ADVERTISEMENT

ವಿಸ್ತರಣೆಯಾದ ರೈಲಿನ ಉದ್ಘಾಟನೆ ನ.1ರಂದು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 10:39 IST
Last Updated 31 ಅಕ್ಟೋಬರ್ 2019, 10:39 IST

ಬೆಳಗಾವಿ: ಬೆಳಗಾವಿವರೆಗೆ ವಿಸ್ತರಣೆಯಾಗಿರುವ ಮೈಸೂರು ಅಶೋಕಪುರಂ- ಹುಬ್ಬಳ್ಳಿ ವಿಶ್ವಮಾನವ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ನ.1ರಂದು ಸಂಜೆ 4.30ಕ್ಕೆ ಇಲ್ಲಿನ ರೈಲು ನಿಲ್ದಾಣದಿಂದ ಅಧಿಕೃತ ಚಾಲನೆ ದೊರೆಯಲಿದೆ.

ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಸಿರು ನಿಶಾನೆ ತೋರಲಿದ್ದಾರೆ.

ಈ ರೈಲು ಈವರೆಗೆ ಮೈಸೂರು- ಹುಬ್ಬಳ್ಳಿ ನಡುವೆ ಸಂಚರಿಸುತ್ತಿತ್ತು. ಈಗ ಬೆಳಗಾವಿವರೆಗೆ ವಿಸ್ತರಿಸಲಾಗಿದೆ. ನಿತ್ಯ ಬೆಳಿಗ್ಗೆ 5.15ಕ್ಕೆ ಮೈಸೂರಿನಿಂದ ಹೊರಡಲಿದೆ. ಸಂಜೆ 6.53ಕ್ಕೆ ಹುಬ್ಬಳ್ಳಿಗೆ ಬಂದು ರಾತ್ರಿ 10.30ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿಯಿಂದ ಬೆಳಿಗ್ಗೆ 5ಕ್ಕೆ ಹೊರಟು ಬೆಳಿಗ್ಗೆ 8.30ಕ್ಕೆ ಹುಬ್ಬಳ್ಳಿ ತಲುಪುತ್ತದೆ. ರಾತ್ರಿ 9.15ಕ್ಕೆ ಅಶೋಕಪುರಂ ಸೇರಲಿದೆ. ಮೈಸೂರು–ಬೆಳಗಾವಿ ಮಧ್ಯೆ ಒಟ್ಟು 755 ಕಿ.ಮೀ. ಸಂಚರಿಸಲಿದೆ.

ADVERTISEMENT

ಬೆಳಗಾವಿ- ಬೆಂಗಳೂರು- ಬೆಳಗಾವಿ ತತ್ಕಾಲ್‌ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಇರುವುದರಿಂದ ಅದನ್ನು ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಆಗಿ ಉನ್ನತೀಕರಿಸಲಾಗಿದೆ. ಪ್ರಯಾಣ ದರ ಕಡಿಮೆ ಮಾಡಲಾಗಿದೆ. ಪ್ರಥಮ ದರ್ಜೆ ಎಸಿ ಕೋಚ್‌ ಪ್ರಯಾಣದರ ₹ 2,730ರಿಂದ ₹ 2,310ಕ್ಕೆ ಇಳಿಸಲಾಗಿದೆ. 2ಎಸಿ ದರವನ್ನು ₹ 1,755ರಿಂದ ₹ 1,375ಕ್ಕೆ, 3ಎಸಿ ದರವನ್ನು ₹ 1,235ರಿಂದ ₹ 970ಕ್ಕೆ, ಸಾಮಾನ್ಯ ಬೋಗಿ ಪ್ರಯಾಣದರವನ್ನು ₹ 465ರಿಂದ ₹ 370ಕ್ಕೆ ಇಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.