ADVERTISEMENT

ಮಿಶ್ರ ಬೇಸಾಯದಿಂದ ನೆಮ್ಮದಿ; ಆದಾಯ ಕಂಡುಕೊಳ್ಳುತ್ತಿರುವ ಸಂಪಗಾವಿಯ ರೈತ

ಆದಾಯ ಕಂಡುಕೊಳ್ಳುತ್ತಿರುವ ಸಂಪಗಾವಿಯ ರೈತ ರವೀಂದ್ರ ಸಿದ್ನಾಳ

ಇಮಾಮ್‌ಹುಸೇನ್‌ ಗೂಡುನವರ
Published 5 ಮೇ 2022, 7:35 IST
Last Updated 5 ಮೇ 2022, 7:35 IST
ಬೈಲಹೊಂಗಲ ತಾಲ್ಲೂಕಿನ ಸಂಪಗಾವಿಯ ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬಿನ ಬೆಳೆಯೊಂದಿಗೆ ರೈತ ರವೀಂದ್ರ ಸಿದ್ನಾಳ
ಬೈಲಹೊಂಗಲ ತಾಲ್ಲೂಕಿನ ಸಂಪಗಾವಿಯ ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬಿನ ಬೆಳೆಯೊಂದಿಗೆ ರೈತ ರವೀಂದ್ರ ಸಿದ್ನಾಳ   

ಬೆಳಗಾವಿ: ‘ಮುಖ್ಯ ಬೆಳೆಯನ್ನೇ ನೆಚ್ಚಿಕೊಂಡು ಕೃಷಿ ಮಾಡಿದರೆ ಕೆಲವೊಮ್ಮೆ ಕೈ ಸುಟ್ಟುಕೊಳ್ಳಬಹುದು. ಆದರೆ, ಮಿಶ್ರ ಬೇಸಾಯ ಕೈಗೊಂಡರೆ ಉತ್ತಮ ಆದಾಯವಂತೂ ಖಾತ್ರಿ. ಒಂದು ಬೆಳೆಯ ಬೆಲೆ ಕುಸಿದರೂ ಮತ್ತೊಂದು ಕೈಹಿಡಿಯುವುದರಿಂದ ನಷ್ಟದ ಸುಳಿಯಿಂದ ಪಾರಾಗಬಹುದು. ಹೀಗಾಗಿ ಕಬ್ಬಿನೊಂದಿಗೆ ಅಂತರಬೆಳೆಗಳನ್ನು ಬೆಳೆಯುತ್ತಿದ್ದೇನೆ’.

– ಇದು ಬೈಲಹೊಂಗಲ ತಾಲ್ಲೂಕಿನ ಸಂಪಗಾವಿಯ ಪ್ರಗತಿಪರ ರೈತ ರವೀಂದ್ರ ಬಸಪ್ಪ ಸಿದ್ನಾಳ ಅನುಭವದ ಮಾತು. ಬಿ.ಎಸ್ಸಿ. ಪದವೀಧರರಾಗಿರುವ ಅವರು ಕೃಷಿಯಲ್ಲಿ ಪ್ರಯೋಗ ಕೈಗೊಳ್ಳುತ್ತಾ ಬಂದಿದ್ದಾರೆ.

‘ನನ್ನ 10 ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದೇನೆ. ಸ್ವಂತ ಟ್ರ್ಯಾಕ್ಟರ್‌ ಇದ್ದು, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದೇನೆ. ಸಮಗ್ರ ಕೀಟ ನಿರ್ವಹಣೆ ಪದ್ಧತಿ ಅನುಸರಿಸುತ್ತಿರುವುದರಿಂದ ಹೆಚ್ಚು ಇಳುವರಿ ಸಿಗುತ್ತದೆ. ಎಕರೆಗೆ ಸರಾಸರಿ 55ರಿಂದ 60 ಟನ್‌ ಕಬ್ಬು ಉತ್ಪಾದನೆಯಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಉತ್ತಮ ಫಸಲು ಬರುತ್ತಿದೆ’ ಎಂದು ರವೀಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಆದಾಯ ನಿರಂತರವಾಗಿರಲೆಂದು ಕಬ್ಬಿನೊಂದಿಗೆ ಅಂತರಬೆಳೆಗಳಾಗಿ ಸೌತೆಕಾಯಿ, ಟೊಮೆಟೊ ಮತ್ತು ಕೊತ್ತಂಬರಿ ಬೆಳೆಯುತ್ತಿದ್ದಾರೆ. ಕೆಲವೊಮ್ಮೆ ಉತ್ತಮ ದರ ಸಿಕ್ಕಾಗ ಕಬ್ಬಿಗಿಂತಲೂ ಹೆಚ್ಚಿನ ಆದಾಯವನ್ನು ಇವು ತಂದುಕೊಟ್ಟ ಉದಾಹರಣೆಯೂ ಇದೆ. ಒಂದು ವೇಳೆ ದರ ಪಾತಾಳಕ್ಕಿಳಿದರೆ ರೂಟರ್‌ ಹೊಡೆದು, ಹಸಿರೆಲೆ ಗೊಬ್ಬರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ.

ಪುಷ್ಪ ಕೃಷಿ:

‘ಲಾವಣಿ ಮೇಲೆ ಪಡೆದಿರುವ ಬೇರೆಯವರ 2 ಎಕರೆ ಜಮೀನಿನಲ್ಲಿ ಶ್ರಾವಣ ಮಾಸ ಹಾಗೂ ಹಬ್ಬ–ಹರಿದಿನಗಳ ವೇಳೆಗೆ ಸಿಗುವಂತೆ ಪುಷ್ಪ ಕೃಷಿ ಮಾಡುತ್ತಿದ್ದೇನೆ. ನಮ್ಮ ಬೆಳೆಯಲಾಗುವ ಹಳದಿ, ಕೇಸರಿ ಚೆಂಡು ಹೂವು, ಬಿಳಿ, ಹಳದಿ ಸೇವಂತಿಗೆ ಹೂವಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯೂ ಬಂದಿದೆ. ಬೆಳಗಾವಿಯಲ್ಲಿರುವ ನಮ್ಮ ಅಂಗಡಿಯಲ್ಲಿ ಅವುಗಳನ್ನು ನಿಯಮಿತವಾಗಿ ವ್ಯಾಪಾರಿಗಳು ಮತ್ತು ಗ್ರಾಹಕರು ಖರೀದಿಸುತ್ತಿದ್ದಾರೆ’ ಎಂದು ವಿವರಿಸಿದರು.

‘ಈ ಹಿಂದೆ ನಮ್ಮ ಭಾಗದಲ್ಲಿ ಯಾವುದೇ ರೈತರು ಪುಷ್ಪಕೃಷಿ ಕೈಗೊಳ್ಳುತ್ತಿರಲಿಲ್ಲ. ಆದರೆ, ನಾನು ಚೆಂಡು ಮತ್ತು ಸೇವಂತಿಗೆ ಹೂವು ಬೆಳೆದಿದ್ದನ್ನು ಕಂಡು ಆಕರ್ಷಿತರಾದರು. ನನ್ನಿಂದ ಮಾಹಿತಿ ಪಡೆದು ಇತ್ತೀಚಿನ ದಿನಗಳಲ್ಲಿ ಹಲವರು ಹೂವು ಬೆಳೆಯುತ್ತಿದ್ದಾರೆ’ ಎಂದರು.

ಹೈನುಗಾರಿಕೆ:

ಕೃಷಿ ಕಾಯಕಕ್ಕೆ ಅನುಕೂಲವಾಗಲೆಂದು ನಾಲ್ಕು ಆಕಳು ಖರೀದಿಸಿದ್ದಾರೆ. ನಿತ್ಯ 20 ಲೀಟರ್‌ ಹಾಲು ಡೇರಿಗೆ ಹಾಕುತ್ತಾರೆ. ಆಕಳ ಸೆಗಣಿಯಿಂದ ಗೊಬ್ಬರ ತಯಾರಿಸಿ ಹೊಲಕ್ಕೆ ಬಳಸುತ್ತಾರೆ. ಇದರಿಂದ ಭೂಮಿ ಫಲವತ್ತತೆಯೂ ಹೆಚ್ಚಿದೆ. ‘ಹೈನುಗಾರಿಕೆಯಿಂದಲೂ ಆರ್ಥಿಕ ಮಟ್ಟ ಸುಧಾರಿಸುತ್ತಿದೆ’ ಎನ್ನುತ್ತಾರೆ.

ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಪರಿಗಣಿಸಿ ಕೃಷಿ ಇಲಾಖೆಯ ಬೆಳಗಾವಿ ಜಂಟಿ ನಿರ್ದೇಶಕರ ಕಚೇರಿ, ಬೈಲಹೊಂಗಲ ಸಹಾಯಕ ನಿರ್ದೇಶಕರ ಕಚೇರಿ ಮತ್ತು ವಿವಿಧ ಸಂಘ–ಸಂಸ್ಥೆಗಳು ರವೀಂದ್ರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿವೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಇತರ ರೈತರು ರವೀಂದ್ರ ಹೊಲಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ. ಕೃಷಿ ಇಲಾಖೆ ಆಯೋಜಿಸುವ ಕಾರ್ಯಾಗಾರಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲೂ ರವೀಂದ್ರ ರೈತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.