ADVERTISEMENT

ಕಾಂಗ್ರೆಸ್ ಅಭಿವೃದ್ಧಿ ಕೆಲಸಗಳೇ ಮುಂದಿನ ಚುನಾವಣೆಗೆ ವರದಾನ: ಲಕ್ಷ್ಮೀ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 9:48 IST
Last Updated 17 ಜುಲೈ 2022, 9:48 IST
ಶಾಸಕಿ ಲಕ್ಷ್ಮೀ ಹೆಬ್ಬಾಳಕರ
ಶಾಸಕಿ ಲಕ್ಷ್ಮೀ ಹೆಬ್ಬಾಳಕರ   

ಕುಡಚಿ (ಬೆಳಗಾವಿ ಜಿಲ್ಲೆ): 'ಕಳೆದ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುವುದರ ಜೊತೆಗೆ ಅನೇಕ ಅಭಿವೃದ್ಧಿ ಕೆಲಸ ಮಾಡಿದೆ. ಆ ಕೆಲಸಗಳೇ ಮುಂಬರಲಿರುವ ವಿಧಾನಸಭಾ ಚುನಾವಣೆಗೆ ವರದಾನವಾಗಲಿವೆ' ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಭಾನುವಾರ, ಕುಡಚಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಪಕ್ಷದ ಸಂಘಟನೆಗಾಗಿ ಆರು ದಿನಗಳ ಬೃಹತ್ ಸೈಕಲ್ ಜಾಥಾದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.


'ಸಿದ್ದರಾಮಯ್ಯ ಅವರ ಆಡಳಿತದ ಅವಧಿಯಲ್ಲಿ ರೂಪಿಸಿದ ಹಲವಾರು ಜನಪರ ಯೋಜನೆಗಳ ಬಗ್ಗೆ ಕಾರ್ಯಕರ್ತರು ಮನೆಮನೆಗೆ ತೆರಳಿ ತಿಳಿಸಬೇಕಾದ ಅಗತ್ಯ ಇದೆ..ಈ ಸೈಕಲ್ ಜಾಥಾ ಕಾರ್ಯಕ್ರಮ ಸತತ ಆರು ದಿನಗಳ ಕಾಲ ಜರುಗಿದ್ದು, ಪಕ್ಷದ ಸಂಘಟನೆ ಮತ್ತು ಕಾಂಗ್ರೆಸ್ ಸಿದ್ಧಾಂತಗಳ ಮೂಲಕ ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದರಲ್ಲಿ ಯಶಸ್ವಿಯಾಗಿದೆ' ಎಂದರು.

ADVERTISEMENT

'ರಾಜ್ಯ ಅಭಿವೃದ್ದಿಯಾಗಬೇಕಾದರೆ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಎಲ್ಲ ಕ್ಷೇತ್ರಗಳಲ್ಲಿ ಮುಖಂಡರು, ಕಾರ್ಯಕರ್ತರು ಸಣ್ಣಪುಟ್ಟ ಮನಸ್ತಾಪಗಳನ್ನು ಬದಿಗಿಟ್ಟು ಒಗ್ಗಟ್ಟಾಗಿ ಚುನಾವಣೆಗಳನ್ನು ಎದುರಿಸಬೇಕಾಗಿದೆ.
ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ಶತಸಿದ್ಧ, ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಇವತ್ತಿನಿಂದಲೇ ನಾವೆಲ್ಲರೂ ಒಗ್ಗಟ್ಟಾಗಿ ಮಾಡಿಕೊಂಡು ಪಕ್ಷದ ಏಳಿಗೆಗಾಗಿ ದಿನದ 24 ಗಂಟೆಗಳ ಕಾಲ ದುಡಿಯಬೇಕು' ಎಂದು ಕರೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ನೇತೃತ್ವ ವಹಿಸಿದ್ದರು. ಮುಖಂಡರಾದ ಮಹಾವೀರ ಮೋಹಿತೆ, ದಸ್ತಗೀರ ಕಾಗವಾಡೆ, ಭೀಮಪ್ಪ ಬದನಿಕಾಯಿ, ಎನ್. ಎಸ್. ಚೌಗುಲಾ, ರೇವಣ್ಣ ಸರವ, ಲಕ್ಷ್ಮಣರಾವ್ ಚಿಂಗಳೆ, ಆರ್.ಎಂ. ಗಸ್ತಿ, ಸದಾಶಿವ ಠಕ್ಕನ್ನವರ ಹಾಗೂ ಕಾರ್ಯಕರ್ತರು ಇದ್ದರು.

ಕುಡಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸೈಕಲ್ ಜಾಥಾ ಸಮಾರೋಪ ಸಮಾರಂಭದಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.