ADVERTISEMENT

ಬೆಳಗಾವಿ:ಧರ್ಮಸ್ಥಳಕ್ಕೆ ಅವಮಾನ ಖಂಡಿಸಿ ಹಿಂದೂ ಸಮಾಜದ ಮುಖಂಡರಿಂದ ಮೌನ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 11:02 IST
Last Updated 19 ಆಗಸ್ಟ್ 2025, 11:02 IST
   

ಬೆಳಗಾವಿ: ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಧರ್ಮಸ್ಥಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಹಿಂದೂ ಸಮಾಜದ ಮುಖಂಡರು ನಗರದಲ್ಲಿ ಮಂಗಳವಾರ ಮೌನ ಪ್ರತಿಭಟನೆ ನಡೆಸಿದರು.

‘ಧರ್ಮಸ್ಥಳಕ್ಕೆ ಕಳಂಕ ತರಲು ಯತ್ನಿಸುತ್ತಿರುವವರ ವಿರುದ್ಧ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ರಾಜ್ಯದ ವಿವಿಧ ಜಿಲ್ಲೆಗಳಿಂದ ‘ಧರ್ಮಸ್ಥಳ ಚಲೋ’ ಚಳವಳಿ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ಕೊಟ್ಟರು.

ಧಾರಾಕಾರ ಮಳೆಯನ್ನೂ ಲೆಕ್ಕಿಸದೆ ಇಲ್ಲಿನ ಧರ್ಮವೀರ ಸಂಭಾಜಿ ವೃತ್ತದಲ್ಲಿ ಅಪಾರ ಸಂಖ್ಯೆಯಲ್ಲಿ ಸಮಾವೇಶಗೊಂಡ ಜನರು, ಕಿರ್ಲೋಸ್ಕರ್‌ ರಸ್ತೆ, ಶನಿವಾರ ಖೂಟ್‌, ಕಾಕತಿವೇಸ್‌, ರಾಣಿ ಚನ್ನಮ್ಮನ ವೃತ್ತ ಮಾರ್ಗವಾಗಿ ಸಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದರು.

ADVERTISEMENT

ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಹೆಜ್ಜೆ ಹಾಕಿದ ಜನರು, ಧರ್ಮಸ್ಥಳಕ್ಕೆ ಅಪಖ್ಯಾತಿ ತರಲು ಪ್ರಯತ್ನಿಸುವವರ ವಿರುದ್ಧ ಫಲಕಗಳನ್ನು ಪ್ರದರ್ಶಿಸಿದರು. ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನಗಳ ಜನರು ಕೊಡೆ ಹಿಡಿದುಕೊಂಡು, ರೇನ್‌ಕೋಟ್‌ ಧರಿಸಿಯೇ ಸಾಗಿದರು.

ಶಾಸಕ ಅಭಯ ಪಾಟೀಲ, ‘ಬೇರೆ ಧರ್ಮಗಳ ಬಗ್ಗೆ ಅವಹೇಳನಕಾರಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಹಾಕುವವರ ವಿರುದ್ಧ ರಾಜ್ಯ ಸರ್ಕಾರ ಕ್ರಮ ವಹಿಸುತ್ತದೆ. ಆದರೆ, ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಪೋಸ್ಟ್‌ಗಳನ್ನು ಹಾಕಿದ್ದರೂ ಮೌನವಾಗಿದೆ. ಧರ್ಮಸ್ಥಳದ ವಿರುದ್ಧ ಪಿತೂರಿ ನಡೆಸುವವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ, ನಾವು ‘ಧರ್ಮಸ್ಥಳ ಚಲೋ’ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ. ಆಗ ಪ್ರತಿ ಜಿಲ್ಲೆಯಿಂದ 50 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿ, ಕಾನು ಕೈಗೆತ್ತಿಕೊಳ್ಳುತ್ತಾರೆ. ಇದನ್ನು ನಿಯಂತ್ರಿಸುವುದು ಸರ್ಕಾರಕ್ಕೆ ಕಷ್ಟವಾಗುತ್ತದೆ’ ಎಂದರು.

ರಾಜ್ಯಸಭೆ ಮಾಜಿ ಸದಸ್ಯ ಪ್ರಭಾಕರ ಕೋರೆ, ‘ಕರ್ನಾಟಕದಲ್ಲಿ ಈವರೆಗೆ ರಾಜಕಾರಣ ನಡೆಯುತ್ತಿತ್ತು. ಆದರೆ, ಈಗ ಪ್ರಥಮ ಬಾರಿ ಧರ್ಮದ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ. ಧರ್ಮಸ್ಥಳದ ಖ್ಯಾತಿ ಮತ್ತು ವೀರೇಂದ್ರ ಹೆಗ್ಗಡೆ ಅವರ ಬೆಳವಣಿಗೆ ಸಹಿಸದವರು ಪಿತೂರಿ ನಡೆಸುತ್ತಿದ್ದಾರೆ. ತನಿಖೆಗಾಗಿ ರಾಜ್ಯ ಸರ್ಕಾರ ಧರ್ಮಸ್ಥಳಕ್ಕೆ ಹೋಗುವ ಮುನ್ನವೇ ಯೋಚಿಸಬೇಕಿತ್ತು’ ಎಂದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ‘800 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿದ ಧರ್ಮಸ್ಥಳವನ್ನು ಗುರಿಯಾಗಿಸಲಾಗಿದೆ. ಈ ಪ್ರಕರಣದಲ್ಲಿ ಎಸ್ಐಟಿಗೆ ಯಾವ ‍ಪುರಾವೆಯೂ ಸಿಕ್ಕಿಲ್ಲ. ಧರ್ಮ ರಕ್ಷಣೆಗಾಗಿ ಈಗ ಎಲ್ಲ ಹಿಂದೂಗಳು ಒಗ್ಗಟ್ಟಾಗಿದ್ದಾರೆ’ ಎಂದು ತಿಳಿಸಿದರು.

ಬೆಳಗಾವಿಯ ರುದ್ರಮಠದ ಹರಿಗುರು ಮಹಾರಾಜರು, ‘ಧಾರಾಕಾರ ಮಳೆ ಮಧ್ಯೆಯೂ ಮೌನ ಪ್ರತಿಭಟನೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವ ಮೂಲಕ ಹಿಂದೂಗಳೆಲ್ಲ ಒಗ್ಗಟ್ಟಾಗಿದ್ದೇವೆ. ಹಿಂದೂ ಸಂಸ್ಕೃತಿ ಮತ್ತು ಯಾತ್ರಾ ಕೇಂದ್ರಗಳ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂಬ ಸಂದೇಶ ನೀಡಿದ್ದೇವೆ’ ಎಂದು ಹೇಳಿದರು.

ಬೈಲಹೊಂಗಲದ ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ‘ಸತ್ಯ ಯಾವುದಕ್ಕೂ ಹೆದರುವುದಿಲ್ಲ. ನಾವೆಲ್ಲರೂ ಸತ್ಯ ಮತ್ತು ಧರ್ಮಸ್ಥಳದ ಪರವಾಗಿ ನಿಲ್ಲುತ್ತೇವೆ’ ಎಂದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ‘ಧರ್ಮಸ್ಥಳ ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ. ಅದರ ವಿರುದ್ಧ ಪಿತೂರಿ ಮಾಡುತ್ತಿರುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಂಚಾಕ್ಷರಿ ಸ್ವಾಮೀಜಿ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿದರು. ಮಾಜಿ ಶಾಸಕ ಸಂಜಯ ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ಮುರುಘೇಂದ್ರಗೌಡ ಪಾಟೀಲ ಇತರರಿದ್ದರು.

ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿದ್ದ ತಮ್ಮಿಂದ ಮನವಿ ಸ್ವೀಕರಿಸಲು ಬೇಗ ಬಾರದ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ವಿರುದ್ಧ ಶಾಸಕ ಅಭಯ ಪಾಟೀಲ ಮತ್ತು ಪ್ರತಿಭಟನಕಾರರು ತರಾಟೆಗೆ ತೆಗೆದುಕೊಂಡರು. ‘ವಿವಿಧ ಮಠಾಧೀಶರನ್ನು ಕಾಯುವಂತೆ ಮಾಡಿದ್ದು ಸರಿಯಲ್ಲ’ ಎಂದು ಹರಿಹಾಯ್ದರು.

‘ನಾನು ಗೋಕಾಕದಲ್ಲಿನ ಪ್ರವಾಹ ಪರಿಸ್ಥಿತಿ ಪರಿಶೀಲಿಸುತ್ತಿದ್ದೆ. ಹಾಗಾಗಿ ಮನವಿ ಸ್ವೀಕರಿಸಲು ಬರುವುದಕ್ಕೆ ತಡವಾಯಿತು’ ಎಂದು ರೋಷನ್ ಕ್ಷಮೆಯಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.