ADVERTISEMENT

ಸಾವರ್ಕರ್‌ ತ್ಯಾಗ, ಬಲಿದಾನ ಪರಿಚಯಿಸಿ: ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 12:40 IST
Last Updated 25 ಫೆಬ್ರುವರಿ 2020, 12:40 IST
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿದರು
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿದರು   

ಬೆಳಗಾವಿ: ‘ಮಹಾನ್ ಚೇತನ ವೀರ ಸಾವರ್ಕರ್‌ ಅವರ ತ್ಯಾಗ, ಬಲಿದಾನವನ್ನು ಎಲ್ಲರಿಗೂ ಪರಿಚಯಿಸಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.

ಇಲ್ಲಿನ ಶಹಾಪುರದ ಸರಸ್ವತಿ ವಾಚನಾಲಯ ಹಮ್ಮಿಕೊಂಡಿದ್ದ ‘ಸ್ವಾಂತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್‌ ಸ್ಮೃತಿ ವ್ಯಾಖ್ಯಾನಮಾಲಾ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಹಳಷ್ಟು ಅಧಿಕಾರಿಗಳಿಗೆ ಸರಿಯಾದ ಇತಿಹಾಸ ಗೊತ್ತಿಲ್ಲದಿರುವುದು ವಿಷಾದನೀಯ. ಹಿಂದಿನ ಸರ್ಕಾರಗಳು ಯಾರನ್ನು ಬಿಂಬಿಸಬೇಕೋ ಅವರನ್ನು ಬಿಂಬಿಸದಿರುವುದು ಕೂಡ ದುರಂತ. ಸಾವರ್ಕರ್ ಕುರಿತಂತೆ ಕನ್ನಡ, ಮರಾಠಿ ಭಾಷೆಗಳಲ್ಲಿ ಕಿರು ಹೊತ್ತಿಗೆ, ಕಿರುಚಿತ್ರಗಳನ್ನು ತರಬೇಕು. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ’ ಎಂದರು.

ADVERTISEMENT

‘ಆರನೂರು ವರ್ಷಗಳ ಕಾಲ ಮೊಗಲರು, ಎರಡುನೂರು ವರ್ಷ ಬ್ರಿಟಿಷರ ಗುಲಾಮಗಿರಿಯಿಂದ ಭಾರತ ನರಳಿದೆ. 2014ರಲ್ಲಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತರ ದೇಶ ನಿಜವಾಗಿಯೂ ಗುಲಾಮಗಿರಿಯಿಂದ ಹೊರ ಬಂದಿದೆ’ ಎಂದು ಹೇಳಿದರು.

‘ನಗರದಲ್ಲಿ ವೀರ ಸಾವರ್ಕರ್‌ ಪ್ರತಿಮೆ ಸ್ಥಾಪನೆಗೆ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಉಪನ್ಯಾಸ ನೀಡಿದ ಪುಣೆಯ ಯೋಗೇಶ ಸೋಮಣ, ‘ಸಾವರ್ಕರ್‌ ಅವರನ್ನು ಟೀಕಿಸುವವರಿಗೆ ಉತ್ತರಿಸುತ್ತಾ ಸಮಯ ಹಾಳು ಮಾಡುವ ಬದಲಿದೆ, ಅವರ ಕೊಡುಗೆ ಬಗ್ಗೆ ಹೆಚ್ಚು ಜನರಿಗೆ ತಿಳಿಸಲು ನಿರ್ಧರಿಸಿದ್ದೇನೆ’ ಎಂದರು.

ವಾಚನಾಲಯದ ಕಾರ್ಯಾಧ್ಯಕ್ಷ ಸುಹಾಸ ಆರ್. ಸಾಂಗಲೀಕರ, ಮಾಧುರಿ ಶಾನಬಾಗ, ಡಾ.ದತ್ತಪ್ರಸಾದ ಗಿಜರೆ, ಸದಾಶಿವ ಜಿ. ಆರಬೊಳೆ ಆರ್.ಎಂ. ಕರಡಿಗುದ್ದಿ, ಜಿ.ಬಿ. ಇನಾಮದಾರ, ಜಗದೀಶ ಕುಂಟೆ, ಮನಿಷಾ ಸುಭೇದಾರ, ಮಂಜುಷಾ ಗಿಜರೆ, ಸ್ನೇಹಾ ಸಾಂಗಲಿಕರ, ಅಶ್ವಿನಿ ಓಗಲೆ, ವರ್ಷಾ ಕುಲಕರ್ಣಿ, ಆನಂದ ಎ. ಕುಲಕರ್ಣಿ, ಕುಬೇರ ಗಣೇಶವಾಡಿ, ಗಣೇಶ ಪಿ. ಕುಲಕರ್ಣಿ, ಸವಿತಾ ಪರನಟ್ಟಿ, ಜಯಶ್ರೀ ಸುತಾರ, ರಾಧಿಕಾ ನೀಲಣ್ಣವರ, ನೇಹಾ ಪಾಟೀಲ ಇದ್ದರು.

ವಿನಾಯಕ ಮೋರೆ ಪ್ರಾರ್ಥಿಸಿದರು. ಸ್ವರೂಪಾ ಇನಾಮದಾರ ಪ್ರಾಸ್ತಾವಿಕ ಮಾತನಾಡಿದರು. ಆನಂದ ಕುಲಕರ್ಣಿ ಹಾಗೂ ವಿಜಯ ದೇಶಪಾಂಡೆ ಪರಿಚಯಿಸಿದರು. ಪ್ರಿಯಾಂಕಾ ಕೇಳಕರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.