ಬೆಳಗಾವಿ: ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರನ್ನು ಹಿಡಿದುಕೊಟ್ಟಿದ್ದಕ್ಕೆ ಇನಾಮದಾರ ಕುಟುಂಬಕ್ಕೆ ಬ್ರಿಟಿಷ್ ಸರ್ಕಾರ 10 ಸಾವಿರ ಎಕರೆ ಜಮೀನು ನೀಡಿದೆ. ಇದೆಲ್ಲವೂ ರೈತರ ಜಮೀನು. ಇದನ್ನು ಮರಳಿ ರೈತರಿಗೆ ಖಾತೆ ಮಾಡಿ ಕೊಡಬೇಕು’ ಎಂದು ಆಗ್ರಹಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸೇರಿದ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಕುಳ್ಳೊಳ್ಳಿ ಗ್ರಾಮದ ರೈತರು, ಒಂದು ತಾಸಿಗೂ ಹೆಚ್ಚು ಸಮಯ ಮಾನವ ಸರಪಳಿ ನಿರ್ಮಿಸಿದರು. ರಾಜ್ಯ ಸರ್ಕಾರ ಹಾಗೂ ಇನಾಮದಾರ ಕುಟುಂಬದ ವಿರುದ್ಧ ಧಿಕ್ಕಾರ ಕೂಗಿದರು. ಇದರಿಂದ ವೃತ್ತದಲ್ಲಿ ಸಂಚಾರ ವ್ಯತ್ಯಯ ಉಂಟಾಯಿತು.
‘ಈ ನಾಡಿನ ಕ್ರಾಂತಿಯ ಕಿಡಿ, ರಾಣಿ ಚನ್ನಮ್ಮಾಜಿ ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಗಲ್ಲಿಗೇರಿದರು. ಅವರನ್ನು ಬ್ರಿಟಿಷರಿಗೆ ಹಿಡಿದುಕೊಟ್ಟು ಆಗಿನ ಇನಾಮದಾರ ಕುಟುಂಬದವರು ದ್ರೋಹ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಬ್ರಿಟಿಷ್ ಸರ್ಕಾರವು ಕುಳ್ಳೊಳ್ಳಿ ಹದ್ದಿಯಲ್ಲಿ ಅಪಾರ ಪ್ರಮಾಣದ ಜಮೀನನ್ನು ಇನಾಮದಾರ ಕುಟುಂಬಕ್ಕೆ ನೀಡಿದೆ. ಆಗ ಇದನ್ನು ‘ಘಾತಕ ಇನಾಮ್’ ಎಂದು ಕರೆದಿದ್ದಾರೆ. ಇದೆಲ್ಲವೂ ಇನಾಮದಾರರರ ಪಿತ್ರಾರ್ಜಿತ ಆಸ್ತಿ ಅಲ್ಲ. ರೈತರಿಗೆ ಸೇರಬೇಕಾದ ಜಮೀನು’ ಎಂದು ಸಂಘದ ಅಧ್ಯಕ್ಷ ಚೂಣಪ್ಪ ಪೂಜಾರಿ ಹೇಳಿದರು.
‘ಸುಮರು 10 ಸಾವಿರ ಎಕರೆಗೂ ಹೆಚ್ಚು ಜಮೀನನ್ನು ರೈತರು 60 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದಾರೆ. ಅದನ್ನು ಇನಾಮದಾರ ವಂಶಸ್ಥರು ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಇದೆಲ್ಲವನ್ನೂ ಅವರ ಕುಟುಂಬದಿಂದ ಮರಳಿ ಪಡೆದು, ಉಳುಮೆ ಮಾಡುವ ರೈತರಿಗೆ ಖಾತೆ ಮಾಡಿ ಕೊಡಬೇಕು’ ಎಂದೂ ಆಗ್ರಹಿಸಿದರು.
‘ಹಲವರು ಜಮೀನಿನಲ್ಲೇ ಮನೆ ಕಟ್ಟಿಕೊಂಡಿದ್ದಾರೆ. ನೀರಾವರಿ ಸೌಕರ್ಯ ಮಾಡಿಕೊಂಡಿದ್ದಾರೆ. ಇದೇ ವಿಳಾಸದಿಂದ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಗಳನ್ನೂ ನೀಡಲಾಗಿದೆ. ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದಾಗ, ಖುದ್ದು ಪರಿಶೀಲಿಸಿ ಸರ್ವೆ ಮಾಡಿಸಿದಾಗ ರೈತರ ಕಬ್ಜಾದಲ್ಲಿರುವುದು ಗೊತ್ತಾಗಿದೆ. ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈಗಲಾದರೂ ಸರ್ಕಾರ ರೈತರಿಗೆ ನ್ಯಾಯ ಒದಗಿಸಬೇಕು’ ಎಂದೂ ರಾಷ್ಟ್ರೀಯ ಮುಖಂಡ ಪ್ರಕಾಶ ನಾಯಿಕ ಆಗ್ರಹಿಸಿದರು.
ಸಂಘಟನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ರಾಜು ಪೋವಾರ, ಕಾರ್ಯದರ್ಶಿ ಕಿಶನ್ ನಂದಿ, ಉಪಾಧ್ಯಕ್ಷ ಸುರೇಶ ಪರಗಣ್ಣವರ, ಮುಖಂಡರಾದ ಕುಮಾರ ನಂದಿ, ಸತ್ಯಪ್ಪ ಮಲ್ಲಾಪುರ, ಆಸ್ಮಾ ಜೂಟದಾರ ನೇತೃತ್ವ ವಹಿಸಿದ್ದರು.
10 ಸಾವಿರ ಎಕರೆ ಜಮೀನು ತಲೆತಲಾಂತರದಿಂದ ಉಳುಮೆ ಸುಪರ್ದಿಗೆ ಪಡೆದ ಇನಾಮದಾರ ವಂಶಸ್ಥರು
‘ಜಿಲ್ಲಾಧಿಕಾರಿ ವಿರುದ್ಧವೇ ವಾರೆಂಟ್’
‘ಈ ಪ್ರಕರಣದಲ್ಲಿ ರೈತರ ಒತ್ತಾಯದ ಮೇರೆಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮಧ್ಯಪ್ರವೇಶ ಮಾಡಿದರು. ಅವರು ರೈತರ ಪರವಾಗಿ ನಿಂತಿದ್ದಾರೆ ಎಂಬ ಕಾರಣಕ್ಕೆ ಇನಾಮದಾರ ಕುಟುಂಬದ ಒಬ್ಬರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಜಿಲ್ಲಾಧಿಕಾರಿ ವಿರುದ್ಧ ವಾರೆಂಟ್ ಕೊಡಿಸಿದ್ದಾರೆ’ ಎಂದು ರೈತ ಮುಖಂಡರು ಆಕ್ರೋಶ ಹೊರಹಾಕಿದರು. ‘ಜಿಲ್ಲಾಧಿಕಾರಿಯೇ ಈ ಸಮಸ್ಯೆ ಬಗೆಹರಿಸಲು ಮಧ್ಯ ಪ್ರವೇಶ ಮಾಡಬಾರದೆಂದರೆ ಇನ್ಯಾರು ಮಾಡಲು ಸಾಧ್ಯ’ ಎಂದೂ ಹೋರಾಟಗಾರರು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.