ಹುಕ್ಕೇರಿ: ಸ್ಥಳೀಯ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ 56ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಶನಿವಾರ ಪ್ರಾರಂಭದಲ್ಲಿ ಅಚ್ಚುಕಟ್ಟಾಗಿ ಜರುಗಿ, ಕೊನೆಯ ಹಂತದ ಸದಸ್ಯರ ಪ್ರಶ್ನಾವಳಿಯಲ್ಲಿ ಗೊಂದಲದ ಗೂಡಾಗಿ ಮಾರ್ಪಟ್ಟು ಏನಾಯಿತು ಎಂದು ತಿಳಿಯದ ಘಟನೆ ನಡೆಯಿತು.
ಶನಿವಾರ ಸಂಘದ ಆವರಣದ ಸಭಾ ಭವನದಲ್ಲಿ ಕರೆದಿದ್ದ ವಾರ್ಷಿಕ ಸಭೆಯಲ್ಲಿ ಆರ್.ಇ.ನೇಮಿನಾಥ ಸ್ವಾಗತಿಸಿದ ನಂತರ, ನಿರ್ದೇಶಕ ಶಶಿರಾಜ್ ಪಾಟೀಲ್ ಮಾತನಾಡಿ, ಸಂಘದಿಂದ ಕೈಗೊಂಡ ಪ್ರಗತಿಪರ ಕಾರ್ಯ ವಿವರಿಸಿದರು. ನಂತರ ಸಂಘದ ಹೆಸರನ್ನು ‘ಅಪ್ಪಣಗೌಡ ಪಾಟೀಲ್ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ’ ಎಂದು ನಾಮಕರಣ ಮಾಡಲು ಸದಸ್ಯರ ಅನುಮತಿ ಕೇಳಿದರು. ಸದಸ್ಯರೆಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಸಹಮತಿ ನೀಡಿದರು.
ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ್ ವರದಿ ವಾಚಿಸಿ ಸಂಘದ ಪ್ರಗತಿ ಪಕ್ಷಿ ನೋಟ ಸಬೆಗೆ ತಿಳಿಸಿದರು.
ಪ್ರಧಾನ ವ್ಯವಸ್ಥಾಪಕ ಡಿ.ಎಸ್.ನಾಯಿಕ 2023–24ನೇ ಸಾಲಿನ ವಾರ್ಷಿಕ ಮಹಾಸಭೆಯ ನಡಾವಳಿ ಮತ್ತು ಲೆಕ್ಕ ಪರಿಶೋಧನಾ ಹಾಗು ಅನುಪಾಲನಾ ವರದಿ ಓದಿದರು. ಲೇಖಪಾಲಕ ಎಸ್.ಎನ್.ಹಿರೇಮಠ 2024–25ನೇ ಸಾಲಿನ ವರದಿ ಓದಿದರು. ರೆಸಿಡೆಂಟ್ ಎಂಜನಿಯರ್ ನೇಮಿನಾಥ ಖೆಮಲಾಪುರೆ ‘2025–26ನೇ ಸಾಲಿನ ರಚನಾ ಕಾರ್ಯ (ವರ್ಕ್ ಪ್ರೋಗ್ರಾಂ) ಪರಿಶಿಲಿಸುವುದು ಓದಿ ಮಂಜೂರಿ ಪಡೆದರು.
ಎಸ್.ಆರ್.ಮಲಗೌಡನವರ ‘2025–26ನೇ ಸಾಲಿಗಾಗಿ ತಯಾರಿಸಿದ ಅಂದಾಜು ಪತ್ರಿಕೆ (ಬಜೆಟ್) ಮಂಜೂರಿ ಪಡೆದರು. ಸಂಘಕ್ಕೆ ಸಂಬಂಧಿಸಿದ ವಿವಿಧ ವಿಷಯಪಟ್ಟಿಗಳ ಅನುಮೋದನೆ ಪಡೆದರು.
ಸಮಸ್ಯೆ ಎಲ್ಲಿ?:
ವಿವಿಧ ಗ್ರಾಮಗಳಿಂದ ಆಗಮಿಸಿದ್ದ ರೈತರು ಬೇರೆಡೆ ‘ನಿರಂತರ ಜ್ಯೋತಿ ಯೋಜನೆಯ’ ಅನುಷ್ಠಾನಕ್ಕೆ ಗ್ರಾಹಕರಿಂದ ಹಣ ಪಡೆಯುವುದಿಲ್ಲ. ನಮ್ಮ ತಾಲ್ಲೂಕಿನಲ್ಲಿ ಗ್ರಾಹಕರಿಂದ ಸಂಪರ್ಕ ಪಡೆಯುವ ವೆಚ್ಚದ ಶೇ.50ರಷ್ಟು ಹಣವನ್ನು ಪಡೆಯುತ್ತೀರಿ. ಏಕೆ ಎಂದು ಪ್ರಶ್ನಿಸಿದಾಗ, ಉತ್ತರ ನೀಡಿದ ನಿರ್ದೇಶಕ ಶಶಿರಾಜ ಪಾಟೀಲ್ ಈಗಾಗಲೇ ತಾಲ್ಲೂಕಿನ ಎಲಿಮುನ್ನೋಳಿಯಲ್ಲಿ ₹3.61 ಕೋಟಿ ವೆಚ್ಚದಲ್ಲಿ ಪೈಲಟ್ ಯೋಜನೆ ಪ್ರಾರಂಭಿಸಿದ್ದು, ಜತೆಗೆ ಈ ಯೋಜನೆಗೆ ಸಂಬಂಧಿಸಿದಂತೆ ₹45 ಕೋಟಿ ವೆಚ್ಚದ ಪ್ರಸ್ತಾವಣೆ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಅನುದಾನ ಬಂದಿಲ್ಲ. ಹಾಗಾಗಿ ಅರ್ಧ ವೆಚ್ಚ ಸಂಘ ಮತ್ತು ಅರ್ಧ ಗ್ರಾಹಕರು ಕೊಡಬೇಕಾಗುತ್ತದೆ ಎಂದರು.
ಗ್ರಾಹಕರಿಂದ ಪಡೆದ ಹಣವನ್ನು ಮರಳಿಸುವಂತೆ ರೈತರು ಒತ್ತಾಯಿಸಿದಾಗ, ಮರಳಿಸಲು ಬರುವುದಿಲ್ಲ ಎಂದು ಶಸಿರಾಜ ಹೇಳಿದಾಗ, ರೈತರು ಸಿಟ್ಟಿಗೆದ್ದು, ವಾದಕ್ಕಿಳಿದರು.
ಏನೂ ಕೇಳದಾಯಿತು:
ಸಭಾ ಭವನದ ಪ್ರತಿಧ್ವನಿ ಮತ್ತು ಎಲ್ಲರೂ ಮಾತಾಡಲು ಪ್ರಾರಂಭಿಸಿದ ನಂತರ ಕುಳಿತವರಿಗೆ ಮತ್ತು ಆಡಳಿತ ಮಂಡಳಿಯವರಿಗೆ ಸ್ಪಷ್ಟತೆ ಸಿಗಲಿಲ್ಲ. ಏನಾದರೂ ಮಾಡಿ, ಆದರೆ ರೈತರಿಂದ ಅಥವಾ ಗ್ರಾಹಕರಿಂದ ನಿರಂತರ ಜ್ಯೋತಿ ಸಂಪರ್ಕಕ್ಕೆ ಹಣ ಪಡೆಯಬೇಡಿ ಎಂದು ಗ್ರಾಹಕರು ಒತ್ತಾಯಿಸಿದರು. ಒಟ್ಟಾರೆ ಸಭೆ ಕೊನೆಯಲ್ಲಿ ಗೊಂದಲದ ಗೂಡಾಗಿ ಪರಿವರ್ತನೆಗೊಂಡಿತು.
ಎಂ.ಡಿ.ರವೀಂದ್ರ ಪಾಟೀಲ್ ಮತ್ತು ರೆಸಿಡೆಂಟ್ ಎಂಜನಿಯರ್ ನೇಮಿನಾಥ ಖೆಮಲಾಪುರೆ ಸಮಜಾಯಿಸಿ ಉತ್ತರ ನೀಡಲು ಹೋದರೂ ಗ್ರಾಹಕರು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.ಸಂಘದ ಅಧ್ಯಕ್ಷ ಜಯಗೌಡ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಶಶಿಕಾಂತ ನಾಯಿಕ, ಉಪಾಧ್ಯಕ್ಷ ವಿಷ್ಣು ರೇಡೆಕರ್, ನಿರ್ದೇಶಕರಾದ ಕಲಗೌಡ ಪಾಟೀಲ್, ಕೆ.ಕೆ.ಬೆಣಚಿನಮರಡಿ, ಬಸಗೌಡ ಮಗೆನ್ನವರ, ಕುನಾಲ್ ಪಾಟೀಲ್, ಜೋಮಲಿಂಗ ಪಟೋಳಿ, ರವೀಂದ್ರ ಅಸೂದೆ, ಈರಪ್ಪ ಬಂಜಿರಾಮ, ಸಂಗೀತಾ ದಪ್ಪಾದೂಳಿ, ಸಂಗಮ ಶುಗರ್ಸ್ ಉಪಾಧ್ಯಕ್ಷ ಬಸಗೌಡ ಪಾಟೀಲ್, ನಿರ್ದೇಶಕ ಗುರು ಪಾಟೀಲ್, ಪುರಸಭೆ ಅಧ್ಯಕ್ಷ ಇಮ್ರಾನ್ ಮೊಮೀನ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ್, ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಶಾನೂರ್ ತಹಸೀಲ್ದಾರ್, ಮುಖಂಡರಾದ ಧನ್ಯಕುಮಾರ ಮಲಗೌಡನವರ, ಕೆಂಪಣ್ಣ ದೇಸಾಯಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಸದಸ್ಯರು ಭಾಗವಹಿಸಿದ್ದರು.ಎನ್.ಜೆ.ಖೆಮಲಾಪುರೆ ಸ್ವಾಗತಿಸಿ ನಿರೂಪಿಸಿದರು. ಡಿ.ಎಸ್.ನಾಯಿಕ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.