ADVERTISEMENT

ಬೆಳಗಾವಿ: 659 ಅಗ್ನಿವೀರರ ನಿರ್ಗಮನ ಪಥಸಂಚಲನ

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 16:00 IST
Last Updated 7 ಜೂನ್ 2025, 16:00 IST
ಬೆಳಗಾವಿಯ ಮರಾಠಾ ಲಘು ಪದಾತಿ ದಳದಲ್ಲಿ ನಡೆದ ಅಗ್ನಿವೀರರ ಶ‍ಪಥ ಸಮಾರಂಭದಲ್ಲಿ ಉತ್ತಮ ಸಾಧನೆ ತೋರಿದ ಅಗ್ನಿವೀರರಿಗೆ ಬ್ರಿಗೇಡಿಯರ್ ಜಾಯ್‌ದೀಪ್ ಮುಖರ್ಜಿ ಅವರು ಪ್ರಶಸ್ತಿ ವಿತರಿಸಿದರು
ಬೆಳಗಾವಿಯ ಮರಾಠಾ ಲಘು ಪದಾತಿ ದಳದಲ್ಲಿ ನಡೆದ ಅಗ್ನಿವೀರರ ಶ‍ಪಥ ಸಮಾರಂಭದಲ್ಲಿ ಉತ್ತಮ ಸಾಧನೆ ತೋರಿದ ಅಗ್ನಿವೀರರಿಗೆ ಬ್ರಿಗೇಡಿಯರ್ ಜಾಯ್‌ದೀಪ್ ಮುಖರ್ಜಿ ಅವರು ಪ್ರಶಸ್ತಿ ವಿತರಿಸಿದರು   

ಬೆಳಗಾವಿ: ಇಲ್ಲಿನ ಮರಾಠಾ ಲಘು ಪದಾತಿ ದಳದಲ್ಲಿ ಅಗ್ನಿವೀರ ತರಬೇತಿ ಪೂರೈಸಿದ ಐದನೇ ಬ್ಯಾಚ್‌ನ 659 ಅಗ್ನಿವೀರರ ಶಪಥ ಮೆರವಣಿಗೆ ಹಾಗೂ ನಿರ್ಗಮನ ಪಥಸಂಚಲನ ಮಂಗಳವಾರ ನಡೆಯಿತು.

ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನ ಕಮಾಂಡೆಂಟ್ ಬ್ರಿಗೇಡಿಯರ್ ಜಾಯ್‌ದೀಪ್ ಮುಖರ್ಜಿ ಅವರು ಅಗ್ನಿವೀರ್‌ಗಳ ಶಪಥ ಪರೇಡ್ ಪರಿಶೀಲಿಸಿದರು. 31 ವಾರಗಳ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಗ್ನಿವೀರರಿಗೆ ಶಪಥ ನೀಡಿದರು. ಅಗ್ನಿವೀರರ ಪರಿಪೂರ್ಣ ಮತ್ತು ಗುಣಮಟ್ಟದ ಕವಾಯತು ಕಂಡು ಅವರು ಅಭಿನಂಬಿಸಿದರು.

ಇದೇ ವೇಳೆ ಅವರು, ‘ಭಾರತೀಯ ಸೇನೆಯ ಅತ್ಯಂತ ಹಳೆಯ ಪದಾತಿ ದಳಗಳಲ್ಲಿ ಒಂದಾದ ಮರಾಠಾ ಲಘು ಪದಾತಿ ದಳವು ಶ್ರೀಮಂತ ಪರಂಪರೆ ಹೊಂದಿದೆ. ಸೈನಿಕರ ಜೀವನದಲ್ಲಿ ಶಿಸ್ತು ಮತ್ತು ದೈಹಿಕ ಸದೃಢತೆಯ ಮಹತ್ವ ಪಡೆದಿದೆ. ಯುವ ಸೈನಿಕರು ದೇಶದ ಭವಿಷ್ಯವಾಗಿದ್ದಾರೆ’ ಎಂದು ಹೇಳಿದರು.

ADVERTISEMENT

ಅಗ್ನಿವೀರ್ ಗಜಾನನ ರಾಥೋಡ್ ಪೆರೇಡ್ ನೇತೃತ್ವ ವಹಿಸಿದ್ದರು. ಲೆಫ್ಟಿನೆಂಟ್ ಕರ್ನಲ್ ದಿಗ್ವಿಜಯ್ ಸಿಂಗ್ ಪೆರೇಡ್ ಅಡ್ಜುಟಂಟ್ ಆಗಿದ್ದರು. ಅಗ್ನಿವೀರರು ರಾಷ್ಟ್ರಧ್ವಜ, ರೆಜಿಮೆಂಟಲ್ ಧ್ವಜ ಮತ್ತು ಧಾರ್ಮಿಕ ಪವಿತ್ರ ಗ್ರಂಥಗಳ ಸಮ್ಮುಖದಲ್ಲಿ ‘ಪ್ರಮಾಣವಚನ’ ಸ್ವೀಕರಿಸಿದರು.

ತರಬೇತಿಯ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾನ್ವಿತರಿಗೆ ವಿವಿಧ ಪದಕ, ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ನಾಯಕ್ ಯಶವಂತ್ ಘಾಡ್ಗೆ, ಕಪ್ಲೆ ಕೃಷ್ಣತ ಅವರಿಗೆ ಅತ್ಯುತ್ತಮ ಅಗ್ನಿವೀರ್ ಪದಕ ಪಡೆದರು.

ಶರ್ಕತ್ ಯುದ್ಧ ಸ್ಮಾರಕದಲ್ಲಿ ಮಡಿದ ಯೋಧರಿಗೆ ಗೌರವ ಸಲ್ಲಿಸಲಾಯಿತು.

ಅಗ್ನಿವೀರರ ಪಾಲಕರು, ಪೋಷಕರು, ರೆಜಿಮೆಂಟ್‌ನ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಸಹೋದರರು, ಗಣ್ಯರು, ಎನ್‌ಸಿಸಿ ಕೆಡೆಟ್‌ಗಳು ಮತ್ತು ವಿವಿಧ ಶಾಲೆಗಳ ಯುವ ವಿದ್ಯಾರ್ಥಿಗಳು ಇದಕ್ಕೆ ಸಾಕ್ಷಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.