ADVERTISEMENT

ವಿದ್ಯುತ್ ಸ್ಪರ್ಶದಿಂದ ಶಾಲಾ ಬಾಲಕಿ ಮೃತ ಪ್ರಕರಣ: ‘ಜವಾಬ್ದಾರಿ’ ಹೊರದ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 16:23 IST
Last Updated 6 ಜುಲೈ 2022, 16:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಿಪ್ಪಾಣಿ: ತಾಲ್ಲೂಕಿನ ಡೋಣೆವಾಡಿ ಗ್ರಾಮದ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ವಿದ್ಯುತ್‌ ಸ್ಪರ್ಶದಿಂದ ಬಾಲಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿಕ್ಷಣ ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳು ಒಬ್ಬರ ಮೇಲೊಬ್ಬರು ದೂರು ಹೇಳುವುದರಲ್ಲೇ ನಿರತರಾಗಿದ್ದಾರೆ.

ಶಾಲೆಯಲ್ಲಿ 3ನೇ ತರಗತಿ ಓದುತ್ತಿದ್ದ ಅನುಷ್ಕಾ ಭೇಂಡೆ ಎಂಬ ಬಾಲಕಿ ಇನ್ಯಾರದೋ ನಿರ್ಲಕ್ಷ್ಯಕ್ಕೆ ಬಲಿಯಾದವಳು. ಮುದ್ದು ಮಗುವಿನ ಬಲಿ ಪಡೆದ ಈ ಘಟನಾವಳಿ ವಿವರ ಪಡೆಯಲು ಮುಂದಾದ ‘‍ಪ್ರಜಾವಾಣಿ’ಗೆ ಅಧಿಕಾರಿಗಳು ಹಾರಿಕೆ ಉತ್ತರಗಳನ್ನೇ ನೀಡಿದರು. ಸೋಮವಾರ ಸಾವು ಸಂಭವಿಸಿದ್ದರೂ ಈವರೆಗೆ ಪಾಲಕರಿಗೆ ಸ್ಪಷ್ಟ ಕಾರಣ ಸಿಕ್ಕಿಲ್ಲ.

ಈ ಶಾಲೆಯ ಕಾಂಪೌಂಡ್‌ಗೆ ಹೊಂದಿಕೊಂಡು ಬಾಲಕಿಯರ ಶೌಚಾಲಯವಿದೆ. ಮಧ್ಯಾಹ್ನ ಗೆಳತಿಯರೊಂದೊಗೆ ಶೌಚಕ್ಕೆ ಹೋದ ಬಾಲಕಿ ಮರಳಿ ಬರುವಾಗ ಕಾಲು ಜಾರಿದಳು. ಎದುರಿಗೇ ಇದ್ದ ಕಬ್ಬಿಣದ ಟೆಲಿಫೋನ್‌ ಕಂಬ ತಾಗಿತು. ಈ ಕಂಬ ಹಲವು ವರ್ಷಗಳಿಂದ ವ್ಯರ್ಥವಾಗಿ ಅಲ್ಲಿಯೇ ಇದೆ. ಸದ್ಯ ಅದಕ್ಕೆ ಯಾವುದೇ ಸಂಪರ್ಕ ಇಲ್ಲ. ಶಾಲೆ ಪಕ್ಕದ ಮನೆಗೆ ವಿದ್ಯುತ್‌ ತಂತಿ ಎಳೆದವರು ಈ ಕಂಬಕ್ಕೆ ಅದನ್ನು ಸುತ್ತಿದ್ದಾರೆ. ಸೋಮವಾರ ಮಧ್ಯಾಹ್ನ ಮಳೆಯಾಗಿದ್ದರಿಂದ ಟೆಲಿಫೋನ್‌ ಕಂಬದಲ್ಲಿ ವಿದ್ಯುತ್‌ ಹರಿಯುತ್ತಿತ್ತು.

ADVERTISEMENT

ಗೆಳತಿಯರೊಂದಿಗೆ ನಲಿಯುತ್ತ ಶಾಲೆಗೆ ಕಡೆಗೆ ಓಡುತ್ತಿದ್ದ ಪುಟಾಣಿ ನೋಡನೋಡುತ್ತಿದ್ದಂತೆ ಕುಸಿದುಬಿದ್ದಳು. ವಿದ್ಯುತ್‌ ಸ್ಪರ್ಶದಿಂದ ಒದ್ದಾಡಿ ಸ್ಥಳದಲ್ಲೇ ಪ್ರಾಣ ಬಿಟ್ಟಳು. ಇದನ್ನು ಕಂಡು ಶಿಕ್ಷಕರು ಹಾಗೂ ಸುತ್ತಲಿನ ಮನೆಯ ಜನ ವಿದ್ಯುತ್‌ ಕಡಿತ ಮಾಡಿ, ಇತರ ಮಕ್ಕಳನ್ನು ಸುರಕ್ಷಿತವಾಗಿ ಬೇರೆ ಕಡೆ ಕಳುಹಿಸಿದರು.

ಮನವಿಗೆ ಸ್ಪಂದಿಸದ ಹೆಸ್ಕಾಂ: ‘ಶಾಲೆ ಪಕ್ಕದಲ್ಲಿರುವ ವ್ಯರ್ಥ ಕಂಬಕ್ಕೆ ವಿದ್ಯುತ್‌ ತಂತಿ ಸುತ್ತಲಾಗಿದ್ದು, ಅದನ್ನು ತೆರವು ಮಾಡುವಂತೆ ಹೆಸ್ಕಾಂನ ಸ್ಥಳೀಯ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದರೂ ನಿರ್ಲಕ್ಷ್ಯ ಮಾಡಿದ್ದಾರೆ’ ಎಂದು ಕ್ಷೇತ್ರಶಿಕ್ಷಣಾಧಿಕಾರಿ ರೇವತಿ ಮಠದ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಆದರೆ, ಜೆಸ್ಕಾಂ ಅಧಿಕಾರಿಗಳು ಇದನ್ನು ಒಪ್ಪಲು ತಯಾರಿಲ್ಲ.

‘ಟೆಲಿಫೋನ್‌ ಕಂಬವಾದ್ದರಿಂದ ನಾವು ತೆರವು ಮಾಡಲು ಬರುವುದಿಲ್ಲ. ಗ್ರಾಹಕರೊಬ್ಬರು ನಮ್ಮ ಗಮನಕ್ಕೆ ತರದೇ ಕಂಬಕ್ಕೆ ವಿದ್ಯುತ್‌ ತಂತಿ ಸುತ್ತಿದ್ದಾರೆ. ಈ ಬಗ್ಗೆ ಶಾಲೆಯಿಂದ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಯಾವುದೇ ಮಾಹಿತಿ ಬಂದಿಲ್ಲ’ ಎಂದು ಹೆಸ್ಕಾಂ ಸದಲಗಾ ವಲಯದ ಸೆಕ್ಷನ್‌ ಅಧಿಕಾರಿ ಸುರೇಶ ತಹಶೀಲ್ದಾರ್‌ ಪ್ರತಿಕ್ರಿಯಿಸಿದರು.

ಮುಖ್ಯಶಿಕ್ಷಕ ಅಮಾನತು

ಬಾಲಕಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಶಿಕ್ಷಕ ಕೆ.ವಿ.ನಾಟೇಕರ್‌ ಅವರನ್ನು ಅಮಾನತುಗೊಳಿಸಲಾಗಿದೆ.

ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ರೇವತಿ ಮಠದ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಘಟನೆಗೆ ಸ್ಪಷ್ಟ ಕಾರಣ ನೀಡುವಂತೆ ನೋಟಿಸ್‌ನಲ್ಲಿ ಸೂಚಿಸಿದ್ದಾರೆ.

ಪಾಲಕರಿಗೆ ಸಿಗುವುದೇ ಪರಿಹಾರ?

ವಿದ್ಯುತ್‌ ಸ್ಪರ್ಶದಿಂದ ಸಾವಿಗೀಡಾದ ಎಳೆಬಾಲೆಯ ಪಾಲಕರಿಗೆ ಹೆಸ್ಕಾಂನಿಂದ ಪರಿಹಾರ ಸಿಗುವುದೇ ಎಂಬ ಪ್ರಶ್ನೆಗೂ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ.

ಇಲಾಖೆ ಮೇಲಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸಮಗ್ರ ವರದಿಯನ್ನು ಹೆಸ್ಕಾಂಗೆ ನೀಡಲಾಗಿದೆ. ಗ್ರಾಹಕರಿಗೆ ನೋಟಿಸ್‌ ಕೂಡ ಜಾರಿಗೊಳಿಸಲಾಗಿದೆ ಎಂದಷ್ಟೇ ಅವರು ಹೇಳಿದರು.

ಇತ್ತ, ಆಟವಾಡುತ್ತ ಶಾಲೆಗೆ ಹೋಗಿದ್ದ ಕಂದಮ್ಮನನ್ನು ಕಳೆದುಕೊಂಡ ಪಾಲಕರ ಆಕ್ರಂದನ ಹೇಳತೀರದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.