ಮನೆಗೆ ಮರಳಿದ ನಾಯಿಗೆ ಮಾಲೆ ಹಾಕಿ ಸ್ವಾಗತ
– ಪ್ರಜಾವಾಣಿ ಚಿತ್ರ
ಬೆಳಗಾವಿ: ಮಹಾರಾಷ್ಟ್ರದ ಪಂಢರಪುರದಲ್ಲಿ ತಪ್ಪಿಸಿಕೊಂಡಿದ್ದ ನಾಯಿಯು ತನ್ನ ಮಾಲೀಕರನ್ನು ಹುಡುಕಿ ಬಂದಿದೆ. 195 ಕಿ.ಮೀ ರಸ್ತೆಯನ್ನು ನಾಲ್ಕು ದಿನ ಕ್ರಮಿಸಿ, ಜುಲೈ 22ರಂದು ಮನೆ ಸೇರಿದೆ.
ಆಷಾಢ ಏಕಾದಶಿ ಪ್ರಯುಕ್ತ ವಿಠ್ಠಲ ದರ್ಶನಕ್ಕೆ ನಿಪ್ಪಾಣಿ ತಾಲ್ಲೂಕಿನ ಯಮಗರ್ಣಿಯ ಸಂತರು ಪಂಢರಪುರಕ್ಕೆ ತೆರಳಿದ್ದರು. ತಂಡದಲ್ಲಿದ್ದ ಜ್ಞಾನದೇವ ಕುಂಬಾರ ಜೊತೆ ಅವರ ಸಾಕುನಾಯಿ ‘ಮಹಾರಾಜ’ ಕೂಡ ಇತ್ತು. ಆಗ ಆಕಸ್ಮಿಕವಾಗಿ ತಪ್ಪಿಸಿಕೊಂಡ ನಾಯಿ ಮರಳಿ, ಗೂಡು ಸೇರಿತು.
‘ಆರು ವರ್ಷಗಳಿಂದ ‘ಮಹಾರಾಜ’ ನಾಯಿ ಸಾಕುತ್ತಿರುವೆ. ಜುಲೈ 6ರಂದು 140 ಮಂದಿ ನಾವೆಲ್ಲರೂ ಪಂಢರಪುರಕ್ಕೆ ಪಾದಯಾತ್ರೆ ಸಾಗುವಾಗ ನಾಯಿಯೂ ಜೊತೆಗಿತ್ತು. ಜುಲೈ 18ರಂದು ಮರಳಿದೆವು. ಆದರೆ, ತಪ್ಪಿಸಿಕೊಂಡ ನಾಯಿಯು 4 ದಿನಗಳ ಬಳಿಕ ಮನೆಗೆ ಬಂದಿದೆ. ಇದರಿಂದ ಅಚ್ಚರಿಗೊಂಡ ಗ್ರಾಮಸ್ಥರು ಅದಕ್ಕೆ ಮಾಲೆ ಮತ್ತು ಗುಲಾಲು ಹಾಕಿ, ಸಂಭ್ರಮಿಸಿದ್ದಾರೆ’ ಎಂದು ಜ್ಞಾನದೇವ ಕುಂಬಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.