
ಮೂಡಲಗಿ: ಕಬ್ಬಿಗೆ ಸೂಕ್ತವಾದ ಬೆಲೆ ಕೊಡಬೇಕು ಎಂದು ತಾಲ್ಲೂಕಿನ ಗುರ್ಲಾಪುರ ಕ್ರಾಸ್ ಬಳಿಯಲ್ಲಿ ರೈತರು ನಡೆಸುತ್ತಿರುವ ಧರಣಿ, ಹೋರಾಟವು 9ನೇ ದಿನವಾದ ಶುಕ್ರವಾರವೂ ತೀವ್ರ ಪ್ರತಿಭಟನೆಯೊಂದಿಗೆ ಮುಂದುವರಿಯಿತು.
ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು ಜಮಾಯಿಸಿದ್ದರು. ವಿವಿಧ ಮಠಾಧೀಶರು, ವಕೀಲರು, ಮಾಜಿ ಸೈನಿಕರು, ವೈದ್ಯರು ಭಾಗಿಯಾಗಿದ್ದರು.
ಬೆಳಿಗ್ಗೆ ರೈತರು ಬಾರಕೋಲು ಪ್ರದರ್ಶಿಸಿ, ಹಸಿರು ಟವೆಲ್, ಚಕ್ರ ತಿರುಗಿಸಿ ಜೈ ಜವಾನ್ ಜೈ ಕಿಸಾನ್, ರೈತ ಸಂಘಕ್ಕೆ ಜಯವಾಗಲಿ ಎಂದು ಜಯಘೋಷಗಳನ್ನು ಹಾಕಿದರು. ‘ಯಾರಪ್ಪನದು ಏನೈತಿ ಕಬ್ಬು ನಮ್ಮದೈತಿ’ ಎಂದು ಧ್ವನಿಯೆತ್ತಿ ಕೂಗಿದರು.
ಶ್ರೀಶೈಲ ಪೀಠದ ಚನ್ನಮಲ್ಲ ಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಮಾತನಾಡಿ, ‘ 9 ದಿನಗಳಿಂದ ರೈತರು ನಡೆಸುತ್ತಿರುವ ಹೋರಾಟವನ್ನು ಸರ್ಕಾರ ನಿರ್ಲಕ್ಷಿಸುತ್ತಿರುವುದನ್ನು ಖಂಡಿಸುತ್ತೇವೆ’ ಎಂದರು.
‘ರೈತರು ಕೇಳಿರುವ ಕಬ್ಬಿನ ಬೆಲೆಯನ್ನು ಸರ್ಕಾರ ಕೊಡುವ ಅವಶ್ಯವಿದೆ. ಅವರ ಶ್ರಮದ ಬೆಲೆಯಾಗಿದೆ. ಕಬ್ಬನ್ನು ಉತ್ಪಾದಿಸುವ ರೈತರಿಗೆ ಕಬ್ಬಿನ ಬೆಲೆ ನಿರ್ಧರಿಸುವ ಅಧಿಕಾರವಿದೆ. ವಿಪರ್ಯಾಸವೆಂದರೆ ಸಕ್ಕರೆ ಕಾರ್ಖಾನೆಯವರು ದರ ನಿರ್ಧರಿಸುತ್ತಿರುವುದರಿಂದ ರೈತರು ಶೋಷಣೆಗೆ ಒಳಗಾಗುವಂತಾಗುತ್ತದೆ’ ಎಂದು ತಿಳಿಸಿದರು.
ಭಾಗೋಜಿಕೊಪ್ಪ ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಗುರ್ಲಾಪುರ ಕ್ರಾಸ್ ರೈತರ ಶಕ್ತಿ ಕೇಂದ್ರವಾಗಿ ದೇಶದಲ್ಲಿ ಗುರುತಿಸಿಕೊಂಡಿದೆ. ಕಬ್ಬಿಗೆ ರೈತರು ನೀಡುವ ಕೆಲಸವನ್ನು ಮುಖ್ಯಮಂತ್ರಿ ಅವರು ಕಾರ್ಖಾನೆಯವರಿಂದ ಕೊಡಿಸುವ ಕೆಲಸ ಮಾಡಬೇಕು’ ಎಂದು ಒತ್ತಾಯಿಸಿದರು.
ಅಥಣಿಯ ಮೋಟಗಿಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ‘ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಯವರು ರೈತರಿಗೆ ಕಷ್ಟಕೊಟ್ಟರೆ ನಿಮಗೆ ಉಳಿಗಾಲವಿಲ್ಲ. ರೈತರಿಗೆ ಅನ್ಯಾಯವಾಗುವುದಕ್ಕೆ ಮಠಾಧೀಶರು ಸಹ ಬಿಡುವುದಿಲ್ಲ. ರೈತರು ತಾಳ್ಮೆ ಕಳೆದುಕೊಳ್ಳುವ ಮುಂಚೆ ಸರ್ಕಾರವು ಎಚ್ಚೆತ್ತುಗೊಳ್ಳಬೇಕು’ ಎಂದರು.
ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಿಡಸೋಸಿ ಶ್ರೀ, ಹಳಿಂಗಳಿಯ ಮಹಾಲಿಂಗ ಶ್ರೀ, ಯಾದವಾಡ ಶ್ರೀ ಸೇರಿದಂತೆ ಅನೇಕ ಶೀಗಳು ಮಾತನಾಡಿ ರೈತರಿಗೆ ಬೆಂಬಲ ನೀಡಿದರು.
ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಮಾತನಾಡಿ, ‘ ರಾಜಕಾರಣಿಗಳ ಕೈಯಲ್ಲಿ ಸಕ್ಕರೆ ಕಾರ್ಖಾನೆಗಳು ಇರುವುದರಿಂದ ರೈತರಿಗೆ ಅನ್ಯಾಯವಾಗುತ್ತದೆ’ ಎಂದರು.
ಸರ್ಕಾರಕ್ಕೆ ನಾಚಿಕೆಯಾಗಬೇಕು: ಶಿವಾನಂದ ಶ್ರೀ
ರೈತರ ಹೋರಾಟ ಆರಂಭವಾಗಿ 9 ದಿನಗಳಾದರೂ ನಿರ್ಧಾರ ತೆಗೆದುಕೊಳ್ಳದೇ ರೈತರೊಂದಿಗೆ ಚೆಲ್ಲಾಟ ಆಡುತ್ತಿರುವ ಸರ್ಕಾರಕ್ಕೆ ನಾಚಿಕೆ ಬರಬೇಕು’ ಎಂದು ಹಂದಿಗುಂದದ ಶಿವಾನಂದ ಸ್ವಾಮೀಜಿ ಸರ್ಕಾರಕ್ಕೆ ತಿವಿದರು.
‘ಸಕ್ಕರೆ ಕಾರ್ಖಾನೆ ನಡೆಸುವುದು ಕಷ್ಟ ಇದೆ ಎಂದು ಹೇಳುವ ಕಾರ್ಖಾನೆ ಮಾಲೀಕರು ವರ್ಷಕ್ಕೊಂದು ಕಾರ್ಖಾನೆ ನಿರ್ಮಿಸುತ್ತಾರೆ. ರೈತರ ಬೆಳೆದ ಕಬ್ಬಿಗೆ ನಿಜವಾಗಿಯೂ ₹4200 ಕೊಡಬೇಕು. ಆದರೆ ರೈತರು ಈಗ ಬೇಡುತ್ತಿರುವುದು ₹3500 ಮಾತ್ರ. ಅದನ್ನು ಪಡೆಯಲು ರೈತರು ಬೀದಿಗೆ ಬರುವಂತ ಪರಿಸ್ಥಿತಿ ಬಂದಿರುವುದು ವಿಪರ್ಯಾಸ’ ಎಂದರು.
ರೈತರಿಂದ ಮಠಗಳಿವೆ. ರೈತರಿಗೆ ಬೆಲೆ ದೊರೆಯುವವರೆಗೆ ಮಠಗಳಲ್ಲಿ ಪೂಜೆ ಬಂದ್ ಮಾಡಿ ಹೋರಾಟಕ್ಕೆ ಬರಲು ಸಿದ್ದರಿದ್ದೇವೆ. ರೈತರು ನಡೆಸುತ್ತಿರುವ ಹೋರಾಟದಲ್ಲಿ ಅನಾಹುತ ಘಟಿಸಿದರೆ ಅದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರಣವಾಗುತ್ತವೆ’ ಎಂದರು. ‘ಕಬ್ಬಿನ ಬೆಲೆ ನಿರ್ಧಾರಕ್ಕೆ ಶಾಶ್ವತ ಪರಿಹಾರ ನೀಡಬೇಕು. ಪ್ರತಿ ವರ್ಷವೂ ರೈತರು ಬೀದಿಗೆ ಬರದಂತೆ ಯೋಜನೆ ಮಾಡಬೇಕು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.