ADVERTISEMENT

ಯಮಕನಮರಡಿ: ಐದೂ ಶುದ್ಧ ನೀರಿನ ಘಟಕ ಬಂದ್‌

ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ ಹತ್ತರಗಿ ಗ್ರಾಮದ ಜನ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 4:31 IST
Last Updated 27 ಮಾರ್ಚ್ 2024, 4:31 IST
ಹತ್ತರಗಿಯ ಇಂದಿರಾನಗರ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ
ಹತ್ತರಗಿಯ ಇಂದಿರಾನಗರ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡಿದೆ   

ಯಮಕನಮರಡಿ: ಸಮೀಪದ ಹತ್ತರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರುವ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು ಮೂರು ವರ್ಷ ಕಳೆದಿದೆ. ಇದು ಸ್ಥಾಪನೆ ಆಗಿ ಕೆಲವೇ ತಿಂಗಳು ಮಾತ್ರ ಕೆಲಸ ಮಾಡಿದೆ.

ಬಂದ್‌ ಆದ ಬಳಿಕ ಇಲ್ಲಿಯವರೆಗೆ ಯಾವೊಬ್ಬ ಅಧಿಕಾರಿ ಅಥವಾ ಸ್ಥಳೀಯ ಜನಪ್ರತಿನಿಧಿ ಇದರ ದುರಸ್ತಿಗೆ ಮನಸ್ಸು ಮಾಡಿಲ್ಲ. ಇದರಿಂದ ಊರಿನ ಜನ ಶುದ್ಧ ನೀರಿಗೆ ‍ಪರದಾಡುವುದು ಇನ್ನೂ ತಪ್ಪಿಲ್ಲ.

ಹತ್ತರಗಿ ಗ್ರಾಮ ಪಂಚಾಯಿತಿಗೆ ಐದು ಶುದ್ಧ ನೀರಿನ ಘಟಕಗಳು ಮಂಜೂರಾಗಿದ್ದು, ಎಲ್ಲವನ್ನೂ ಉದ್ಘಾಟಿಸಲಾಗಿದೆ. ಆದರೆ, ಕೆಲವು ಈಗಾಗಲೇ ತುಕ್ಕು ಹಿಡಿಯುವ ಹಂತಕ್ಕೆ ಹಾಳಾಗಿವೆ. ಮತ್ತೆರಡು ಘಟಕಗಳಿಗೆ ಸಮರ್ಪಕ ವಿದ್ಯುತ್‌ ಪೂರೈಕೆ ಇಲ್ಲ. ಇದರಿಂದಾಗಿ ಜನರು ವ್ಯವಸ್ಥೆಗೆ ಹಿಡಿಶಾಪ ಹಾಕುವುದು ನಿಂತಿಲ್ಲ.

ADVERTISEMENT

ಹತ್ತರಗಿ ಘಟಕ ಸ್ಥಗಿತಗೊಂಡ ಕಾರಣ ಯಮಕನಮರಡಿ ಗ್ರಾಮ ಪಂಚಾಯಿತಿ ಬಳಿ ಇರುವ ಘಟಕಕ್ಕೆ ಹೋಗಿ ಶುದ್ಧ ನೀರು ತರುವ ಪರಿಸ್ಥಿತಿ ಬಂದೊದಗಿದೆ. ಅಲ್ಲದೇ, ಈ ಘಟಕ ಇರುವ ಸ್ಥಳದಲ್ಲಿ ಜನ ಸಂಚಾರ ಇದೆ. ನೀರು ಸಂಗ್ರಹ ಹಾಗೂ ಸಾಗಣೆಗೆ ಗುದ್ದಾಟ ತಪ್ಪಿಲ್ಲ. ಈ ಎರಡೂ ಗ್ರಾಮಗಳು ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು, ವಾಣಿಜ್ಯ ಕೇಂದ್ರಗಳಾಗಿ ಬೆಳೆದಿವೆ. ನಿತ್ಯ ಸಾವಿರಾರು ವ್ಯಾಪಾರಿಗಳ, ಗ್ರಾಹಕರ ಓಡಾಟ ಇದ್ದೇ ಇರುತ್ತದೆ. ಶುದ್ಧ ನೀರಿನ ಘಟಕಗಳು ಕೈ ಕೊಟ್ಟಿದ್ದರಿಂದ ವರ್ತಕರು, ಗ್ರಾಹಕರು ಕೂಡ ಬಾಯಾರಿ ಬಸವಳಿಯಬೇಕಾಗಿದೆ. ಸಾಧ್ಯತೆ ಇರುವವರು ಅನಿವಾರ್ಯವಾಗಿ ಖರೀದಿಸಿ ಕುಡಿಯುತ್ತಾರೆ. ಬಡ ವರ್ತಕರು, ಸಂತೆಗೆ ಬರುವ ಜನರು ಮಾತ್ರ ಪರಿತಪಿಸಬೇಕಾಗಿದೆ.

ಹೊರಗಿನಿಂದ ಬಂದ ಜನರಿಗೆ ಕುಡಿಯಲು ಅನುಕೂಲ ಆಗಲಿ ಎಂದು ಹೋಟೆಲ್‌ನ ಕೆಲವು ವ್ಯಾಪಾರಿಗಳು ಪ್ಲಾಸ್ಟಿಕ್‌ ಕೊಡ, ಮಣ್ಣಿನ ಬಿಂದಿಗೆಯಲ್ಲಿ ನೀರು ತುಂಬಿ ಇಡುತ್ತಿದ್ದಾರೆ. ಆದರೆ, ಇವು ಕೂಡ ಅನಾರೋಗ್ಯ ತರುವ ಆತಂಕ ಇದ್ದೇ ಇದೆ.

ಇತರ ಗ್ರಾಮಗಳಲ್ಲೂ ಇದೇ ಕತೆ: ಹತ್ತರಗಿ, ಆನಂದಪೂರ, ಇಂದಿರಾನಗರ, ದಾದಬಾನಹಟ್ಟಿ, ಹತ್ತರಗಿ ಆರ್ಸಿ ಗ್ರಾಮದಲ್ಲಿ ಜನತೆಗೆ ನೀರು ಸರಬರಾಜು ಸರಿಯಾಗಿ ಆಗುತ್ತಿಲ್ಲ.

‘ಶುದ್ಧ ನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳಿ ಎಂದು ಇಲಾಖೆಯವರು ತಿಂಗಳಿಗೊಮ್ಮೆ ಸಭೆ ನಡೆಸುತ್ತಾರೆ. ಆದರೆ, ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿರುವ ಕುರಿತು ಯಾರೊಬ್ಬರೂ ಗಮನಿಸುವುದಿಲ್ಲ’ ಎಂದು ಜನರು ಗ್ರಾಮ ಪಂಚಾಯಿತಿ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಯಮಕನಮರಡಿ ಕ್ಷೇತ್ರದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲಸ ಮಾಡುತ್ತಿವೆ. ಉಳಿದೆಲ್ಲ ಕಡೆ ಸ್ಥಗಿತಗೊಂಡಿವೆ. ಇವುಗಳ ದುರಸ್ತಿ ಕೈಗೊಂಡು ಜನರ ಆರೋಗ್ಯ ಕಾಪಾಡಬೇಕು. ಸಾರ್ವಜನಿಕ ಸ್ಥಳದಲ್ಲಿ ಟ್ಯಾಂಕ್ ನಿರ್ಮಾಣ ಮಾಡಿ ಎಂದು ಕ್ಷೇತ್ರದ ಶಾಸಕರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಪಿಡಿಒ ಅವರಿಗೆ ಸೂಚಿಸಿದ್ದರೂ, ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜಕರಿಂದ ಕೇಳಿ ಬಂದ ದೂರು.

ಐದು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದರೂ ಸದ್ದಳಕೆಯಾಗುತ್ತಿಲ್ಲ. ನೀರಿಗಾಗಿ ಜನ ಪರದಾಡುವುದು ತಪ್ಪಿಲ್ಲ. ಪಂಚಾಯಿತಿ ಸದಸ್ಯರು ಕಣ್ತೆರೆದು ನೋಡುತ್ತಿಲ್ಲ

-ಮಾರುತಿ ಅಷ್ಠಗಿ ಜೆಡಿಎಸ್ ಮುಖಂಡ

ಎರಡು ದಿನಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು

-ಆನಂದ ಹೊಳೆನವರ ಪಿಡಿಒ ಹತ್ತರಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.