
ಬೆಳಗಾವಿ: ಆನೆ– ಮಾನವ ಸಂಘರ್ಷದ ಮಾತು ಇಂದು– ನಿನ್ನೆಯದಲ್ಲ. ಇದಕ್ಕೆ ಎರಡು ದಶಕಗಳಷ್ಟು ಹಳೆಯ ನಂಟಿದೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಡು ಹೊಂದಿರುವ ಖಾನಾಪುರ ಹಾಗೂ ಬೆಳಗಾವಿ ತಾಲ್ಲೂಕಿನಲ್ಲೇ ಆನೆ– ಮಾನವ ಸಂಘರ್ಷ ಜೀವಂತವಾಗಿದೆ. ಆನೆಗಳ ಮೊಗಸಾಲೆ ಮಿತಿ ನಿರ್ಧರಿಸದಿರುವುದೇ ಇದಕ್ಕೆ ಕಾರಣ ಎಂಬುದು ಸ್ಪಷ್ಟ.
ಮಹಾರಾಷ್ಟ್ರದ ಬೆನ್ನಿಗೆ ಅಂಟಿಕೊಂಡ ಈ ಕಾಡಿನ ಸುತ್ತ ಫಲವತ್ತಾದ ಕಬ್ಬು ಬೆಳೆಯಲಾಗುತ್ತದೆ. ಎರಡು ದಶಕಗಳಿಂದ ಅರಣ್ಯ ಕಡಿಮೆಯಾಗಿ, ಕೃಷಿ ಭೂಮಿ ಹೆಚ್ಚುತ್ತ ಸಾಗಿದೆ. ದಾಳಿಯಲ್ಲಿ ಮಾನವರೂ ಸತ್ತಿದ್ದಾರೆ. ಆನೆಗಳೂ ಸತ್ತಿವೆ. ಆದರೂ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅರಣ್ಯ ಇಲಾಖೆ ಇದೂವರೆಗೆ ಉಪಾಯ ಮಾಡಿಲ್ಲ.
ಖಾನಾಪುರ ತಾಲ್ಲೂಕಿನ ನಾಗರಗಾಳಿ ಅರಣ್ಯ ವ್ಯಾಪ್ತಿಯ ಸುಳ್ಳೇಗಾಳಿ ಗ್ರಾಮದ ಬಳಿ, ವಾರದ ಹಿಂದಷ್ಟೇ ಎರಡು ಕಾಡಾನೆಗಳು ಮಾನವ ನಿರ್ಮಿತ ವಿದ್ಯುತ್ ತಂತಿಗೆ ಸಿಕ್ಕು ಸಾವನ್ನಪ್ಪಿದವು. ಈ ಮೂಲಕ ಆನೆ– ಮಾನವ ಸಂಘರ್ಷ ಮತ್ತಷ್ಟು ತೀವ್ರತೆ ಪಡೆದಿದೆ ಎಂಬುದು ನಿಚ್ಚಳವಾಗಿದೆ.
ಒಂದೆಡೆ ವನ್ಯಮೃಗಗಳಿಂದ ರೈತರೂ ಸುರಕ್ಷಿತವಾಗಿಲ್ಲ, ಬೆಳೆಗಳಿಗೂ ರಕ್ಷಣೆಯಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಮಾನವರಿಂದ ವನ್ಯಮೃಗಗಳೂ ಸುರಕ್ಷಿತವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಸುಳ್ಳೇಗಾಳಿಯಲ್ಲಿ ಆನೆಗಳ ಕೊಲೆಗೆ ಸಂಬಂಧಿಸಿದಂತೆ ಈಗಾಗಲೇ ಜಮೀನಿನ ಮಾಲೀಕ ಗಣಪತಿ ಸಾತೇರಿ ಗುರವ ಅವರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದು, ಇನ್ನೊಬ್ಬ ರೈತ ಶಿವಾಜಿ ಗಣಪತಿ ಗುರವ ನಾಪತ್ತೆಯಾಗಿದ್ದಾರೆ.
ಇಂಥ ಪ್ರಕರಣಗಳು ಸುಳ್ಳೇಗಾಳಿಯಲ್ಲಿ ಮಾತ್ರವಲ್ಲ; ಕಾಡಂಚಿನ ಪ್ರತಿ ಹಳ್ಳಿಗಳಲ್ಲೂ ನಡೆಯುತ್ತವೆ. ನಾಗರಗಾಳಿ ಅರಣ್ಯ ವಲಯದ ಕರ್ಜಗಿ, ಮೇರಡಾ, ಜಾಂಬೇಗಾಳಿ, ಗೋಟಗಾಳಿ, ಜಟಗೆ, ದೇವರಾಯಿ ಭಾಗದಲ್ಲಿ ಕಾಡಾನೆಗಳ ಹಾವಳಿ ಇದ್ದೇ ಇದೆ.
ಮಹಾರಾಷ್ಟ್ರದ ಚಂದಗಡ ಅರಣ್ಯ ಬೆಳಗಾವಿ, ಖಾನಾಪುರ ತಾಲ್ಲೂಕುಗಳಿಗೆ ಹೊಂದಿಕೊಂಡಿದೆ. ಎರಡೂ ರಾಜ್ಯಗಳ ಅರಣ್ಯಕ್ಕೆ ಯಾವುದೇ ಬೇಲಿ ಇಲ್ಲ. ಸುಲಭವಾಗಿ ಆನೆಗಳು ದಾಳಿ ಇಡುತ್ತವೆ. ಅರಣ್ಯದ ಅಂಚಿಗೆ ಇರುವ ಜಾಂಬೋಟಿ, ಕಿಣಿಯೆ, ಬೆಳವಟ್ಟಿ, ರಾಕಸಕೊಪ್ಪ, ಮಾಚಾಳಿ, ಸಾತನಾಳಿ, ಭೂಕಣಕಿ, ಮುಂಡವಾಡ ಹಾಗೂ ಹುಕ್ಕೇರಿ ತಾಲ್ಲೂಕಿನ ಕೆಲವು ಗ್ರಾಮಗಳ ಗದ್ದೆಗಳಲ್ಲಿ ಮೇಲಿಂದ ಮೇಲೆ ದಾಳಿ ಸಾಮಾನ್ಯ ಎಂಬಂತಾಗಿದೆ.
ಬೇಸಿಗೆಯಲ್ಲಿ ಅರಣ್ಯದಲ್ಲಿ ನೀರಿನ ಕೊರತೆ ಉಂಟಾಗುವುದರಿಂದ ರಾಕಸಕೊಪ್ಪ ಜಲಾಶಯ ನೀರು ಅರಸಿ ಬರುತ್ತವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಸಿಹಿಯಾದ ಕಬ್ಬು ತಿನ್ನಲು ಬರುತ್ತವೆ. ಹೀಗಾಗಿ, ಆನೆಗಳ ಹಾವಳಿಗೆ ಕಾಲದ ಹಂಗಿಲ್ಲ.
ಯಾವಾಗ ದಾಳಿ ಸಾಮಾನ್ಯ: ಏಪ್ರಿಲ್, ಮೇ ತಿಂಗಳಲ್ಲಿಯೇ ಇಂಥ ಹೆಚ್ಚು ಪ್ರಕರಣಗಳು ಕಂಡುಬರುತ್ತವೆ ಎನ್ನುವುದು ಅರಣ್ಯ ಇಲಾಖೆ ಅಧಿಕಾರಿಗಳ ಮಾಹಿತಿ.
ಮಹಾರಾಷ್ಟ್ರದ ಆನೆಗಳು ಇತ್ತ ಏಕೆ ದಾಳಿ ಮಾಡುತ್ತವೆ ಎಂಬ ಬಗ್ಗೆ ಎರಡು ವರ್ಷಗಳ ಹಿಂದೆಯೇ ಅರಣ್ಯಾಧಿಕಾರಿಗಳ ತಂಡ ಅಧ್ಯಯನ ಮಾಡಿ ಹೋಗಿದೆ. ಗಡಿ ದಾಟಿ ಬಂದ ಆನೆಗಳನ್ನು ಮರಳಿ ಮಹಾರಾಷ್ಟ್ರದ ಅರಣ್ಯಕ್ಕೇ ಬಿಡುವ ಜವಾಬ್ದಾರಿಯನ್ನೂ ಇಲ್ಲಿನ ಇಲಾಖೆ ಹೊತ್ತುಕೊಂಡಿದೆ. ಆದರೆ, ಅದಾವುದೂ ಕೊಟ್ಟ ಮಾತಿನಂತೆ ನಡೆದಿಲ್ಲ.
ರಾಜ್ಯದ ದಕ್ಷಿಣ ಭಾಗದ ಮೈಸೂರು ಚಾಮರಾಜನಗರ ಹಾಸನ ಜಿಲ್ಲೆಗಳಲ್ಲಿ ಆನೆ ಕಾರಿಡಾರ್ ನಿರ್ಮಿಸಿ ಸಂಘರ್ಷವನ್ನು ಕಡಿಮೆ ಮಾಡಲಾಗಿದೆ. ಕಾರಿಡಾರ್ ಸುತ್ತಲೂ ಸೌರಬೇಲಿ ಆಳವಾದ ಕಂದಕ ತೋಡುವ ಮೂಲಕ ಆನೆಗಳು ನಾಡಿಗೆ ಬರದಂತೆ ಕಾಡು–ನಾಡಿನ ಮೇಲೆ ಕಾಳಜಿ ವಹಿಸಲಾಗಿದೆ. ಆದರೆ ಅಂಥ ಪ್ರಯತ್ನ ಈ ಭಾಗದಲ್ಲಿ ಆಗಿಲ್ಲ ಎಂಬ ಕೊರಗು ಕಾಡಿನ ವಾಸಿಗಳದ್ದು. ಅಲ್ಲಿ ಹಲವು ಎನ್‌ಜಿಒಗಳು ಟ್ರಸ್ಟ್‌ಗಳು ಸಂಘಟನೆಗಳು ಕೂಡ ಸಾಮೂಹಿಕ ಪ್ರಯತ್ನದ ಮೂಲಕ ಕಾಡಿಗೆ ಕಾವಲಾಗಿ ಕಾರ್ಯಪಡೆ ರಚಿಸಿವೆ. ಆದರೆ ಅಂಥ ಪ್ರಯತ್ನ ಜಿಲ್ಲೆಯಲ್ಲಿ ನಡೆಯದಿರುವುದು ವಿಪರ್ಯಾಸ.
ಸುಳ್ಳೇಗಾಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಇಲಾಖೆಯ ನಿಯಮಗಳ ಪ್ರಕಾರ ಅವುಗಳ ಅಂತ್ಯಕ್ರಿಯೆ ಮಾಡಲಾಗಿದೆ. ಭವಿಷ್ಯದಲ್ಲಿ ಕಾಡಾನೆಗಳ ಜೀವ ರಕ್ಷಣೆಗಾಗಿ ಇಲಾಖೆಯಿಂದ ಅಗತ್ಯ ಕ್ರಮ ಜರುಗಿಸಲಾಗುತ್ತದೆ.ಶಿವಾನಂದ ಮಗದುಮ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
ವಿದ್ಯುತ್ ಸ್ಪರ್ಶದಿಂದ ಆನೆಗಳ ಅಸ್ವಾಭಾವಿಕ ಸಾವಿನ ಪ್ರಕರಣಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸ್ಥಳೀಯರ ಜತೆ ಸಭೆ ನಡೆಸಿ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಲಿಖಿತ ಸೂಚನೆ ನೀಡಿದ ನಂತರವೂ ಇಂಥ ಘಟನೆ ನಡೆದಿರುವುದು ದುರದೃಷ್ಟಕರ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಆಗಬೇಕು.ಗಿರಿಧರ ಕುಲಕರ್ಣಿ ವನ್ಯಜೀವಿ ಸಂರಕ್ಷಣಾವಾದಿ
ಆನೆಗಳ ಸಾವಿನ ಪ್ರಕರಣದಲ್ಲಿ ಅರಣ್ಯ ಇಲಾಖೆ ತನ್ನ ತಪ್ಪು ಮುಚ್ಚಿ ಹಾಕಲು ಯತ್ನಿಸಿದೆ. ಈ ಸಾವಿಗೆ ಅರಣ್ಯ ಇಲಾಖೆ ಮತ್ತು ಹೆಸ್ಕಾಂ ನಿರ್ಲಕ್ಷ್ಯವೇ ಕಾರಣ. ಈ ಬಗ್ಗೆ ಕಾಂಗ್ರೆಸ್ ತೀವ್ರ ಹೋರಾಟ ಮಾಡಲಿದೆ.ಈಶ್ವರ ಘಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ವರ್ಷದಿಂದ ವರ್ಷಕ್ಕೆ ಕಾಡು ಕಡಿಮೆ ಆಗುತ್ತಿದೆ. ಅಲ್ಲಿ ಆಹಾರ ನೀರು ಸಿಗದ ಕಾರಣ ಪ್ರಾಣಿಗಳು ಹೊರಗೆ ಬರುತ್ತಿವೆ. ಮಾನವರು ಕಾಡಿಗೆ ದಾಳಿ ಮಾಡುತ್ತಿರುವುದೇ ಕಾಡುಮೃಗಗಳು ನಾಡಿಗೆ ದಾಳಿ ಮಾಡುತ್ತಿವೆ. ಎರಡೂ ಕಡೆಯ ದಾಳಿ ತಡೆಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಿಫಲವಾಗಿದ್ದಾರೆ.ವಿಲಾಸ ತೋಟಗೇರ ಕೃಷಿಕ
ದಾಂಡೇಲಿ ಅರಣ್ಯದಿಂದ ಪ್ರತಿವರ್ಷ ಅಕ್ಟೋಬರ್‌ನಲ್ಲಿ ಖಾನಾಪುರ ತಾಲ್ಲೂಕಿಗೆ ಕಾಡಾನೆಗಳ ಹಿಂಡು ಬರುತ್ತದೆ. ಕೃಷಿ ಜಮೀನುಗಳಲ್ಲಿ ಕಾಡಾನೆಗಳು ಸಂಚರಿಸಿ ನಾವು ಕಷ್ಟಪಟ್ಟು ಬೆಳೆಸಿದ ಕಬ್ಬು ಭತ್ತದ ಬೆಳೆ ತಿಂದು ತುಳಿದು ಹಾಳು ಮಾಡುತ್ತವೆ. ಕಾಡಾನೆಗಳ ಜತೆಗೆ ಮರಿಯಾನೆಗಳು ಇದ್ದಾಗ ನಮ್ಮ ಮೇಲೆ ದಾಳಿ ಮಾಡುತ್ತವೆ. ಸಣ್ಣ ಪ್ರಮಾಣದ ಬೆಳೆ ಹಾನಿಯಾದಾಗ ನಾವು ತಲೆ ಅಷ್ಟಾಗಿ ಕೆಡಿಸಿಕೊಳ್ಳುವುದಿಲ್ಲ. ಆದರೆ ಎಕರೆಗಳಷ್ಟು ಬೆಳೆ ಹಾನಿಯಾದಾಗ ಅರಣ್ಯ ಇಲಾಖೆ ಗಮನ ಸೆಳೆಯುತ್ತೇವೆ. ಈ ವರ್ಷವೂ ಆನೆಗಳು ಬಂದು ಬಹಳಷ್ಟು ಬೆಳೆ ಹಾನಿ ಮಾಡಿಹೋಗಿವೆ.ಜ್ಯೋತಿಬಾ ಭೆಂಡಿಗೇರಿ ರೈತ ಮಾಸ್ಕೇನಟ್ಟಿ
ಸುಳ್ಳೇಗಾಳಿಯಲ್ಲಿ ನಡೆದಿರುವುದು ಆನೆಗಳ ಸಾಮಾನ್ಯ ಸಾವಲ್ಲ. ಅವಘಡದಿಂದ ಸಾವನ್ನಪ್ಪಿವೆ ಎಂಬುದೂ ಸರಿಯಾದ ನಿರ್ಧಾರವಲ್ಲ ಪರಿಸರವಾದಿಗಳ ಮಾತು. ಏಕೆಂದರೆ ನಾಗರಗಾಳಿ ಸುತ್ತಲಿನ ಗ್ರಾಮಗಳಲ್ಲಿ ಎರಡು ಆನೆಗಳು ಎರಡು ವಾರಗಳಿಂದ ತಿರುಗಾಡುತ್ತಲೇ ಇದ್ದವು. ಕಬ್ಬಿನ ಗದ್ದೆ ಭತ್ತದ ಗದ್ದೆ ಅಥವಾ ಊರಿನ ಬಳಿ ಬಂದಾಗ ಜನರೇ ಕೂಗಾಡಿ ಓಡಿಸಿದ್ದಾರೆ. ಇದರ ಕೆಲವು ವಿಡಿಯೊಗಳೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಆಗಲೇ ಎಚ್ಚೆತ್ತುಕೊಳ್ಳಬೇಕಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದರು. ಉಪಾಯ ಮಾಡಿದ ಆರೋಪಿಗಳು ವಿದ್ಯುತ್ ಸ್ಪರ್ಶ ಮಾಡಿಸಿ ಆನೆಗಳ ಸಾವಿಗೆ ಕಾರಣವಾದರು ಎಂಬುದು ಪರಿಸರಿವಾದಿಗಳ ವಾದ.
ಇದಕ್ಕೆ ನಿಖರ ಕಾರಣವನ್ನೂ ಅವರು ಕೊಡುತ್ತಾರೆ. ಗದ್ದೆಗಳ ರಕ್ಷಣೆಗೆ ಐಬಾಕ್ಸ್ ಸೌರತಂತಿ ಅಳವಡಿಸಲಾಗಿದೆ. ಇದರಲ್ಲಿ ಅಲ್ಪಪ್ರಮಾಣದ ವಿದ್ಯುತ್ ಹರಿಯುವುದರಿಂದ ಪ್ರಾಣಿಗಳು ಮುಟ್ಟಿದರೂ ಅಪಾಯ ಸಂಭವಿಸುವುದಿಲ್ಲ. ಆದರೆ ಸುಳ್ಳೇಗಾಳಿಯಲ್ಲಿ ಅಳವಡಿಸಿ ಸೌರತಂತಿಗಳಿಗೆ ಹೆಸ್ಕಾಂನವರು ಮನೆಗೆ ಸರಬರಾಜು ಮಾಡುವ ಹೈವೋಲ್ಟೇಜ್ ವಿದ್ಯುತ್ ಸಂಪರ್ಕ ನೀಡಲಾಗಿತ್ತು ಎಂಬುದು ಖುದ್ದು ಆರೋಪಿಗಳೇ ಒಪ್ಪಿಕೊಂಡಿದ್ದಾರೆ. ಸ್ಥಳಕ್ಕೆ ತೆರಳಿದ್ದ ಅರಣ್ಯ ಇಲಾಖೆ ಹಾಗೂ ಹೆಸ್ಕಾಂ ಅಧಿಕಾರಿಗಳ ತಂಡವೂ ಇದನ್ನು ಖಚಿತ ಮಾಡಿಕೊಂಡಿದೆ. ಅಲ್ಲದೇ ವಿದ್ಯುತ್ ತಂತಿಗಳು ತಾವಾಗಿಯೇ ಗಾಳಿಗೆ ಹರಿದುಬಿದ್ದಿಲ್ಲ ಎಂಬುದೂ ಖಚಿತವಾಗಿದೆ. ಹಾಗಾದರೆ ಆರೋಪಿಗಳ ಮೇಲೆ ವನ್ಯಮೃಗಗಳ ಕೊಲೆ ಪ್ರಕರಣ ದಾಖಲಿಸಬೇಕು ಎಂಬುದು ಪರಿಸರ ಪ್ರಿಯರ ವಾದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.