ADVERTISEMENT

ಮಳೆ ನಿಂತರೂ ಪ್ರವಾಹ ನಿಂತಿಲ್ಲ- ತಗ್ಗು ಪ್ರದೇಶಗಳ ಜನ- ಜಾನುವಾರು ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 14:05 IST
Last Updated 24 ಜುಲೈ 2021, 14:05 IST
ಗೋಕಾಕ ನಗರ ಮತ್ತು ಹೊರವಲಯದಲ್ಲಿ ಘಟಪ್ರಭೆಯ ಮಹಾಪೂರ ಶನಿವಾರ ಆವರಿಸಿದ್ದ ನೋಟ
ಗೋಕಾಕ ನಗರ ಮತ್ತು ಹೊರವಲಯದಲ್ಲಿ ಘಟಪ್ರಭೆಯ ಮಹಾಪೂರ ಶನಿವಾರ ಆವರಿಸಿದ್ದ ನೋಟ   

ಗೋಕಾಕ (ಬೆಳಗಾವಿ ಜಿಲ್ಲೆ): ನಗರ ಹಾಗೂ ತಾಲ್ಲೂಕಿನಲ್ಲಿ ಶನಿವಾರ ರಾತ್ರಿಯಿಂದ ಮಳೆ ನಿಂತಿದ್ದರೂ ಘಟಪ್ರಭಾ ಮತ್ತು ಮಾರ್ಕಂಡೇಯ ನದಿಗಳಲ್ಲಿ ಪ್ರವಾಹ ಉಂಟಾಗಿದೆ. ಪರಿಣಾಮ ಗೋಕಾಕ ಜಲಪಾತ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ಚಿಕ್ಕೋಳಿ ಸೇತುವೆ ಮತ್ತು ಉತ್ತರ ಭಾಗದ ಲೋಳಸೂರ ಸೇತುವೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.

ಸಂಕೇಶ್ವರ-ನರಗುಂದ ರಾಜ್ಯ ಹೆದ್ದಾರಿ ಹಾಗೂ ಜತ್ತ-ಜಾಂಬೋಟಿ ಅಂತರರಾಜ್ಯ ಹೆದ್ದಾರಿಯ ಭಾಗವಾಗಿರುವ ಲೋಳಸೂರ ಸೇತುವೆ ಮುಳುಗಡೆ ಆಗಿರುವುದರಿಂದ, ವಾಹನಗಳು ಪರ್ಯಾಯ ಮಾರ್ಗದ ಮೂಲಕ (40 ಕಿ.ಮೀ. ದೂರ ಕ್ರಮಿಸಿ) ಸಂಚರಿಸಬೇಕಾಗಿದೆ. ಡೋಹರ ಗಲ್ಲಿ, ಉಪ್ಪಾರ ಓಣಿ, ಕುಂಬಾರ ಓಣಿ, ಮೋಕಾಶಿ ಗಲ್ಲಿ, ಕಿಲ್ಲೆ, ಪುಂಡೀಕೇರಿ ಓಣಿ ಮೊದಲಾದ ತಗ್ಗು ಪ್ರದೇಶಗಳನ್ನು ಪ್ರವಾಹ ಆವರಿಸಿದೆ. ಜನ–ಜಾನುವಾರುಗಳನ್ನು ಸ್ಥಳಾಂತರಿಸಲಾಗಿದೆ. ತಾಲ್ಲೂಕು ಆಡಳಿತದಿಂದ ಎಪಿಎಂಸಿ ಆವರಣ, ಸರ್ಕಾರಿ ಕಾಲೇಜು, ನ್ಯೂ ಇಂಗ್ಲಿಷ್‌ ಶಾಲೆಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದಿದೆ. 500 ಮಂದಿ ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ತಹಶೀಲ್ದಾರ್ ಪ್ರಕಾಶ ಹೊಳೆಪ್ಪಗೋಳ, ‘ಅಡಿಬಟ್ಟಿ, ಹಡಗಿನಾಳ, ಕಲಾರಕೊಪ್ಪ, ಮೆಳವಂಕಿ, ಚಿಗಡೊಳ್ಳಿ ಮತ್ತಿತರ ಗ್ರಾಮಗಳ ತಗ್ಗು ಪ್ರದೇಶದ ನಿರಾಶ್ರಿತರು ಹಾಗೂ ದನಕರುಗಳ ರಕ್ಷಣೆಗಾಗಿ ತಾಲ್ಲೂಕು ಆಡಳಿತ ಆಯಾ ಗ್ರಾಮಗಳ ಎತ್ತರ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಕಾಳಜಿ ಕೇಂದ್ರಗಳನ್ನು ತೆರೆದಿದೆ. ಅವುಗಳನ್ನು ನಿರ್ವಹಿಸಲು ಪ್ರತ್ಯೇಕ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

ನದಿ ತೀರದ ಬಳಿಯ ಗೋವಿನಜೋಳ ಮತ್ತು ಕಬ್ಬು ಬೆಳೆಗಳು ಮುಳುಗಡೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.