ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಸಂಭ್ರಮದಿಂದ ಈದ್–ಮಿಲಾದ್ ಆಚರಿಸಲಾಯಿತು.
ಪ್ರವಾದಿ ಮಹಮ್ಮದ್ ಪೈಗಂಬರ್ ಅವರ 1,500ನೇ ಜನ್ಮದಿನದ ಪ್ರಯುಕ್ತ, ಈ ಬಾರಿ ಹಬ್ಬದ ಸಂಭ್ರಮ ಇಮ್ಮಡಿಗೊಂಡಿತ್ತು. ನಗರದ ವಿವಿಧ ಮಸೀದಿಗಳು, ದರ್ಗಾಗಳು, ಮುಸ್ಲಿಮರ ವ್ಯಾಪಾರಿ ಮಳಿಗೆಗಳು ಮತ್ತು ಅಂಗಡಿಗಳು ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸಿದವು.
ಮಧ್ಯಾಹ್ನ ಎಲ್ಲ ಮಸೀದಿಗಳಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ (ಜುಮ್ಮಾ ನಮಾಜ್) ಸಲ್ಲಿಸಿದರು. ನಂತರ ಶುಭಾಶಯ ವಿನಿಮಯ ಮಾಡಿಕೊಂಡರು. ಮಹಮ್ಮದ್ ಪೈಗಂಬರ್ ಅವರನ್ನು ಸ್ಮರಿಸಿದರು.
ಬೆಳಗಾವಿಯ ಪೊಲೀಸ್ ಕೇಂದ್ರಸ್ಥಾನದ ಮಹಮ್ಮದೀಯಾ ಮಸೀದಿಯಲ್ಲಿ ಧರ್ಮಬೋಧನೆ ಮಾಡಿದ ಧರ್ಮಗುರು ಖಾರಿ ಜಾಕೀರಹುಸೇನ್ ಆರೀಫ್ ಖಾನ್, ‘ಪೈಗಂಬರರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ಸಾಗಬೇಕು. ಸಮಾಜದಲ್ಲಿ ಸಹಬಾಳ್ವೆಯಿಂದ ಬದುಕಬೇಕು’ ಎಂದು ಕರೆಕೊಟ್ಟರು.
ಸೆ.14ಕ್ಕೆ ಮೆರವಣಿಗೆ: ಪ್ರತಿವರ್ಷ ಈದ್–ಮಿಲಾದ್ ದಿನದಂದು ಕೋಟೆ ರಸ್ತೆಯಿಂದ ಕ್ಯಾಂಪ್ ಪ್ರದೇಶದಲ್ಲಿನ ಹಜರತ್ ಸೈಯದ್ ಅಸದ್‌ಖಾನ್ ದರ್ಗಾ ಆವರಣದವರೆಗೆ ಬೃಹತ್ ಮೆರವಣಿಗೆ ನಡೆಯುತ್ತಿತ್ತು. ಸಾವಿರಾರು ಜನರು ಇದರಲ್ಲಿ ಭಾಗವಹಿಸುತ್ತಿದ್ದರು. ಇದರೊಂದಿಗೆ ವಿವಿಧ ಬಡಾವಣೆಗಳಲ್ಲಿ ಮೆಕ್ಕಾ, ಮದೀನಾ ಸೇರಿದಂತೆ ವಿಶ್ವಪ್ರಸಿದ್ಧ ಪ್ರಾರ್ಥನಾ ಸ್ಥಳಗಳ ಮಾದರಿಗಳನ್ನು ಪ್ರದರ್ಶನ ಮಾಡಲಾಗುತ್ತಿತ್ತು.
ಆದರೆ, ಸೆ.6ರಂದು ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ ಇದೆ. ಗಣೇಶ ಮೂರ್ತಿಗಳ ಮೆರವಣಿಗೆ ಮೊದಲು ಅದ್ದೂರಿಯಾಗಿ ನಡೆಯಲಿ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸರಿಗೂ ಅನುಕೂಲವಾಗಲಿ ಎಂದು ಮುಸ್ಲಿಮರು ಈದ್–ಮಿಲಾದ್ ಮೆರವಣಿಗೆಯನ್ನು ಸೆ.14ಕ್ಕೆ ಮುಂದೂಡಿದ್ದಾರೆ. ಆ ವೇಳೆಯೇ ಪ್ರಾರ್ಥನಾ ಸ್ಥಳಗಳ ಮಾದರಿಗಳನ್ನು ಪ್ರದರ್ಶಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.