ADVERTISEMENT

ಬೆಳಗಾವಿ | ಜೈಲು ಹಕ್ಕಿಗಳಿಂದ 1.15 ಲಕ್ಷ ಮಾಸ್ಕ್‌

45 ದಿನಗಳಲ್ಲಿ ತಯಾರಿಕೆ; ನಿತ್ಯ 60 ಮಂದಿಗೆ ಈ ಕೆಲಸ

ಎಂ.ಮಹೇಶ
Published 10 ಮೇ 2020, 19:30 IST
Last Updated 10 ಮೇ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಇಲ್ಲಿನ ಹಿಂಡಲಗಾ ಕೇಂದ್ರ ಕಾರಾಗೃಹದ ಕೈದಿಗಳು ಒಂದೂವರೆ ತಿಂಗಳಲ್ಲಿ ಬರೋಬ್ಬರಿ 1.15 ಲಕ್ಷ ಮಾಸ್ಕ್‌ (ಮುಖಗವಸು)ಗಳನ್ನು ಸಿದ್ಧಪಡಿಸಿ ಗಮನಸೆಳೆದಿದ್ದಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಉಂಟಾಗಿದ್ದ ಮಾಸ್ಕ್‌ಗಳ ಕೊರತೆ ನಿವಾರಣೆಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ.

ಮಾರ್ಚ್‌ ಕೊನೆ ವಾರದಿಂದ ಈ ಕಾರ್ಯ ಆರಂಭವಾಗಿದೆ. ನಿತ್ಯ ಸರಾಸರಿ 60ರಿಂದ 70 ಮಂದಿ ಕೈದಿಗಳು ಈ ಕೆಲಸದಲ್ಲಿ ತೊಡಗಿದ್ದಾರೆ. 45 ಹೊಲಿಗೆ ಯಂತ್ರಗಳನ್ನು ಬಳಸಲಾಗುತ್ತಿದೆ. ಇಲ್ಲಿ ಸಿದ್ಧಪಡಿಸಲಾಗುತ್ತಿರುವ ಬಟ್ಟೆಯ ಮಾಸ್ಕ್‌ಗಳನ್ನು ತೊಳೆದು ಮರು ಬಳಕೆ ಮಾಡಬಹುದಾಗಿದೆ. ₹ 6 ಬೆಲೆ ನಿಗದಿಪಡಿಸಲಾಗಿದೆ. ಬೇಡಿಕೆ ಕಂಡುಬಂದಿರುವುದರಿಂದ ತಯಾರಿಕೆ ಕಾರ್ಯ ಮುಂದುವರಿಸಲಾಗಿದೆ.

ಕೊರೊನಾ ಸೋಂಕು ಹರಡುವುದನ್ನು ನಿಯಂತ್ರಿಸುವ ಹಾಗೂ ವೈಯಕ್ತಿಕ ಸುರಕ್ಷತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಾಸ್ಕ್‌ ಬಳಸುವುದು ಅನುಕೂಲಕರ ಎನ್ನುವುದು ವೈದ್ಯರ ಸಲಹೆ. ಈ ಹಿನ್ನೆಲೆಯಲ್ಲಿ, ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ಓಡಾಡುವಾಗ ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿದೆ. ಮಾಸ್ಕ್‌ ಹಾಕಿಕೊಳ್ಳದವರಿಗೆ ತಲಾ ₹ 100 ದಂಡ ವಿಧಿಸುವ ನಿಯಮವೂ ಜಾರಿಗೆ ಬಂದಿದೆ. ಹೀಗಾಗಿ, ಮುಖಗವಸುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ADVERTISEMENT

ಸಮಾಜಮುಖಿ ಕಾರ್ಯ:ಸರಬರಾಜಿನಲ್ಲಿ ಕೊರತೆ ಉಂಟಾಗಿದ್ದ ಸಂದರ್ಭದಲ್ಲಿ ಕಾರಾಗೃಹದಲ್ಲಿ ಸಮಾಜಮುಖಿ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಕೈದಿಗಳ ಮನಪರಿವರ್ತನೆಯ ಭಾಗವಾಗಿ ಈ ಚಟುವಟಿಕೆಯನ್ನು ಅಧಿಕಾರಿಗಳು ಆರಂಭಿಸಿದ್ದರು. ಇದಕ್ಕೆ, ತಮ್ಮ ನಡವಳಿಕೆ ಸುಧಾರಣೆಗೆ ತುಡಿಯುತ್ತಿರುವ ಕೈದಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೈಲಿನ ಬಹಳಷ್ಟು ಮಂದಿ ಸಾವಿರಾರು ಮಾಸ್ಕ್‌ಗಳನ್ನು ಹೊಲಿದಿದ್ದಾರೆ. ಅಲ್ಲಿರುವ ಅಧಿಕಾರಿಗಳು, ಸಿಬ್ಬಂದಿ ಅವುಗಳನ್ನು ಧರಿಸುತ್ತಿದ್ದಾರೆ. ವಾಸಿಗಳು ತಾವೇ ಸಿದ್ಧಪಡಿಸಿದ ಮಾಸ್ಕ್‌ಗಳನ್ನು ಧರಿಸಿ ಆರೋಗ್ಯ ಕಾಪಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಜೈಲು ಹಕ್ಕಿಗಳು ಕಾರಾಗೃಹಕ್ಕೆ ಆದಾಯವನ್ನೂ ತಂದುಕೊಟ್ಟಿವೆ.

ಈ ಕಾರಾಗೃಹದಲ್ಲಿ ಸಿಗುವ ರೀತಿಯ ಮಾಸ್ಕ್‌ ಒಂದಕ್ಕೆ ಮುಕ್ತ ಮಾರುಕಟ್ಟೆಯಲ್ಲಿ ಸರಾಸರಿ ₹ 15ರಿಂದ ₹ 20 ಬೆಲೆ ಇದೆ. ಸಂಘ–ಸಂಸ್ಥೆಗಳು ಕೂಡ ಇದೇ ಬೆಲೆಗೆ ಮಾರುತ್ತಿವೆ. ಆದರೆ, ಕಾರಾಗೃಹದಲ್ಲಿ ಕೇವಲ ₹ 6ಕ್ಕೆ ಕೊಡಲಾಗುತ್ತಿದೆ.

ಬೇರೆ ಜಿಲ್ಲೆಗಳಿಗೂ:‘ಪೊಲೀಸ್, ಆರೋಗ್ಯ ಇಲಾಖೆ ಮೊದಲಾದ ಸರ್ಕಾರದ ವಿವಿಧ ಇಲಾಖೆಗಳಿಗೆ, ಸರ್ಕಾರಿ ಆಸ್ಪತ್ರೆ, ಎಪಿಎಂಸಿಗೆ ಮುಖ್ಯವಾಗಿ ಪೂರೈಸಲಾಗಿದೆ. ಹಲವು ಸರ್ಕಾರೇತರ ಸಂಘ–ಸಂಸ್ಥೆಗಳು ಕೂಡ ಖರೀದಿಸಿವೆ. ವಿಜಯಪುರ, ಚಿತ್ರದುರ್ಗ, ಬೀದರ್ ಮೊದಲಾದ ಜಿಲ್ಲೆಗಳಿಂದಲೂ ಖರೀದಿಸಲಾಗಿದೆ. ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಕೂಡತೆಗೆದುಕೊಂಡಿದ್ದಾರೆ. ಅಗತ್ಯವಾದ ಬಟ್ಟೆ ಮೊದಲಾದ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ನಿತ್ಯ ಸರಾಸರಿ 3ಸಾವಿರಕ್ಕೂ ಹೆಚ್ಚಿನ ಮಾಸ್ಕ್‌ಗಳನ್ನು ಸಿದ್ಧಪಡಿಸಲಾಗುತ್ತಿದೆ’ ಎಂದು ಕಾರಾಗೃಹದ ಸೂಪರಿಂಟೆಂಡೆಂಟ್ ಕೃಷ್ಣಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ದಿನಕ್ಕೆ 250 ಮಾಸ್ಕ್‌ಗಳ ನಂತರ ಹೆಚ್ಚುವರಿಯಾಗಿ ಹೊಲಿದವರಿಗೆ ತಲಾ ಮಾಸ್ಕ್‌ಗೆ ₹ 2 ನೀಡಿ ಪ್ರೋತ್ಸಾಹಿಸಲಾಗುತ್ತಿದೆ. ವಿಚರಣಾಧೀನ ಕೈದಿಗಳಿಗೂ ಈ ಕೆಲಸ ಕೊಡಲಾಗುತ್ತಿದೆ. ಸಮಾಜದ ಕೆಲಸ ಮಾಡುತ್ತಿದ್ದೇವೆ ಎಂದು ಅವರಿಗೂ ಎನಿಸಿದೆ. ಜನರ ಆರೋಗ್ಯ ರಕ್ಷಣೆಯ ಹಾಗೂ ಮಾರಕ ಸೋಂಕು ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯವನ್ನು ನೀವು ನಿರ್ವಹಿಸುತ್ತಿದ್ದೀರಿ ಎಂದು ತಿಳಿಸುತ್ತಿದ್ದೇವೆ. ಇವುಗಳು ನಿಮ್ಮ ಮನೆಯವರನ್ನೂ ತಲುಪಬಹುದು ಎಂದು ಹೇಳುತ್ತಿದ್ದೇವೆ. ಮಾಸ್ಕ್ ಸಿದ್ಧಪಡಿಸುವ ಚಟುವಟಿಕೆಯಿಂದ ಜೈಲುವಾಸಿಗಳಲ್ಲಿ ಸಕಾರಾತ್ಮಕ ಬದಲಾವಣೆ ಕಾಣುತ್ತಿದ್ದೇವೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.