ADVERTISEMENT

ವಿದ್ಯುತ್‌ ತಂತಿ ತಗಲಿ ಸಾವು: ಪರಿಹಾರ ವಿತರಣೆ

ಮೃತ ರೈತ ದಂಪತಿ ಕುಟುಂಬಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸಾಂತ್ವನ, ಫೌಂಡೇಷನ್‌ನಿಂದ ನೆರವು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2023, 14:30 IST
Last Updated 7 ಆಗಸ್ಟ್ 2023, 14:30 IST
ಬೆಳಗಾವಿ ತಾಲ್ಲೂಕಿನ ಬಿಜಗರಣಿ ಗ್ರಾಮದಲ್ಲಿ ಭಾನುವಾರ ವಿದ್ಯುತ್ ತಂತಿ ತಗಲಿ ಮೃತಪಟ್ಟ ಅಮಿತ್ ದೇಸಾಯಿ ಹಾಗೂ ಲತಾ ಅವರ ಕುಟುಂಬದವರಿಗೆ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸೋಮವಾರ ಸಾಂತ್ವನ ಹೇಳಿ, ನೆರವಿನ ಚೆಕ್‌ ನೀಡಿದರು
ಬೆಳಗಾವಿ ತಾಲ್ಲೂಕಿನ ಬಿಜಗರಣಿ ಗ್ರಾಮದಲ್ಲಿ ಭಾನುವಾರ ವಿದ್ಯುತ್ ತಂತಿ ತಗಲಿ ಮೃತಪಟ್ಟ ಅಮಿತ್ ದೇಸಾಯಿ ಹಾಗೂ ಲತಾ ಅವರ ಕುಟುಂಬದವರಿಗೆ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸೋಮವಾರ ಸಾಂತ್ವನ ಹೇಳಿ, ನೆರವಿನ ಚೆಕ್‌ ನೀಡಿದರು   

ಬೆಳಗಾವಿ: ತಾಲ್ಲೂಕಿನ ಬಿಜಗರಣಿ ಗ್ರಾಮದಲ್ಲಿ ಭಾನುವಾರ ಹೊಲದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ, ವಿದ್ಯುತ್ ತಂತಿ ತಗಲಿ ಸ್ಥಳದಲ್ಲೇ ಮೃತಪಟ್ಟ ರೈತ ದಂಪತಿಯ ಕುಟುಂಬಕ್ಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸಾಂತ್ವನ ಹೇಳಿದರು.

ಬಿಜಗರಣಿ ಗ್ರಾಮದ ಅಮಿತ್ ದೇಸಾಯಿ ಹಾಗೂ ಲತಾ ದಂಪತಿ ಹೊಲದಲ್ಲಿ ಕೆಲಸ ಮಾಡುವ ವೇಳೆ, ಆಕಸ್ಮಿಕವಾಗಿ ಹರಿದುಬಿದ್ದ ವಿದ್ಯುತ್‌ ತಂತಿ ತುಳಿದು ಮೃತಪಟ್ಟರು. ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದ ಸಚಿವೆ, ಕುಟುಂಬದವರಿಗೆ ಧೈರ್ಯ ಹೇಳಿದರು. ಮಗಳು ಹಾಗೂ ಅಳಿಯನನ್ನು ಕಳೆದುಕೊಂಡು ರೋಧಿಸುತ್ತಿದ್ದ ಚಂದ್ರಮಾಲಾ ದೇಸಾಯಿ ಅವರನ್ನು ಸಂತೈಸಿದರು. ಲಕ್ಷ್ಮಿತಾಯಿ ಫೌಂಡೇಷನ್ ವತಿಯಿಂದ ಆರ್ಥಿಕ ಸಹಾಯ ನೀಡಿದ ಸಚಿವೆ, ಸರ್ಕಾರದಿಂದಲೂ ಪರಿಹಾರ ಬಿಡುಗಡೆ ಮಾಡಿಸಿ ಕೊಡುವುದಾಗಿ ಭರವಸೆ ನೀಡಿದರು.

‘ದುಡಿಯಲು ಹೋದ ದಂಪತಿ ಶವವಾಗಿ ಮರಳಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ. ಅಮಿತ್‌ ಹಾಗೂ ಲತಾ ಅವರಿಗೆ ಎರಡು ವರ್ಷದ ಪುಟ್ಟ ಮಗು ಕೂಡ ಇದೆ. ಜಗತ್ತಿನ ಪರಿವೇ  ಇಲ್ಲದ ಸಂದರ್ಭದಲ್ಲಿ ಮಗು ತನ್ನ ಹೆತ್ತವರನ್ನು ಕಳೆದುಕೊಂಡಿದೆ. ಈ ಘಟನೆ ನನಗೆ ತೀವ್ರ ನೋವು ತಂದಿದೆ’ ಎಂದರು.

ADVERTISEMENT

ತಹಶೀಲ್ದಾರ್‌, ಉಪ ವಿಭಾಗಾಧಿಕಾರಿ, ಹೆಸ್ಕಾಂ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿ ಕೂಡ ಇದ್ದರು.

ಬೆಕ್ಕಿನಕೇರಿಗೆ ಭೇಟಿ: ತಮ್ಮ ಹೊಲದಲ್ಲಿ ಕಬ್ಬಿನ ಬೆಳೆಗೆ ಕ್ರಿಮಿನಾಶಕ ಹೊಡೆಯುವ ಸಮಯದಲ್ಲಿ ವಿದ್ಯುತ್ ತಂತಿ ತಗಲಿ ಮೃತಪಟ್ಟಿದ್ದ ಬೆಕ್ಕಿನಕೇರಿ ಗ್ರಾಮದ ಭರಮಾ ಸು. ಚಿಕ್ಕೆ ಅವರ ಕುಟುಂಬಕ್ಕೂ ಸಚಿವೆ ಸಾಂತ್ವನ ಹೇಳಿದರು.

ಭರಮಾ ಚಿಕ್ಕೆ ಅವರು ಹೊಲದಲ್ಲಿ ಹರಿದು ಬಿದ್ದಿದ್ದ ವಿದ್ಯುತ್ ತಂತಿ ಗಮನಿಸಿದೆ ತುಳಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟರು. ಇದಾದ ಬಳಿಕ ಅವರ ಪತ್ನಿ ಸಹ ಮಾನಸಿಕ ಅಸ್ವಸ್ಥರಾಗಿ ಮೃತಪಟ್ಟಿದ್ದರು.

ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ, ‘ಭರಮಾ ಅವರು ದುರ್ಮರಣಕ್ಕೀಡಾದ ಹಾಗೂ ಅವರ ಪತ್ನಿ ಸಹ ಮಾನಸಿಕ ಅಸ್ವಸ್ಥರಾಗಿ ಮೃತಪಟ್ಟ ಸುದ್ದಿ ಕೇಳಿ ಮನಸ್ಸಿಗೆ ತೀವ್ರ ನೋವೆನಿಸಿದೆ. ಮೃತರ ಮಕ್ಕಳಿಗೆ ಧೈರ್ಯವನ್ನು ಹೇಳಿದ್ದೇನೆ. ಮುಂದೆಯೂ ಅವರ ಕಷ್ಟ– ನಷ್ಟಗಳಿಗೆ ಸ್ಪಂದಿಸಲು ಬದ್ಧವಾಗಿದ್ದೆನೆ. ಮಕ್ಕಳು ಯಾವುದೇ ಕಾರಣಕ್ಕೂ ದೃತಿಗೆಡದಿರುವಂತೆ ತಿಳಿಸಿದ್ದೇನೆ’ ಎಂದರು.

ಇದೇ ವೇಳೆ ಅವರು ರಾಜ್ಯ ಸರ್ಕಾರ ನೀಡಿದ ₹5 ಲಕ್ಷದ ಪರಿಹಾರದ ಚೆಕ್‌ ಕೂಡ ಹಸ್ತಾಂತರಿಸಿದರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಗ್ರಾಮದ ಮುಖಂಡರು ಇದ್ದರು.

ಬೆಳಗಾವಿ ತಾಲ್ಲೂಕಿನ ಬೆಕ್ಕಿನಕೇರಿಯಲ್ಲಿ ಈಚೆಗೆ ವಿದ್ಯುತ್‌ ತಂತಿ ತಗಲಿ ಮೃತಪಟ್ಟ ಭರಮಾ ಅವರ ಕುಟುಂಬಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸೋಮವಾರ ಪರಿಹಾರ ಧನದ ಚೆಕ್‌ ನೀಡಿದರು

Highlights - ಮೃತ ದಂಪತಿಗೆ 2 ವರ್ಷದ ಪುಟ್ಟ ಮಗು ಮಗುವಿನ ಸ್ಥಿತಿ ಕಂಡು ಮರುಗಿದ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಧೈರ್ಯಗೆಡದಂತೆ ಕುಟುಂಬದವರಿಗೆ ಸಾಂತ್ವನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.