ADVERTISEMENT

ಕನ್ನಡ ಕೆಲಸಕ್ಕೆ ಇಲಾಖೆಯಿಂದಲೇ ಅಡ್ಡಗಾಲು: ರಾಘವೇಂದ್ರ ಪಾಟೀಲ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2018, 12:45 IST
Last Updated 16 ಸೆಪ್ಟೆಂಬರ್ 2018, 12:45 IST
ಬೆಳಗಾವಿಯಲ್ಲಿ ಭಾನುವಾರ ನಡೆದ  ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಸಾಹಿತ್ಯಾಸಕ್ತರು
ಬೆಳಗಾವಿಯಲ್ಲಿ ಭಾನುವಾರ ನಡೆದ  ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಸಾಹಿತ್ಯಾಸಕ್ತರು   

ಬೆಳಗಾವಿ: ಗಡಿಯಲ್ಲಿ ಕನ್ನಡದ ಕೆಲಸವನ್ನು ಸಮರ್ಥವಾಗಿ ಮಾಡುತ್ತಿರುವ ಟ್ರಸ್ಟ್‌ಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳೇ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್ ಅಧ್ಯಕ್ಷ ಪ್ರೊ.ರಾಘವೇಂದ್ರ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

ಟ್ರಸ್ಟ್‌ನಿಂದ ಭಾನುವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಟ್ರಸ್ಟ್‌ನ ಕಾರ್ಯಕ್ರಮಗಳಲ್ಲಿ ಮೂಗು ತೂರಿಸಿ ಅಡ್ಡಿ ಮಾಡುತ್ತಿದ್ದಾರೆ. ಬೆಂಗಳೂರು ವ್ಯಾಪ್ತಿಯ ಟ್ರಸ್ಟ್‌ಗಳಿಗೆ ಅತಿ ಹೆಚ್ಚು ಅನುದಾನ ನೀಡುತ್ತಿದ್ದು, ಉತ್ತರ ಕರ್ನಾಟಕದ ಟ್ರಸ್ಟ್‌ಗಳಿಗೆ ಕಡಿತ ಮಾಡಲಾಗುತ್ತಿದೆ’ ಎಂದು ದೂರಿದರು.

ADVERTISEMENT

‘ಪ್ರಶಸ್ತಿ ಮೊತ್ತವನ್ನು ₹ 10ಸಾವಿರಕ್ಕೆ ಮಿತಿಗೊಳಿಸಿ ಆದೇಶ ಹೊರಡಿಸಿದ್ದಾರೆ. ಈ ರೀತಿಯ ಕರಾರುಗಳು ಕನ್ನಡದ ಬೆಳವಣಿಗೆಗೆ ಮಾರಕವಾಗಿವೆ. ಟ್ರಸ್ಟ್‌ಗಳ ಸ್ವಾಯತ್ತತೆ ಹಿಂತೆಗೆದುಕೊಳ್ಳುವ ಕೆಲಸಕ್ಕೆ ಇಲಾಖೆ ಕೈಹಾಕಿದೆ. ಇದರಿಂದ ಎಲ್ಲ ಟ್ರಸ್ಟ್‌ಗಳೂ ಅತಂತ್ರವಾಗಿವೆ’ ಎಂದು ತಿಳಿಸಿದರು.

ಮಿತಿ ಬೇಡ

ಕಸಾಪ ಅಧ್ಯಕ್ಷ ಮನು ಬಳಿಗಾರ ಮಾತನಾಡಿ, ‘ಧಾರ್ಮಿಕ ಕಾರ್ಯಕ್ರಮಗಳಿಗೆ ಮಿತಿ ಇರುವುದಿಲ್ಲ. ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಮಿತಿ ಹಾಕುವುದು ಏಕೆಂದು ಅವಲೋಕನ ಮಾಡಿಕೊಳ್ಳಬೇಕು. ಈ ಮಿತಿ, ಷರತ್ತುಗಳ ಆದೇಶ ತಿದ್ದುಪಡಿ ಮಾಡಬೇಕು. ಅನುದಾನ ಕಡಿತಗೊಳಿಸಬಾರದು. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನಕ್ಕೆ ವಾರ್ಷಿಕ ₹ 20 ಲಕ್ಷ ಅನುದಾನ ಕೊಡಬೇಕು. ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವರ ಗಮನಕ್ಕೆ ತರಲಾಗುವುದು’ ಎಂದು ತಿಳಿಸಿದರು.

ಕವಿ ಪ್ರೊ.ಎಚ್.ಎಸ್. ವೆಂಕಟೇಶಮೂರ್ತಿ ಮಾತನಾಡಿ, ‘ಕೆಲವು ಕವಿಗಳಿಗೆ ಕಣ್ಣು, ಕೆಲವರಿಗೆ ಕಿವಿ ಚುರುಕಾಗಿರುತ್ತವೆ. ಕಿವಿ ಚುರುಕಿದ್ದವರ ಸಾಲಿನಲ್ಲಿ ಆನಂದಕಂದರು ಇದ್ದಾರೆ. ಅವರ ಸೂಕ್ಷ್ಮತೆ ದೊಡ್ಡದು. ಕನ್ನಡದಲ್ಲಿ ವಿದ್ವಾಂಸರಾಗಿದ್ದ ಅವರಿಗೆ ಸಿಗಬೇಕಾದ ಗೌರವ ಸಿಗಲಿಲ್ಲ’ ಎಂದು ಅಭಿಪ್ರಾಯಪಟ್ಟರು.

ಸಾಹಿತಿ ಬರಗೂರ ರಾಮಚಂದ್ರಪ್ಪ ಮಾತನಾಡಿ, ‘ಅನೇಕರ ಬಗ್ಗೆ ವಿಮರ್ಶಕರು ಅಲಕ್ಷ್ಯ ಮಾಡಿದ್ದಾರೆ. ಕೆಲವರಿಗೆ ಬಹಳ ತಡವಾಗಿ ಮನ್ನಣೆ ದೊರೆಯುತ್ತದೆ. ವಚನ ಸಾಹಿತ್ಯವನ್ನು ಸಾಹಿತ್ಯ ಎಂದು ಕರೆಯಲು 20ನೇ ಶತಮಾನದವರೆಗೆ ಕಾಯಬೇಕಾಯಿತು. ಅಲ್ಲಿವರೆಗೆ ಅದನ್ನು ಧರ್ಮ ಶಾಸ್ತ್ರ ಎಂದೇ ಕರೆಯುತ್ತಿದ್ದರು. ಆದರೆ, ಪ್ರತಿಭಾವಂತರು ಯಾವತ್ತೂ ಸಾಯುವುದಿಲ್ಲ. ಅಂಥವರ ಸಾಲಿನಲ್ಲಿ ಬೆಟಗೇರಿ ಕೃಷ್ಣಶರ್ಮ ಒಬ್ಬರು’ ಎಂದು ನೆನೆದರು.

ಬದುಕು ಶ್ರೇಷ್ಠ

‘ಸಾಹಿತ್ಯ ಒಂದೇ ಶ್ರೇಷ್ಠವಲ್ಲ; ಬದುಕು ಶ್ರೇಷ್ಠ ಎನ್ನುವುದು ನನ್ನ ಅಭಿಪ್ರಾಯ. ಹಿರಿಯರು ಹಾಗೂ ಕಿರಿಯರ ನಡುವೆ ಉತ್ತಮ ಸಂಬಂಧ ನಿರ್ಮಾಣವಾದರೆ ಸಾಂಸ್ಕೃತಿಕ ವಾತಾವರಣ ಚೆನ್ನಾಗಿರುತ್ತದೆ’ ಎಂದರು.

ವಿದ್ವಾಂಸ ಗುರುಲಿಂಗ ಕಾಪಸೆ ಮಾತನಾಡಿ, ‘ಕನ್ನಡ ಸಾಹಿತ್ಯದಲ್ಲಿ ದೊಡ್ಡ ಪರಂಪರೆಯೇ ಬೆಳೆದು ಬಂದಿದೆ. ಭಾಷೆ-ವಸ್ತು-ಲಯದಲ್ಲಿ ಕುವೆಂಪು, ಬೇಂದ್ರೆ, ಕಾರಂತ, ಆನಂದಕಂದರು ಮಾಡಿದ ಪ್ರಯೋಗ ಭಾರತದಲ್ಲಿಯೇ ಮೊದಲನೆಯದು. ಕನ್ನಡ ಸಾಹಿತ್ಯಲೋಕಕ್ಕೆ ಕೃಷ್ಣಶರ್ಮರು ನೀಡಿದ ಕಾಣಿಕೆ ಅಪೂರ್ವವಾದುದು’ ಎಂದು ಸ್ಮರಿಸಿದರು.

ವಿದ್ವಾಂಸ ವೆಂಕಟಗಿರಿ ದಳವಾಯಿ ಅಭಿನಂದನಾ ನುಡಿಗಳನ್ನಾಡಿದರು. ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಶ್ರೀಶೈಲ ಕರಿಶಂಕರಿ ಸ್ವಾಗತಿಸಿದರು. ಸಿ.ಕೆ. ನಾವಲಗಿ ಪ್ರಾಸ್ತಾವಿಕ ಮಾತನಾಡಿದರು. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಸರಜೂ ಕಾಟ್ಕರ್ ಪ್ರಶಸ್ತಿಪತ್ರ ವಾಚಿಸಿದರು. ಪ್ರೊ.ಚಂದ್ರಶೇಖರ ವಸ್ತ್ರದ ನಿರೂಪಿಸಿದರು. ಸದಸ್ಯೆ ಆಶಾ ಕಡಪಟ್ಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.