ADVERTISEMENT

‘ಗಾಂಧಿ ಕನಸು ನನಸಾಗಿಸಲು ಮೋದಿ ಪ್ರಯತ್ನ’

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ್‌ ಕಟೀಲ್‌ ಹೇಳಿಕೆ;

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2019, 12:33 IST
Last Updated 2 ಅಕ್ಟೋಬರ್ 2019, 12:33 IST
ಬೆಳಗಾವಿಯಲ್ಲಿ ಬುಧವಾರ ನಡೆದ ‘ಗಾಂಧೀ ಸಂಕಲ್ಪ ಯಾತ್ರೆ’ಯ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ್‌ ಕಟೀಲ್‌ ಮಾತನಾಡಿದರು.
ಬೆಳಗಾವಿಯಲ್ಲಿ ಬುಧವಾರ ನಡೆದ ‘ಗಾಂಧೀ ಸಂಕಲ್ಪ ಯಾತ್ರೆ’ಯ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ್‌ ಕಟೀಲ್‌ ಮಾತನಾಡಿದರು.   

ಬೆಳಗಾವಿ: ‘ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧಿ ಅವರನ್ನು ಇಷ್ಟು ವರ್ಷ ಅಧಿಕಾರ ನಡೆಸಿದವರು ಮರೆತುಬಿಟ್ಟಿದ್ದರು. ಆದರೆ, ಇಂದಿನ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿ ಅವರ ಕನಸಾದ ಸ್ವಚ್ಛ ಭಾರತ, ಗ್ರಾಮ ಸ್ವರಾಜ್ಯ ಪರಿಕಲ್ಪನೆ, ಸ್ವದೇಶಿ ಚಿಂತನೆಯ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗಳನ್ನು ದೇಶದಾದ್ಯಂತ ಬಿತ್ತುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ್‌ ಕಟೀಲ್‌ ಹೇಳಿದರು.

ನಗರದ ಟಿಳಕವಾಡಿಯ ವೀರಸೌಧ ಆವರಣದಲ್ಲಿ ಮಹಾತ್ಮಾ ಗಾಂಧಿಯವರ 150ನೇ ಜಯಂತಿ ನಿಮಿತ್ತ ಬುಧವಾರ ಬಿಜೆಪಿ ಆಯೋಜಿಸಿದ್ದ ಗಾಂಧಿ ಸಂಕಲ್ಪ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

‘ಅನೇಕ ವರ್ಷಗಳಿಂದ ಬ್ರಿಟಿಷರ ಗುಲಾಮಗಿರಿಯಲ್ಲಿದ್ದ ಭಾರತೀಯರನ್ನು ಮುಕ್ತಿಗೊಳಿಸಲು ಗಾಂಧೀಜಿ ಅವರ ಅವಿರತ ಹೋರಾಟ ಮಾಡಿದ್ದರು. ಚಳವಳಿ, ಸತ್ಯಾಗ್ರಹಗಳ ಮೂಲಕ ಸ್ವಾತಂತ್ರ್ಯ ತಂದು ಕೊಟ್ಟರು. ಅವರು ಕಂಡಿದ್ದ ಸ್ವರಾಜ್ಯ, ರಾಮರಾಜ್ಯದ ಪರಿಕಲ್ಪನೆಯನ್ನು ಬಿಜೆಪಿ ಸಾಕಾರಗೊಳಿಸಲು ಪ್ರಯತ್ನಿಸುತ್ತಿದೆ’ ಎಂದು ಹೇಳಿದರು.

ADVERTISEMENT

‘ರಾಮರಾಜ್ಯದ ಪರಿಕಲ್ಪನೆ ಇಟ್ಟುಕೊಂಡ ಅವರು ರಾಷ್ಟ್ರ ಭಕ್ತಿಯನ್ನು ಹಳ್ಳಿ ಹಳ್ಳಿಗಳಲ್ಲಿ ಶುರು ಮಾಡಿದರು. ಗ್ರಾಮಗಳ ಸ್ವರಾಜ್ಯಕ್ಕಾಗಿ ಜನರನ್ನು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು. ಗ್ರಾಮಗಳ ಚಿಂತನ, ಅಹಿಂಸಾ ಮಾರ್ಗ ಇಟ್ಟುಕೊಂಡು ಹೋರಾಟಕ್ಕೆ ಇಳಿದರು. ಭಗತ್ ಸಿಂಗ್ ಅವರಂಥ ಕ್ರಾಂತಿಕಾರಕ ಹೋರಾಟ ಒಂದೆಡೆಯಾದರೆ, ಇನ್ನೊಂದೆಡೆ ಗಾಂಧಿ ಅವರ ಅಹಿಂಸಾ ಮಾರ್ಗದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು’ ಎಂದರು.

‘ಶಿವಾಜಿ ಮಹಾರಾಜ, ವೀರ ಸಾವರಕರ, ಭಗತ್ ಸಿಂಗ್ ಹಾಗೂ ಇತರ ಹಲವು ನಾಯಕರು ಕೂಡ ಗುಲಾಮಗಿರಿ ತೊಡೆದು ಹಾಕಲು ಅವಿಸ್ಮರಣೀಯ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.

‘ಗಾಂಧಿ, ಸ್ವಾಮಿ ವಿವೇಕಾನಂದ ಅವರಂಥ ಮಹಾನ್‌ ನಾಯಕರು ಹೆಜ್ಜೆ ಇಟ್ಟ ಬೆಳಗಾವಿಯಲ್ಲಿ ಗಾಂಧಿ ಅವರ 150ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಲು ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ’ ಎಂದು ತಿಳಿಸಿದರು.

ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿ, ‘ಗಾಂಧಿ ಅವರ ತತ್ವಗಳನ್ನು ಪ್ರಸಾರ ಮಾಡಲು ದೇಶದ ಪ್ರತಿ ಜಿಲ್ಲೆಯಲ್ಲಿ 150 ಕಿ.ಮೀ. ಪಾದಯಾತ್ರೆ ನಡೆಸಲಾಗುವುದು. ಪ್ಲಾಸ್ಟಿಕ್ ನಿಷೇಧ ಮಾಡಿ ಬಟ್ಟೆಯ ಚೀಲಗಳನ್ನು ಬಳಸುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಪ್ಲಾಸ್ಟಿಕ್‌ದಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ತಡೆಯಲು ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿದೆ. ಪ್ರತಿಯೊಬ್ಬರೂ ಕೈ ಜೋಡಿಸಬೇಕು’ ಎಂದು ಹೇಳಿದರು.

ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮುಖಂಡರಾದ ಡಾ.ವಿಶ್ವನಾಥ ಪಾಟೀಲ, ಸಂಜಯ ಪಾಟೀಲ, ಎಂ.ಬಿ. ಜಿರಲಿ, ಉಜ್ವಲಾ ಬಡವನ್ನಾಚೆ, ಕಿರಣ ಜಾಧವ, ಮಂಗೇಶ ಪವಾರ, ಶಶಿಕಾಂತ ಪಾಟೀಲ ಇತರರು ಇದ್ದರು.

ಈರಣ್ಣ ಕಡಾಡಿ ಸ್ವಾಗತಿಸಿದರು. ಶಾಸಕ ಅಭಯ ಪಾಟೀಲ ವಂದಿಸಿದರು. ಮಹಾನಗರ ಅಧ್ಯಕ್ಷ ರಾಜೇಂದ್ರ ಹರಕುಣಿ ನಿರೂಪಿಸಿದರು. ನಂತರ ಬಿಜೆಪಿ ನಾಯಕರು ಹಾಗೂ ಮುಖಂಡರು ಕಟೀಲ್ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.