ADVERTISEMENT

ರೈತರಿಗೆ ದುಷ್ಪರಿಣಾಮ ಬೀರುವ ಕಾಯ್ದೆಗಳು: ಶಿವಾಜಿ ಕಾಗಣೆಕರ

ಸಾಮಾಜಿಕ ಹೋರಾಟಗಾರ ಶಿವಾಜಿ ಕಾಗಣೆಕರ ಆತಂಕ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 13:37 IST
Last Updated 15 ಫೆಬ್ರುವರಿ 2021, 13:37 IST
ಬೆಳಗಾವಿಯಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ವಿದ್ಯಾರ್ಥಿ ಜಿಲ್ಲಾ ಘಟಕದಿಂದ ನಡೆದ ‘ರೈತ ಚಳವಳಿ ಮತ್ತು ಕೃಷಿ ಕಾಯ್ದೆಗಳು-2020: ವಿದ್ಯಾರ್ಥಿಗಳೊಂದಿಗೆ ಸಂವಾದ' ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಶಿವಾಜಿ ಕಾಗಣೆಕರ ಮಾತನಾಡಿದರು
ಬೆಳಗಾವಿಯಲ್ಲಿ ಬಂಡಾಯ ಸಾಹಿತ್ಯ ಸಂಘಟನೆಯ ವಿದ್ಯಾರ್ಥಿ ಜಿಲ್ಲಾ ಘಟಕದಿಂದ ನಡೆದ ‘ರೈತ ಚಳವಳಿ ಮತ್ತು ಕೃಷಿ ಕಾಯ್ದೆಗಳು-2020: ವಿದ್ಯಾರ್ಥಿಗಳೊಂದಿಗೆ ಸಂವಾದ' ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಶಿವಾಜಿ ಕಾಗಣೆಕರ ಮಾತನಾಡಿದರು   

ಬೆಳಗಾವಿ: ‘ಸಾಮಾನ್ಯ ಜನರಿಗೆ ಮನೆ ಬಿಟ್ಟು ಒಂದು ದಿನವೂ ಹೊರಗಿರಲು ಆಗುವುದಿಲ್ಲ. ಅಂಥದ್ದರಲ್ಲಿ ಉತ್ತರದ ಹಲವು ರಾಜ್ಯಗಳ ರೈತರು ದೆಹಲಿಯ ಗಡಿಗಳಲ್ಲಿ ಮನೆ ಮಠ ಬಿಟ್ಟು ಕೊರೆಯುವ ಚಳಿಯಲ್ಲಿ ಎಂಬತ್ತು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ ಎಂದರೆ ನೂತನ ಕೃಷಿ ಕಾಯ್ದೆಗಳು ರೈತ ವಿರೋಧಿಯಾಗಿವೆ ಎಂದರ್ಥವಲ್ಲವೇ?’ ಎಂದು ಸಾಮಾಜಿಕ ಹೋರಾಟಗಾರ ಶಿವಾಜಿ ಕಾಗಣೆಕರ ಕೇಳಿದರು.

ಬಂಡಾಯ ಸಾಹಿತ್ಯ ಸಂಘಟನೆಯ ವಿದ್ಯಾರ್ಥಿ ಜಿಲ್ಲಾ ಘಟಕವು ನಗರದ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ‘ರೈತ ಚಳುವಳಿ ಮತ್ತು ಕೃಷಿ ಕಾಯಿದೆಗಳು-2020: ವಿದ್ಯಾರ್ಥಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಡೀ ದೇಶ ರೈತರ ಕೃಷಿ ಉತ್ಪಾದನೆಯ ಮೇಲೆ ಅವಲಂಬಿತವಾಗಿದೆ. ಹೀಗಿರುವಾಗ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದರೆ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರ್ಥ. ನಮ್ಮ ದೇಶಕ್ಕೆ ಸ್ವರಾಜ್ಯ ಬಂದು ಎಪ್ಪತ್ತು ವರ್ಷ ಕಳೆದು ಹೋಗಿವೆ. ನಮ್ಮನ್ನಾಳುವ ಸರ್ಕಾರಗಳು ಮೃತರಾದ ರೈತರ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಿಸಿ ಫೋಟೊ ತೆಗೆದುಕೊಳ್ಳುವುದಕ್ಕಾಗಿ ಮಾತ್ರವೇ ಇರಬೇಕೇ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ನಿಯಂತ್ರಿಸಲು ಹೊರಟಿದೆ:

‘ಕೃಷಿಗೆ ಸಂಬಂಧಿಸಿದ ಕಾಯ್ದೆಗಳು ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಡುತ್ತವೆ. ಆದರೆ, ಕೇಂದ್ರ ಸರ್ಕಾರ ಏಕಸ್ವಾಮ್ಯವಾಗಿ ಅದನ್ನು ನಿಯಂತ್ರಿಸಲು ಹೊರಟಿದೆ. ರೈತರ ಕೃಷಿ ಭೂಮಿಯನ್ನು ಮುಂದಿನ ದಿನಗಳಲ್ಲಿ ದುಡ್ಡಿರುವ ಉದ್ಯಮಿಗಳು ದೋಚುವಂತೆ ಮಾಡಲು ಈ ಕಾಯ್ದೆಗಳು ದುಷ್ಪರಿಣಾಮವಾಗಿ ಪರಿಣಮಿಸಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಬಂಡಾಯ ಸಾಹಿತಿ ಡಾ.ಯಲ್ಲಪ್ಪ ಹಿಮ್ಮಡಿ, ‘ಈ ಹಿಂದೆ ರಾಜಕಾರಣ ಸಮಾಜ ಬದಲಾವಣೆಯ ವೃತ್ತಿಯಂತಾಗಿತ್ತು. ಈಗ ಅದು ಉದ್ಯಮವಾಗಿದೆ. ವೃತ್ತಿಯಲ್ಲಿ ಪಾವಿತ್ರ್ಯತೆ ಮತ್ತು ನೈತಿಕತೆ ಇದ್ದರೆ, ಉದ್ಯಮದಲ್ಲಿ ಲಾಭಕೋರತನ ಮತ್ತು ಅನೈತಿಕ ಸ್ಪರ್ಧೆ ಇರುತ್ತದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರು ಒಟ್ಟಾಗಿ ಅಸಮಾನತೆಯನ್ನು ಗುಡಿಸಿ ಹಾಕಬೇಕು. ಚಳವಳಿಯ ನೈತಿಕತೆ ಉಳಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಸಂಘಟನೆಯ ಶಂಕರ ಬಾಗೇವಾಡಿ, ‘ಸರ್ಕಾರವು ಕೃಷಿ ಕಾಯ್ದೆಗಳನ್ನು ತಿದ್ದುಪಡಿ ಮಾತ್ರ ಮಾಡುತ್ತಿಲ್ಲ; ಖಾಸಗೀಕರಣಗೊಳಿಸಲು ಸರಳಗೊಳಿಸುತ್ತಿದೆ’ ಎಂದು ದೂರಿದರು.

ಸಂವಾದದಲ್ಲಿ ನೀಲಕಂಠ ಭೂಮಣ್ಣವರ, ಸರಸ್ವತಿ ಆಲಖನೂರೆ, ನೇಮಿಚಂದ್ರಾ, ಮೆಹಬೂಬಸಾಬ್ ನತ್ತುಪಸಾರಿ, ಸುಧಾ ಕೊಟಬಾಗಿ, ಪ್ರಿಯಾಂಕಾ ಉಪ್ಪಾರ, ನಾಗರಾಜ ಕೊಡ್ಲಿ, ಸದಾಶಿವ ಗಾಣಿಗೇರ, ದೀಪಕ ನಾಯಿಕ, ಸುರೇಶ ಹಾದಿಮನಿ ಪಾಲ್ಗೊಂಡಿದ್ದರು.

ನಾಟಕಕಾರ ಡಿ.ಎಸ್. ಚೌಗಲೆ, ಕವಿಗಳಾದ ನದೀಮ್ ಸನದಿ, ಸಂತೋಷ ನಾಯಕ, ಮಲ್ಲಿಕಜಾನ ಗದಗಿನ ಉಪಸ್ಥಿತರಿದ್ದರು.

ಸುರೇಖಾ ಕೊಟ್ರೆ, ಅಶ್ವಿನಿ ಪಂಡ್ರೋಳಿ, ರೇಖಾ ಕಾಂಬಳೆ, ನಂದೇಶ ಗೊಲಬಾವಿ, ರಾಯಿಸಾಬ ನದಾಫ್ ರೈತಪರ ಹೋರಾಟದ ಹಾಡುಗಳನ್ನು ಹಾಡಿದರು. ವಿದ್ಯಾರ್ಥಿ ಘಟಕದ ಜಿಲ್ಲಾ ಸಂಚಾಲಕ ಮಹೇಶ್ ಸಿಂಗೆ ಸಂವಾದ ನಡೆಸಿಕೊಟ್ಟರು. ಮಂಜುನಾಥ್ ಪಾಟೀಲ ಸ್ವಾಗತಿಸಿದರು. ದಿವ್ಯಾ ಕಾಂಬಳೆ ನಿರೂಪಿಸಿದರು. ಜಿಲ್ಲಾ ಸಂಚಾಲಕ ಡಾ.ಅಡಿವೆಪ್ಪ ಇಟಗಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.