ADVERTISEMENT

ಹಲಗತ್ತಿಯ ಗ್ರಾಮದೇವಿ ಜಾತ್ರೆ: ಪ್ರಸಾದ ಸೇವೆಗೆ 16 ಕ್ವಿಂಟಲ್‌ ಹೋಳಿಗೆ

ಚನ್ನಪ್ಪ ಮಾದರ
Published 21 ನವೆಂಬರ್ 2023, 4:04 IST
Last Updated 21 ನವೆಂಬರ್ 2023, 4:04 IST
ರಾಮದುರ್ಗದಲ್ಲಿ ನಡೆದ ಹಲಗತ್ತಿಯ ಗ್ರಾಮದೇವಿ ಜಾತ್ರೆಯ ಅಂಗವಾಗಿ ಭಂಡಾರದಲ್ಲಿ ಮಿಂದೆದ್ದ ಜನ
ರಾಮದುರ್ಗದಲ್ಲಿ ನಡೆದ ಹಲಗತ್ತಿಯ ಗ್ರಾಮದೇವಿ ಜಾತ್ರೆಯ ಅಂಗವಾಗಿ ಭಂಡಾರದಲ್ಲಿ ಮಿಂದೆದ್ದ ಜನ   

ರಾಮದುರ್ಗ: ಕಳೆದ ಐದು ದಿನಗಳಿಂದ ನಡೆಯುತ್ತಿರುವ ಹಲಗತ್ತಿಯ ಗ್ರಾಮದೇವಿ ಜಾತ್ರೆಗೆ ಆಗಮಿಸುವ ಭಕ್ತರ ಹಸಿವು ನೀಗಿಸಲು ಪ್ರಸಾದದ ರೂಪದಲ್ಲಿ ಜಾತ್ರಾ ಕಮಿಟಿಯವರು ವಿವಿಧ ಖಾದ್ಯಗಳನ್ನು ತಯಾರಿಸಿದ್ದು, ಒಂದೊಂದು ದಿನ ಒಂದೊಂದು ಬಗೆಯ ಅಡುಗೆ ಮಾಡಿ ಬಡಿಸಿ ಸಂತೈಸುತ್ತಿದ್ದಾರೆ.

ಮಂಗಳವಾರ ಗ್ರಾಮದೇವಿಯರ ರಥೋತ್ಸವ ಸಂಜೆ 4ಕ್ಕೆ ಜರುಗಲಿದೆ. ಅದಕ್ಕೂ ಮುಂಚೆ ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲು ₹12 ಕ್ವಿಂಟಲ್‌ ಬೂಂದಿ ಸಿದ್ದ ಪಡಿಸಿಡಿಸಿದ್ದು, ಬುಧವಾರ ಭಕ್ತರ ಪ್ರಸಾದ ಸೇವೆಗಾಗಿ 16 ಕ್ವಿಂಟಲ್‌ ಹೋಳಿಗೆ ಮಾಡಲು ಗ್ರಾಮದ ಪ್ರತಿ ಮನೆಗೂ 4 ಕ್ವಿಂಟಲ್‌ಕಡಲೆ ಬೇಳೆ, 4 ಕ್ವಿಂಟಲ್‌ಬೆಲ್ಲ, 4 ಕ್ವಿಂಟಲ್‌ಹಿಟ್ಟು ಹಂಚಿಕೆ ಮಾಡಿದ್ದಾರೆ. ಬುಧವಾರ ಬೆಳಿಗ್ಗೆ ಹೋಳಿಗೆ ತಯಾರಿಸಿ ಮರಳಿಸಲು ಕಮಿಟಿಯವರು ಸೂಚಿಸಿದ್ದಾರೆ.

ಮುಂಚಿನ ಐದು ದಿನವೂ ಶಿರಾ, ಹುಗ್ಗಿ, ಬಿಸಿಬೇಳೆ ಬಾತ್‌ನೀಡಿದ್ದಾರೆ. ಜೊತೆಗೆ ಪ್ರತಿ ದಿನ 12 ಕ್ವಿಂಟಲ್‌ ಅಕ್ಕಿ ಅನ್ನ, ಸಾರು ಮತ್ತು ಪಲ್ಯ ಉಣಬಡಿಸಿದ್ದಾರೆ. ಪ್ರಸಾದ ತಯಾರಿಸಲು ಸುಮಾರು 10 ಜನ ನಿರಂತರ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಊಟ ಬಡಿಸಲು ರಾಮದುರ್ಗದ ನೇಕಾರ ಪೇಟೆಯ ಮಹಿಳೆಯರು ಶ್ರಮ ವಹಿಸಿದ್ದಾರೆ. ಇನ್ನೂ ನಾಲ್ಕು ದಿನಗಳ ಕಾಲ ನಡೆಯುವ ಪ್ರಸಾದದಲ್ಲಿ ಉತ್ತರ ಕರ್ನಾಕಟದ ವಿಶಿಷ್ಟ ಖಾದ್ಯಗಳನ್ನು ಪೂರೈಸಲು ಜಾತ್ರಾ ಕಮಿಟಿ ಮುಂದಾಗಿದೆ.

ಜಾತ್ರೆಯಲ್ಲಿ ಮಹಿಳೆಯರಿಗಾಗಿ ವಿವಿಧ ಸಾಮಗ್ರಿಗಳ ಮಳಿಗೆಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದ್ದು, ಮಹಿಳೆಯರು ಮಕ್ಕಳೊಂದಿಗೆ ಖರೀದಿಗಾಗಿ ಮುಗಿ ಬಿದ್ದಿದ್ದರು. ಮಕ್ಕಳ ಮನರಂಜನೆಗೆ ಎತ್ತರದ ತಿರುಗು ತೊಟ್ಟಿಲು, ಜೋಕಾಲಿ, ಮ್ಯೂಜಿಕ್‌ಕಾರ್‌, ವಾಟರ್‌ಬೋಟ್‌, ಬಲೂನಿನ ಜಾರುಬಂಡಿ, ಉಗಿಬಂಡಿಗಳು ಮೇಳೈಸಿವೆ. ಹೋಟೆಲ್‌, ಫಾಸ್ಟ್‌ಫುಡ್‌ ಅಂಗಡಿಗಳಲ್ಲೂ ಜನದಟ್ಟಣೆ ಹೆಚ್ಚಿತು.

ಭಂಡಾರದ ಓಕುಳಿ: ಗ್ರಾಮದೇವಿ ಜಾತ್ರೆಯಲ್ಲಿ ಭಂಡಾರ ಎರಚಲು ಜಾತ್ರಾ ಕಮಿಟಿ 10 ಟನ್‌ ಭಂಡಾರವನ್ನು ಖರೀದಿ ಮಾಡಿತ್ತು. ಅಲ್ಲದೇ ಭಕ್ತರು ತಮ್ಮ ಹರಕೆಗಳನ್ನು ತೀರಿಸಲು ತಾವೇ ತಂದಿದ್ದ ಭಂಡಾರಕ್ಕೆ ಲೆಕ್ಕವೇ ಇಲ್ಲ. ಜಾತ್ರೆಯಲ್ಲಿ ಎಲ್ಲರೂ ಭಂಡಾರದ ಓಕುಳಿಯನ್ನು ಆಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.