
ರಾಯಬಾಗ: ‘ತಾಲ್ಲೂಕಿನ ರಾಜಕೀಯ ವಾತಾವರಣ ಮತ್ತೊಮ್ಮೆ ಕಿಚ್ಚು ಹಚ್ಚಿದೆ. ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ ಪುತ್ರ ಶಿವರಾಜ ಪಾಟೀಲ ಅವರ ಮೇಲೆ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಾಗಿದೆ’ ಎಂದು ಅವರ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಶುಕ್ರವಾರ ಅಂಬೇಡ್ಕರ್ ವೃತ್ತದಿಂದ ಮಹಾವೀರ ಭವನದವರೆಗೆ ಪಾದಯಾತ್ರೆ ನಡೆಸಿ ಘಟನೆ ಖಂಡಿಸಲಾಯಿತು. ಸುಮಾರು 5 ಸಾವಿರಕ್ಕಿಂತ ಅಧಿಕ ಜನ ಅವರ ಅಭಿಮಾನಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ತಹಶೀಲ್ದಾರ ಮಹಾದೇವ ಸನಮುರಿ ಅವರಿಗೆ ಮನವಿ ಕೂಡ ಸಲ್ಲಿಸಿದರು.
‘ಸುಳ್ಳು ಪ್ರಕರಣ ದಾಖಲಿಸಿದ ಪಿಎಸ್ಐ ಅವರನ್ನು ಕೂಡಲೇ ಅಮಾನತ್ತು ಮಾಡಬೇಕು. ಇಲ್ಲವೇ ವರ್ಗಾವಣೆ ಮಾಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರೂ ಆಗಿರುವ ಬ್ಯಾರಿಸ್ಟರ್ ಪ್ರತಾಪರಾವ್ ಪಾಟೀಲ ಮಾತನಾಡಿ, ‘ಘಟನೆಯೊಂದಕ್ಕೂ ಹಾಗೂ ಪುತ್ರ ಶಿವರಾಜಗೂ ಯಾವುದೇ ಸಂಬಂಧವಿಲ್ಲ. ಇದು ಸಂಪೂರ್ಣ ರಾಜಕೀಯ ಪ್ರೇರಿತ ಪ್ರಕರಣ’ ಎಂದು ಆರೋಪಿಸಿದರು.
‘ಪಿಎಸ್ಐ ಮಾಳಪ್ಪ ಪೂಜೇರಿ ಕಾನೂನು ಕಾಯುವವರಾಗಿ ನಿಷ್ಪಕ್ಷಪಾತ ನಡೆ ತಾಳಬೇಕಾಗಿತ್ತು. ಆದರೆ, ಅವರು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರ ಅಣತಿಯಂತೆ ವರ್ತಿಸುತ್ತಿದ್ದಾರೆ. ಖಾಕಿ ಉಡುಪಿನ ಗೌರವ ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ಖಾಕಿ ಕಳಚಿ ಖಾದಿ ತೊಡಬೇಕು’ ಎಂದು ಸವಾಲು ಹಾಕಿದರು.
ಇತ್ತೀಚೆಗೆ ರಾಯಬಾಗ ತಾಲ್ಲೂಕಿನ ಇಟ್ನಾಳ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಪ್ರತಾಪರಾವ್ ಪಾಟೀಲ ಪುತ್ರ ಶಿವರಾಜ್ ಪಾಟೀಲ ಸೇರಿದಂತೆ 10 ಜನ ಸೇರಿಕೊಂಡು ಒಬ್ಬ ಮಹಿಳೆ ಮತ್ತು ವೃದ್ಧನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದವರು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದರ ಬೆನ್ನಲ್ಲೇ ಹೊನ್ನಳ್ಳಿ ಎಂಬ ಕುಟುಂಬಸ್ಥರ ಮೇಲೆಯೂ ಹಲ್ಲೆಯಾಗಿದೆ ಎಂದು ಆರೋಪಿಸಿ ಪ್ರತಿ ದೂರು ಸಲ್ಲಿಸಲಾಗಿದೆ.
‘ಜನರ ಹಿತಕ್ಕಾಗಿ ಯುವಕರು ರಾಜಕೀಯವಾಗಿ ಬೆಳೆಯುತ್ತಿರುವಾಗ ಅವರನ್ನು ತಡೆಯಲು ಸುಳ್ಳು ಪ್ರಕರಣ ಹಾಕುವುದು ಸರಿಯಲ್ಲ. ಇಂತಹ ಆಡಳಿತ ಕ್ರಮಗಳು ಜನರ ವಿಶ್ವಾಸ ಕಳೆದುಕೊಳ್ಳುತ್ತವೆ’ ಎಂದು ಮುಖಂಡ ಭೀಮು ಬನಶಂಕರಿ ಕಿಡಿಕಾರಿದರು.
‘ಕಾನೂನು ಪ್ರಕ್ರಿಯೆಯ ಮೇಲೆ ನಮಗೆ ಪೂರ್ಣ ನಂಬಿಕೆ ಇದೆ. ಉನ್ನತ ಅಧಿಕಾರಿಗಳು ವಿಚಾರಣೆ ನಡೆಸಿದರೆ ನಿಜವಾದ ಸತ್ಯ ಹೊರಬರುತ್ತದೆ’ ಎಂದೂ ಹೇಳಿದರು.
ಸಿದ್ರಾಮ ಶೇಗುಣಸಿ ಮಾತನಾಡಿ, ‘ಶಿವರಾಜ್ ಪಾಟೀಲ ಅವರ ಮಾನಹಾನಿ ಉದ್ದೇಶದಿಂದ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಮಾತಿಗೆ ಕಿವಿಗೊಟ್ಟಿರುವ ಪಿಎಸ್ಐ ಮಾಳಪ್ಪ ಪೂಜೇರಿ ಸತ್ಯಾಸತ್ಯತೆ ಅರಿಯದೇ ಸುಳ್ಳು ಪ್ರಕರಣ ದಾಖಲಿಸಿದ್ದಾರೆ’ ಎಂದು ಆರೋಪಿಸಿದರು.
ವಕೀಲರಾದ ಪಿ.ಎಂ. ಪಾಟೀಲ, ಮೇಘರಾಜ ಮಾಳಗೆ, ಮುಖಂಡ ಪ್ರಕಾಶ ಹುಕ್ಕೇರಿ, ಕೇದಾರಿ ಬರಗೆ ಇತರರು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.