ADVERTISEMENT

ಕ್ಷೇತ್ರದ ಅಭಿವೃದ್ಧಿಗೆ ಜನರ ಅಕ್ಕರೆ ಕಾರಣ: ಶಾಸಕಿ ಲಕ್ಷ್ಮಿ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 13:01 IST
Last Updated 22 ಜನವರಿ 2022, 13:01 IST
ಬೆಳಗಾವಿ ತಾಲ್ಲೂಕಿನ ರಣಕುಂಡೆ ಗ್ರಾಮದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿದರು
ಬೆಳಗಾವಿ ತಾಲ್ಲೂಕಿನ ರಣಕುಂಡೆ ಗ್ರಾಮದಲ್ಲಿ ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿದರು   

ಬೆಳಗಾವಿ: 'ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದಕ್ಕೆ ಜನರ ಅಕ್ಕರೆಯೇ ಕಾರಣ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.

ತಾಲ್ಲೂಕಿನ ಕರ್ನಾಟಕ–ಗೋವಾ ರಾಜ್ಯ ಹೆದ್ದಾರಿಯಿಂದ ರಣಕುಂಡೆ ಗ್ರಾಮದವರೆಗಿನ ರಸ್ತೆ ಸುಧಾರಣೆ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಕ್ಷೇಯ್ರದ ಜನರು ಅತ್ಯಂತ ಕಷ್ಟ ಸಹಿಷ್ಣುಗಳಾಗಿದ್ದು, ಅಭಿವೃದ್ಧಿ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ– ಸಹಕಾರ ನೀಡುತ್ತಾರೆ. ಇಲ್ಲಿ ಸೇವೆ ಸಲ್ಲಿಸುವುದು ಖುಷಿ ಹಾಗೂ ಪುಣ್ಯದ ಕೆಲಸ’ ಎಂದರು.

ADVERTISEMENT

‘ಶಾಸಕಿ ಆದಾಗಿನಿಂದಲೂ ಜನರು ನನ್ನನ್ನು ತಮ್ಮ ಮನೆಯ ಮಗಳೆನ್ನುವಂತೆ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಾರೆ. ಸಲಹೆ, ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಇದರಿಂದಾಗಿಯೇ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕ್ಷೇತ್ರದ ಅಭಿವೃದ್ಧಿ ಕೈಗೆತ್ತಿಕೊಳ್ಳಲು ನನ್ನಿಂದ ಸಾಧ್ಯವಾಗಿದೆ’ ಎಂದು ತಿಳಿಸಿದರು.

‘ಸಮಾಜ ಕಲ್ಯಾಣ ಹಾಗೂ ಲೋಕೋಪಯೋಗಿ ಇಲಾಖೆಯ ₹ 50 ಲಕ್ಷ ಅನುದಾನದಲ್ಲಿ ರಸ್ತೆ‌ ನಿರ್ಮಾಣ ಕಾಮಗಾರಿ ನಡೆಯಲಿದೆ’ ಎಂದರು.

ನರೇಗಾ ಯೋಜನೆಯಡಿ ಕೆಲಸ ಮಾಡುವ ಮಹಿಳೆಯರಿಗೆ ಪ್ರಥಮ ಚಿಕಿತ್ಸೆ ಕಿಟ್ ಹಾಗೂ ಟೋಪಿಗಳನ್ನು ವಿತರಿಸಿದರು.

ಬೆಳಗುಂದಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಅನುದಾನದಲ್ಲಿ ₹ 1 ಕೋಟಿ ವೆಚ್ಚದಲ್ಲಿ ಸೇತುವೆ ಕಂ ಬಾಂದಾರ ನಿರ್ಮಾಣದ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.

‘ಮಳೆಗಾಲದಲ್ಲಿ ನೀರು ಗ್ರಾಮದ ಸುತ್ತಮುತ್ತಲಿನ ಹೊಲಗದ್ದೆಗಳಿಗೆ ಹರಿದು 500 ಎಕರೆ ಬೆಳೆ ನಾಶವಾಗುತ್ತಿತ್ತು. ಇದರಿಂದ ರೈತರಿಗೆ ತೊಂದರೆ ಆಗುತ್ತಿರುವುದನ್ನು ಗಮನಿಸಿ ಸೇತುವೆ ಕಂ ಬಾಂದಾರ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಳೆ ನೀರು ಸರಾಗವಾಗಿ ಹರಿದು ಮಾರ್ಕಂಡೇಯ ನದಿಗೆ ಸೇರಲಿದೆ. ಬೆಳೆ ಹಾನಿ ತಪ್ಪಲಿದೆ’ ಎಂದು ಅವರು ಹೇಳಿದರು.

ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಸ್ನೇಹಲ್ ಲೋಹಾರ, ಉಪಾಧ್ಯಕ್ಷ ಮಲ್ಲಪ್ಪ ಪಾಟೀಲ, ಭರಮಾ ಪಾಟೀಲ, ಸುಲೋಚನಾ ಕೋಲಕಾರ, ಗೌಸಬಿ ತಹಶೀಲ್ದಾರ್‌. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯಲ್ಲಪ್ಪ ಡೇಕೋಳ್ಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.