ADVERTISEMENT

ಬೆಳಗಾವಿ| ವರ್ಷ ಮುಗಿದರೂ ಪಾಲಿಕೆಗೆ ಬಿಡದ ಗ್ರಹಣ: ಅಧಿಕಾರ ಸ್ವೀಕರಿಸದ ಚುನಾಯಿತರು

ಚುನಾಯಿತರಾಗಿ ವರ್ಷ ಕಳೆದರೂ ಪ್ರಮಾಣವಚನ ಸ್ವೀಕರಿಸಿಲ್ಲ, ಪ್ರಥಮ ಪ್ರಜೆಯೇ ಇಲ್ಲದ ಬೆಳಗಾವಿ ನಗರ

ಇಮಾಮ್‌ಹುಸೇನ್‌ ಗೂಡುನವರ
Published 19 ಸೆಪ್ಟೆಂಬರ್ 2022, 19:30 IST
Last Updated 19 ಸೆಪ್ಟೆಂಬರ್ 2022, 19:30 IST
ಬೆಳಗಾವಿ ಮಹಾನಗರ ಪಾಲಿಕೆ
ಬೆಳಗಾವಿ ಮಹಾನಗರ ಪಾಲಿಕೆ   

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆ ಮುಗಿದು ವರ್ಷ ಕಳೆದರೂ ಆಯ್ಕೆಯಾದ ಸದಸ್ಯರಿಗೆ ಪ್ರಮಾಣ ವಚನ ಸ್ವೀಕರಿಸುವ ಭಾಗ್ಯ ಕೂಡಿಬಂದಿಲ್ಲ. ಇದೇ ಮೊದಲಬಾರಿಗೆ ಪಾಲಿಕೆ ಚುನಾವಣೆ ರಾಜಕೀಯ ಪಕ್ಷಗಳ ಚಿಹ್ನೆ ಆಧಾರದಲ್ಲಿ ನಡೆದಿದ್ದರಿಂದ ತೀವ್ರ ಕುತೂಹಲ ಕೆರಳಿಸಿತ್ತು. ಆದರೆ, ವರ್ಷದ ಬಳಿಕವೂ ಅಧಿಕಾರ ಕೈಗೆ ಸಿಗದ ಕಾರಣ ಹೊಸ ಸದಸ್ಯರು ಇದ್ದೂ ಇಲ್ಲದಂತಾಗಿದೆ.

ತಾವು ಪ್ರತಿನಿಧಿಸುವ ವಾರ್ಡ್‌ನ ಜನರು ಒಂದಿಲ್ಲೊಂದು ಸಮಸ್ಯೆ ಹೊತ್ತು ಮನೆಬಾಗಿಲಿಗೆ ಬರುತ್ತಲೇ ಇದ್ದಾರೆ. ಆದರೆ, ಅವುಗಳನ್ನು ಬಗೆಹರಿಸಲು ಅಧಿಕಾರವಿಲ್ಲ. ಜನರ ಬೇಡಿಕೆಗಳನ್ನು ಗಮನಕ್ಕೆ ತಂದರೆ ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

ಸಿಗದ ಧ್ವಜಾರೋಹಣ ಭಾಗ್ಯ: ಮೇಯರ್‌, ಉಪಮೇಯರ್‌ ಆಯ್ಕೆ ವಿಳಂಬವಾದ ಕಾರಣ ಜನರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಆಗ, ಶಾಸಕ ಅಭಯ ಪಾಟೀಲ, ಈ ಬಾರಿ ಸ್ವಾತಂತ್ರ್ಯ ದಿನದಂದು ಪಾಲಿಕೆ ಆವರಣದಲ್ಲಿ ಬಿಜೆಪಿ ಮೇಯರ್‌ ಅವರೇ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆದರೆ, ನೂತನ ಸದಸ್ಯರಿಗೆ ಧ್ವಜಾರೋಹಣ ಮಾಡುವ ಅವಕಾಶ ಒದಗಿಬರಲಿಲ್ಲ.

ADVERTISEMENT

ತಾವು ಆಯ್ಕೆಯಾಗಿ ವರ್ಷ ಕಳೆದರೂ ಅಧಿಕಾರ ಸಿಗದ್ದರಿಂದ ಅಸಮಾಧಾನಗೊಂಡ ಕಾಂಗ್ರೆಸ್‌ ಹಾಗೂ ಪಕ್ಷೇತರ ಸದಸ್ಯರು ಪಾಲಿಕೆ ಆವರಣದಲ್ಲಿ ಕೇಕ್‌ ಕತ್ತರಿಸಿ, ಸಂಭ್ರಮಾಚರಣೆ ಮಾಡಿದ್ದಾರೆ. ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಜೆಪಿಗಿದೆ ಬಹುಮತ: 2019ರ ಮಾರ್ಚ್‌ 9ರಂದು ಹಿಂದಿನ ಅವಧಿ ಸದಸ್ಯರ ಅಧಿಕಾರವಧಿ ಪೂರ್ಣಗೊಂಡಿತ್ತು. ಆದರೆ, ಮೀಸಲಾತಿ ಸಮಸ್ಯೆಯಿಂದಾಗಿ ಎರಡು ವರ್ಷಗಳ ನಂತರ(2021ರ ಸೆ.3ರಂದು) ಚುನಾವಣೆ ನಡೆದಿತ್ತು. ಸೆ.6ರಂದು ಫಲಿತಾಂಶ ಪ್ರಕಟವಾಗಿತ್ತು. 58 ಸದಸ್ಯರ ಬಲಾಬಲ ಹೊಂದಿರುವ ಪಾಲಿಕೆಯಲ್ಲಿ 35 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಬಹುಮತ ಗಳಿಸಿತ್ತು. ಕಾಂಗ್ರೆಸ್ 10, ಎಐಎಂಐಎಂ 1 ಸ್ಥಾನ ಗೆದ್ದರೆ, 12 ವಾರ್ಡ್‌ಗಳಲ್ಲಿ ಪಕ್ಷೇತರರು ಜಯಭೇರಿ ಬಾರಿಸಿದ್ದರು.

ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಮೇಯರ್ ಸ್ಥಾನ ಹಿಂದುಳಿದ ವರ್ಗ(ಬಿ)ಕ್ಕೆ ಮೀಸಲಾಗಿತ್ತು. ಬಿಜೆಪಿಗೆ ಸ್ಪಷ್ಟ ಬಹುಮತ ಇರುವುದರಿಂದ ಶೀಘ್ರ ನೂತನ ಮೇಯರ್‌ ಮತ್ತು ಉಪಮೇಯರ್‌ ಆಯ್ಕೆಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.

ಮೇಯರ್‌ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉ‍ಪ ಮೇಯರ್‌ ಸ್ಥಾನಕ್ಕೆಪರಿಶಿಷ್ಟ ಜಾತಿ(ಬಿ) ಮಹಿಳೆ ಮೀಸಲಾತಿಯನ್ನೂ ಪ್ರಕಟಿಸಲಾಗಿತ್ತು. ಆದರೆ, ಅಂದಿನ ಪ್ರಾದೇಶಿಕ ಆಯುಕ್ತರಾಗಿದ್ದ ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಮೀಸಲಾತಿ ವಿಚಾರವಾಗಿ ಸುಪ್ರೀಂ ಕೋರ್ಟ್‌ ತೀರ್ಪಿನ ಅನ್ವಯ ಸರ್ಕಾರದಿಂದ ಸ್ಪಷ್ಟನೆ ಕೇಳಿದ್ದರು. ಇದರಿಂದಾಗಿ ನನೆಗುದಿಗೆ ಬಿದ್ದಿರುವ ಮೇಯರ್‌, ಉಪಮೇಯರ್‌ ಆಯ್ಕೆ ಪ್ರಕ್ರಿಯೆ ಇನ್ನೂ ಕಗ್ಗಂಟಾಗಿದೆ.

ಈ ಮಧ್ಯೆ, ಇತ್ತೀಚೆಗೆ ಪಾಲಿಕೆ 24ನೇ ಅವಧಿ ಮೇಯರ್ ಹಾಗೂ ಉಪಮೇಯರ್‌ ಸ್ಥಾನದ ಮೀಸಲಾತಿ ಪ್ರಕಟಸಲಾಗಿದೆೆ. 21ನೇ ಅವಧಿ ಆಯ್ಕೆ ಪ್ರಕ್ರಿಯೆ ನಡೆಯದಿದ್ದರೂ, 24ನೇ ಅವಧಿ ಮೀಸಲಾತಿ ಪ್ರಕಟಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.

*

ಗೋಳು ಕೇಳುವವರ್‍ಯಾರು?

‘ಕಳೆದ ವರ್ಷವೇ ನಮ್ಮ ವಾರ್ಡ್‌ ಪ್ರತಿನಿಧಿಸುವ ಸದಸ್ಯರನ್ನು ಆಯ್ಕೆ ಮಾಡಿದ್ದೇವೆ. ಆದರೆ, ಅವರಿಗೆ ಇನ್ನೂ ಅಧಿಕಾರ ಸಿಕ್ಕಿಲ್ಲ. ಯಾವುದೇ ಬೇಡಿಕೆ ಹೊತ್ತು ಅವರ ಬಳಿ ಹೋದರೂ ನ್ಯಾಯ ಸಿಗುತ್ತಿಲ್ಲ. ಅಧಿಕಾರಿಗಳೂ ಸ್ಪಂದಿಸುತ್ತಿಲ್ಲ. ಹಾಗಾದರೆ, ನಮ್ಮ ಗೋಳು ಕೇಳುವವರ್‍ಯಾರು’ ಎಂದು ರಾಮತೀರ್ಥ ನಗರದ ನಿವಾಸಿ ಅರುಣಾ ಅಳಲು ತೋಡಿಕೊಂಡರು.

*

ಅಕ್ಟೋಬರ್‌ನಲ್ಲಿ ಚುನಾವಣೆ: ಅಭಯ

‘ಬೆಳಗಾವಿ ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಆಯ್ಕೆ ಚುನಾವಣೆ ವಿಳಂಬವಾಗುತ್ತಿರುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ್ದೇನೆ. ಅಕ್ಟೋಬರ್ ಮೊದಲ ವಾರದೊಳಗೆ ಚುನಾವಣೆಗೆ ಇರುವ ಎಲ್ಲ ತೊಡಕುಗಳನ್ನು ನಿವಾರಿಸುತ್ತೇನೆ. ಎರಡನೇ ವಾರದಲ್ಲಿ ಚುನಾವಣೆ ನಡೆಸುತ್ತೇವೆ’ ಎಂದು ಶಾಸಕ ಅಭಯ ಪಾಟೀಲ ‘ಪ್ರಜಾವಾಣಿ’ಗೆ ‍ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.