ADVERTISEMENT

ಅಮಿತ್‌ ಶಾಗೆ ರೈತ ಸಂಘ ಪಂಥಾಹ್ವಾನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2021, 10:51 IST
Last Updated 15 ಜನವರಿ 2021, 10:51 IST
   

ಬೆಳಗಾವಿ: ‘ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದನ್ನು ಸಮರ್ಥಿಸಿಕೊಳ್ಳಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಮ್ಮೊಂದಿಗೆ ಬಹಿರಂಗ ಚರ್ಚೆಗೆ ಬರಬೇಕು’ ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸಂಚಾಲಕ ಚೂನಪ್ಪ ಪೂಜಾರಿ ಒತ್ತಾಯಿಸಿದರು.

‘ಶಾ ಅವರು ಜ. 17ರಂದು ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿಗೆ ಬರುತ್ತಿದ್ದಾರೆ. ಅಂದು ನಾವು ರಾಣಿ ಚನ್ನಮ್ಮ ವೃತ್ತದಲ್ಲಿ ಅವರಿಗಾಗಿ ಒಂದು ಕುರ್ಚಿ ಹಾಕಿ ಕಾಯುತ್ತೇವೆ. ಅವರು ನಮ್ಮನ್ನು ಉದ್ದೇಶಿಸಿ ಮಾತನಾಡಿ, ಕಾಯ್ದೆಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಆಹ್ವಾನ ನೀಡಿದರು.

‘ನೂರಾರು ಮಂದಿ ಪಾಲ್ಗೊಳ್ಳಲಿದ್ದೇವೆ. ಕೇಂದ್ರ ಸಚಿವರು ರೈತರಾದ ನಮ್ಮಲ್ಲಿರುವ ಗೊಂದಲಗಳನ್ನು ನಿವಾರಣೆ ಮಾಡದಿದ್ದಲ್ಲಿ ಮತ್ತು ಸಮಜಾಯಿಷಿ ನೀಡದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು. ಚರ್ಚೆಯೋ, ಹೋರಾಟವೋ ಎನ್ನುವುದನ್ನು ಅವರೆ ನಿರ್ಧರಿಸಲಿ. ನಾವು ಅಂದು ವಿಭಿನ್ನವಾದ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ’ ಎಂದರು.

ADVERTISEMENT

‘ದೆಹಲಿಯ ಗಡಿಯಲ್ಲಿ ಸಾವಿರಾರು ರೈತರು ಹೋರಾಟ ಮುಂದುವರಿಸಿದ್ದರೂ ಪ್ರಧಾನಿಯಿಂದ ಸ್ಪಂದನೆ ದೊರೆತಿಲ್ಲ. ಒಳ್ಳೆಯ ದಿನ ಬರುತ್ತದೆ ಎಂದು ಜನರು ಭಾವಿಸಿದ್ದು ಹುಸಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರಿಗೆ ಮರಣ ಶಾಸನ ಬರೆದಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಪ್ರಕಾಶ್ ನಾಯ್ಕ ಮಾತನಾಡಿ, ‘ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಬಿಜೆಪಿಯಿಂದ ಇಲ್ಲಿ ಅಬ್ಬರದ ಸಮಾವೇಶ ನಡೆಸಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸುವುದು ಸರಿಯೇ? ಬೆಳಗಾವಿ ಉಪ ಚುನಾವಣಾ ಪ್ರಚಾರ ಮಾಡುವುದಕ್ಕೆ ಕೋವಿಡ್ ನಿಯಮ ಅನ್ವಯ ಆಗುವುದಿಲ್ಲವೇ?’ ಎಂದು ಕೇಳಿದರು.

ಸಂಚಾಲಕಿ ಜಯಶ್ರೀ ಗುರಣ್ಣವರ, ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.