. ಈ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಸಂಸ್ಥೆಗಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕಾಗಿದೆ ಮತ್ತು ಸೊಳ್ಳೆಗಳ ಉತ್ಪಾದನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮಗಳನ್ನು ವಹಿಸಬೇಕಾದ ಸ್ಥಿತಿ ಇದೆ. ವಿಶೇಷವಾಗಿ, ಕೊಳೆಗೇರಿಗಳಲ್ಲಿ ಸಾಂಕ್ರಾಮಿಕ ರೋಗ ಉಲ್ಬಣಿಸುತ್ತಿದೆ.

ನಿಯಂತ್ರಣಕ್ಕೆ ಕ್ರಮ

ADVERTISEMENT

‘ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಲೇರಿಯಾ, ಡೆಂಗಿ ಹಾಗೂ ಚಿಕೂನ್‌ಗುನ್ಯಾ ನಿಯಂತ್ರಣಕ್ಕೆ ಕ್ರಮ ವಹಿಸಲಾಗುತ್ತಿದೆ. ಆರೋಗ್ಯ ಇಲಾಖೆ–ಪಾಲಿಕೆ ಜಂಟಿಯಾಗಿ ಕೆಲಸ ಮಾಡುತ್ತಿದ್ದೇವೆ’ ಎಂದು ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ಸಂಜಯ ಡುಮ್ಮಗೋಳ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದೂವರೆ ತಿಂಗಳಿಂದ ಡೆಂಗಿ ಪ್ರಕರಣಗಳು ವಡಗಾವಿ, ಮಜಗಾವಿ, ಶಹಾಪುರ, ಆಂಜನೇಯನಗರ, ಮಹಾಂತೇಶ ನಗರದಲ್ಲಿ ಕಾಣಿಸಿಕೊಳ್ಳುತ್ತಿವೆ. ಅದು ಮನೆಯಲ್ಲಿನ ನೀರಿನಲ್ಲೇ ಬೆಳೆಯುತ್ತವೆ. ಮನೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಮನೆಗಳ ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಆತಂಕಪಡುವ ಅಗತ್ಯವಿಲ್ಲ’ ಎಂದು ಮಾಹಿತಿ ನೀಡಿದರು.

‘ಡೆಂಗಿ ಜ್ವರ ವೈರಸ್‌ನಿಂದ ಉಂಟಾಗುವ ಕಾಯಿಲೆ. ಇದು ಸೋಂಕು ಹೊಂದಿದ ಈಡಿಸ್ ಇಜಿಪ್ಟೈ ಎಂಬ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆ ನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಹಾಗೂ ಕೀಲುಗಳಲ್ಲಿವಿಪರೀತ ನೋವು ಕಾಣಿಸಿಕೊಳ್ಳುವುದು ಇದರ ಲಕ್ಷಣವಾಗಿದೆ’ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಎಂ.ಎಸ್. ಪಲ್ಲೇದ ತಿಳಿಸಿದರು.

ಮುಂಜಾಗ್ರತಾ ಕ್ರಮ, ಜಾಗೃತಿ

‘ನೀರಿನ ತೊಟ್ಟಿ, ಡ್ರಮ್‌, ಏರ್‌ಕೂಲರ್ ಮೊದಲಾದವುಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡ‌‌ಬೇಕು. ಈ ನಿಟ್ಟಿನಲ್ಲಿ ಅರಿವು ಮೂಡಿಸಲಾಗುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ನಡೆಸುತ್ತಿದ್ದಾರೆ. ಡೆಂಗಿ ರೋಗದ ಲಕ್ಷಣಗಳು, ಮುಂಜಾಗ್ರತಾ ಕ್ರಮ ಹಾಗೂ ನಿಯಂತ್ರಣದ ಕುರಿತು ನಿವಾಸಿಗಳಿಗೆ ಅರಿವು ಮೂಡಿಸುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಲಾರ್ವಾಹಾರಿ ‘ಗ್ಯಾಂಬೋಸಿಯ’ ಮತ್ತು ‘ಗಪ್ಪಿ’ ಮೀನುಗಳನ್ನು ನೀರಿನ ಮೂಲಗಳಲ್ಲಿ ಬಿಡಲಾಗುತ್ತಿದೆ. ಜೈವಿಕ ನಿಯಂತ್ರಣ ಕಾರ್ಯಕ್ರಮದಲ್ಲಿ ಕೆರೆ, ತೊರೆ, ಬಾವಿಗಳಿಗೆ ಲಾರ್ವಾಹಾರಿ ಮೀನುಗಳನ್ನು ಮೀನುಗಾರಿಕೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. 4,800 ಸ್ಥಳಗಳನ್ನು ಗುರುತಿಸಲಾಗಿದೆ. ಈಗಾಗಲೇ 2ಸಾವಿರ ಕಡೆಗಳಲ್ಲಿ ಮೀನುಗಳನ್ನು ಬಡಲಾಗಿದೆ. 15 ದಿನಗಳಲ್ಲಿ ಎಲ್ಲ ಪ್ರದೇಶಗಳಲ್ಲೂ ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.

‘ಡೆಂಗಿ ವಿರೋಧಿ ಮಾಸಾಚರಣೆ ನಡೆಸಲಾಗಿದೆ. ನಿತ್ಯ 30ರಿಂದ 40 ಮನೆಗಳಿಗೆ ಸೇರಿ ಪ್ರತಿ ತಿಂಗಳು 1.50 ಲಕ್ಷ ಭೇಟಿ ನೀಡುವಂತೆ 4,200 ಆಶಾ ಕಾರ್ಯಕರ್ತೆಯರಿಗೆ ಗುರಿ ನೀಡಲಾಗಿದೆ. ಅವರು ಲಾರ್ವಾ ಸಮೀಕ್ಷೆ ನಡೆಸುತ್ತಾರೆ; ಜಾಗೃತಿಯನ್ನೂ ಮೂಡಿಸುತ್ತಾರೆ. ಪರಿಸರಕ್ಕೆ ಪೂರಕವಲ್ಲವಾದ್ದರಿಂದ ಫಾಗಿಂಗ್‌ಗೆ ಆದ್ಯತೆ ಕೊಡುತ್ತಿಲ್ಲ. ಲಾರ್ವಾ ನಿಯಂತ್ರಣಕ್ಕೆ ಕ್ರಮ ವಹಿಸಲಾಗುತ್ತಿದೆ. ಸದ್ಯಕ್ಕೆ ಜಿಲ್ಲೆಯಲ್ಲಿ ‘ಹೈರಿಸ್ಕ್‌ ವಲಯ’ ಯಾವುದೂ ಇಲ್ಲ’ ಎನ್ನುತ್ತಾರೆ ಅವರು.

ಸೊಳ್ಳೆಗಳ ಕಾಟದಿಂದ

ಮುನವಳ್ಳಿ ಪಟ್ಟಣದ ಗಟಾರಗಳಲ್ಲಿ ಕೊಳಚೆ ನೀರು ಸಂಗ್ರಹವಾಗಿ ಸೂಳ್ಳೆಗಳ ಕಾಟ ಹೆಚ್ಚಾಗಿದೆ. ಡೆಂಗಿ ಮತ್ತು ಮಲೇರಿಯಾ ರೋಗಗಳು ಹೆಚ್ಚುತ್ತಿವೆ. ಸ್ವಚ್ಛತೆಗೆ ಗಮನ ಕೊಡುತ್ತಿಲ್ಲ. ಆರೋಗ್ಯ ಪ್ರಾಥಮಿಕ ಕೇಂದ್ರದಲ್ಲಿ ಹೆಚ್ಚಿನ ಚಿಕಿತ್ಸೆ ಸಿಗುತ್ತಿಲ್ಲ. ಇದಕ್ಕಾಗಿ ಹುಬ್ಬಳ್ಳಿ ಅಥವಾ ಬೆಳಗಾವಿಗೆ ಹೋಗಬೇಕು. ಡಂಗಿ ಚಿಕಿತ್ಸೆಗೆ ಸಾವಿರಾರು ರೂಪಾಯಿ ಬೇಕಾಗುತ್ತದೆ’ ಎಂದು ಮುನವಳ್ಳಿಯ ಕಿರಣ ಯಲಿಗಾರ ತಿಳಿಸಿದರು.

ಖಾಸಗಿ ಆಸ್ಪತ್ರೆಗಳ ಮೊರೆ

ಮೂಡಲಗಿ: ಇಲ್ಲಿ ಡೆಂಗಿ ಮತ್ತು ಚಿಕೂನ್‌ಗುನ್ಯಾ ಬಾಧಿತರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಪುರಸಭೆಯಿಂದ ಕ್ರಮ ವಹಿಸಲಾಗುತ್ತಿದೆ. ‘ಲಕ್ಷ್ಮೀನಗರ ಮತ್ತು ವಿದ್ಯಾನಗರದ ಕೆಲವು ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯದೆ ಸೊಳ್ಳೆಗಳ ಉತ್ಪತ್ತಿಗೆ ಅವಕಾಶ ಆಗುತ್ತಿದೆ’ ಎಂದು ನಿವಾಸಿಗಳು ದೂರಿದ್ದಾರೆ.

‘ಪಟ್ಟಣದ ಎಲ್ಲ 23 ವಾರ್ಡ್‌ಗಳಲ್ಲೂ ಸೊಳ್ಳೆಗಳ ನಿಯಂತ್ರಣಕ್ಕೆ 2 ವಾರಗಳ ಹಿಂದೆ ಮಿಲಾಥಿನ್‌ ಪುಡಿಯನ್ನು ರಸ್ತೆ ಬದಿಗೆ ಸಿಂಪಡಿಸಲಾಗಿದೆ. ಕಸ ಸಂಗ್ರಹ ವಾಹನ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಚಿದಾನಂದ ಮುಗಳಖೋಡ ತಿಳಿಸಿದರು.

ಪ್ರಕರಣಗಳು ಕಡಿಮೆ

ಸವದತ್ತಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಡೆಂಗಿ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಕೆಲವೆಡೆ ಶೀತ, ಜ್ವರ ಹಾಗೂ ಗಂಟಲಿನ ಸಮಸ್ಯೆಗಳು ಕಂಡುಬಂದಿವೆ. ಸಾಂಕ್ರಾಮಿಕ ರೋಗಗಳ ಕುರಿತು 2 ದಿನಕ್ಕೊಮ್ಮೆ ಧ್ವನಿವರ್ಧಕಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಪಂಚಾಯ್ತಿಯಿಂದ ಆಯಾ ಗ್ರಾಮಗಳಲ್ಲಿ ಫಾಗಿಂಗ್ ವ್ಯವಸ್ಥೆಗೆ ಸೂಚಿಸಲಾಗಿದೆ. ನಿತ್ಯ ಸಂಜೆ ಬೇವಿನಸೊಪ್ಪಿನ ಹೊಗೆ ಹಾಕುವಂತೆ ಪ್ರಚಾರ ನಡೆದಿದೆ.

ಖಾನಾಪುರದಲ್ಲಿ ವಿಶೇಷ ಪ್ರಯತ್ನ

ಖಾನಾಪುರ: ‘ಇಲ್ಲಿ ಡೆಂಗಿ ಹಾಗೂ ಚಿಕೂನ್‌ಗುನ್ಯಾ ನಿಯಂತ್ರಣಕ್ಕಾಗಿ ಪಟ್ಟಣ ಪಂಚಾಯ್ತಿಯಿಂದ ಹಲವು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಫಾಗಿಂಗ್, ಸಮರ್ಪಕ ಕಸ ವಿಲೇವಾರಿ, ಚರಂಡಿ ಸ್ವಚ್ಛತೆ, ಸೋಂಕು ನಿವಾರಕ ದ್ರಾವಣ ಸಿಂಪಡಣೆಯಂತಹ ಕೆಲಸ ನಡೆದಿವೆ’ ಎಂದು ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿಯ ಅಧ್ಯಕ್ಷ ಲಕ್ಷ್ಮಣ ಮಾದಾರ ಹೇಳಿದರು.

‘ಸಾಮಾನ್ಯವಾಗಿ ಮಳೆಗಾಲದ ಸಮಯದಲ್ಲಿ ಸಾಂಕ್ರಾಮಿಕ ರೋಗಗಳ ಪ್ರಕರಣಗಳು ಕಂಡುಬರುತ್ತಿವೆ. ಶೀತ, ಜ್ವರ, ಗಂಟಲು ಕೆರೆತ ಬಾಧೆಯಿಂದ ಬಳಲುವ ರೋಗಿಗಳು ತಾಲ್ಲೂಕು ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ. ಹೆಚ್ಚಿನ ಪ್ರಮಾಣದ ತೊಂದರೆ ಇದ್ದವರಿಗೆ ರಕ್ತ-ಮೂತ್ರ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಔಷಧಿಗಳ ಕೊರತೆ ಇಲ್ಲ’ ಎಂದು ತಾಲ್ಲೂಕು ಆಸ್ಪತ್ರೆಯ ವೈದ್ಯ ಡಾ.ನಾರಾಯಣ ತಿಳಿಸಿದರು.

ರಾಮದುರ್ಗ: ಪಟ್ಟಣ ಮತ್ತು ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಚಿಕೂನ್‌ಗುನ್ಯಾ ಮತ್ತು ಡೆಂಗಿ ಮಾಸಾಚರಣೆ ಮಾಡಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲು ಆಶಾ, ಅಂಗನವಾಡಿ ಮತ್ತು ಸಹಾಯಕ ಆರೋಗ್ಯ ಸಿಬ್ಬಂದಿಗೆ ತರಬೇತಿ ಕೊಡಲಾಗಿದೆ. ಡಿಡಿಟಿ ಪುಡಿ ಸಿಂಪಡಿಸಲಾಗುತ್ತಿದೆ.

ನಿರ್ಲಕ್ಷ್ಯ ಮಾಡಬೇಡಿ

ಯಾವುದೇ ಜ್ವರ ಬಂದರೂ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತಪರೀಕ್ಷೆ ಮಾಡಿಸಿಕೊಳ್ಳಬೇಕು. ಚಿಕಿತ್ಸೆ ಪಡೆದುಕೊಳ್ಳಬೇಕು. ನಿರ್ಲಕ್ಷ್ಯ ವಹಿಸಬಾರದು. ಆಗ, ಸಾಂಕ್ರಾಮಿಕ ರೋಗಗಳ ಅಪಾಯದಿಂದ ತಪ್ಪಿಸಿಕೊಳ್ಳಬಹುದು.

–ಡಾ.ಎಸ್.ವಿ. ಮುನ್ಯಾಳ, ಡಿಎಚ್‌ಒ, ಬೆಳಗಾವಿ

ಎಚ್ಚೆತ್ತುಕೊಳ್ಳಬೇಕು

ಆಜಾದ್ ನಗರ, ಆಜಾದ್ ಮೊಹಲ್ಲಾ, ಗಾಂಧಿ ನಗರದಲ್ಲಿ ಪರಿಸ್ಥಿತಿ ಬಹಳ ಹಾಳಾಗಿದೆ. ಸ್ವಚ್ಛತೆ ಸರಿಯಾಗಿ ನಡೆಯುತ್ತಿಲ್ಲ. ಅಲ್ಲಿಂದ ಡೆಂಗಿ ಸೇರಿದಂತೆ ಸಾಂಕ್ರಾಮಿಕ ರೋಗಗಳು ಇಡೀ ನಗರಕ್ಕೆ ಹರಡುತ್ತವೆ. ಪಾಲಿಕೆಯವರು ಎಚ್ಚೆತ್ತುಕೊಳ್ಳಬೇಕು.

–ಮೈನುದ್ದೀನ್ ಮಕಾನದಾರ, ನಾಗರಿಕ, ಬೆಳಗಾವಿ

ನೋಡಿಕೊಳ್ಳಬೇಕು

ಮನೆ ಸುತ್ತಲೂ ನೀರು ಸಂಗ್ರಹಗೊಳ್ಳದಂತೆ ನೋಡಿಕೊಳ್ಳಬೇಕು. ಸಮಸ್ಯೆ ಕಾಣಿಸಿಕೊಂಡರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು.

–ಡಾ.ಮೃತ್ಯುಂಜಯ ತಡಹಾಳ, ಟಿಎಚ್‌ಒ, ರಾಮದುರ್ಗ

ರೋಗಗಳ ಸ್ಥಿತಿಗತಿ

ಕಾಯಿಲೆ;ಜನವರಿ–ಆಗಸ್ಟ್;2020ರ ಜನವರಿ–ಆಗಸ್ಟ್

ಡೆಂಗಿ;150;12

ಚಿಕೂನ್‌ಗುನ್ಯಾ;9;2

ಮಲೇರಿಯಾ;6;4

(ಮಾಹಿತಿ: ಆರೋಗ್ಯ ಇಲಾಖೆ)

(ಪ್ರಜಾವಾಣಿ ತಂಡ: ಬಾಲಶೇಖರ ಬಂದಿ, ಚನ್ನಪ್ಪ ಮಾದರ, ಬಸವರಾಜ ಶಿರಸಂಗಿ, ಪ್ರಸನ್ನ ಕುಲಕರ್ಣಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.