
ಗುರ್ಲಾಪುರ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಗುರ್ಲಾಪುರ ಬಳಿ ಶನಿವಾರ ಧರಣಿ ಮುಂದುವರಿಸಿದ್ದ ರೈತರು, ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರ ಕೋರಿಕೆ ಮೇರೆಗೆ ಸಂಜೆ ಹಿಂದಕ್ಕೆ ಪಡೆದರು.
ಧರಣಿ ನಿರತ ಸ್ಥಳಕ್ಕೆ ಬಂದ ಸಚಿವರು, ‘ರೈತರು ಸಂಕಷ್ಟದಲ್ಲಿದ್ದ ಕಾರಣ ಮುಖ್ಯಮಂತ್ರಿ ನೆರವು ಘೋಷಿಸಿದ್ದಾರೆ. ದರ ಗೊಂದಲಕ್ಕೆ ಕೇಂದ್ರ ಸರ್ಕಾರ ಕಾರಣ. ಆದರೂ ರೈತರ ಮೇಲಿನ ಕಾಳಜಿಗೆ ನಾವು ಏನು ಮಾಡಲು ಸಾಧ್ಯವೋ ಅದನ್ನು ಮಾಡಿದ್ದೇವೆ. ಧರಣಿ ಕೈಬಿಡಬೇಕು‘ ಎಂದು ಕೋರಿದರು.
ತದನಂತರ, ಧರಣಿ ನಿಲ್ಲಿಸುವುದಾಗಿ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ಅಧ್ಯಕ್ಷ ಚೂಣಪ್ಪ ಪೂಜಾರಿ ಹೇಳಿದರು.
ನಂತರವೂ ಮಾತು ಮುಂದುವರಿಸಿದ ಸಚಿವರು, ‘ಸಕ್ಕರೆ ಕಾರ್ಖಾನೆಯವರಿಗೂ ಸಾಕಷ್ಟು ಸಮಸ್ಯೆಗಳಿವೆ. ಗೃಹಬಳಕೆ ಸಕ್ಕರೆ ಹಾಗೂ ವಾಣಿಜ್ಯಕ್ಕೆ ಬಳಸುವ ಸಕ್ಕರೆ ಬೆಲೆ ಒಂದೇ ತೆರನಾಗಿದೆ. ಇದು ಕಾರ್ಖಾನೆಗಳಿಗೂ ನಷ್ಟ ತರುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಜಿಲ್ಲಾ ಉಸ್ತುವಾರಿ ಸಚಿವರೇ ಸಮಸ್ಯೆ ಬಗೆಹರಿಸುತ್ತಾರೆ ಎಂದು ನಂಬಿ ಕುಳಿತಿದ್ದೆ. ಅದು ತಪ್ಪಾಯಿತು. ನಿಮ್ಮ ಭೇಟಿ ತಡವಾಯಿತು. ನೀವು ನನ್ನ ಮೇಲೆ ಬಾಟಲಿ ಎಸೆದಿರಿ, ಕಾರಿನ ಮೇಲೆ ಚಪ್ಪಲಿ ಎಸೆದಿರಿ, ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದಿರಿ. ಅದೆಲ್ಲವನ್ನೂ ನಿಮ್ಮ ಆಕ್ರೋಶ ಎಂದು ನಾನು ಭಾವಿಸುತ್ತೇನೆ. ನಿಮ್ಮ ಹೋರಾಟ ಕೆಲವರಿಗೆ (ವಿಜಯೇಂದ್ರ) ಜನ್ಮದಿನವಾದರೆ ನನಗೆ ಸಾವಿನ ದಿನ ಉಪಯೋಗವಾಯಿತು. ನನ್ನನ್ನು ಜೀವಂತ ಬಿಟ್ಟಿದ್ದೇ ದೊಡ್ಡದು’ ಎಂದೂ ಹಾಸ್ಯ ಧಾಟಿಯಲ್ಲಿ ಹೇಳಿದರು.
ಆಗ ಜನ ಸಮುದಾಯದಿಂದ ಹೋಯ್... ಎಂದು ಕೂಗಾಟ ಕೇಳಿಬಂತು.
ಈ ವೇಳೆ ರೈತ ಮುಖಂಡರು, ‘ಸದ್ಯ ಘೋಷಿಸಿರುವ ₹3,300 ದರವು ರಿಕವರಿ ಆಧರಿಸಿ ಹೆಚ್ಚು–ಕಡಿಮೆ ಆಗುತ್ತದೆ. ರಾಜ್ಯದ ಎಲ್ಲ ಕಾರ್ಖಾನೆಗಳೂ ಇದೇ ದರ ನೀಡುವಂತೆ ಆದೇಶಿಸಬೇಕು’ ಎಂದು ಕೋರಿದರು.
‘ಹಾಗೆ ಮಾಡಲು ಬರುವುದಿಲ್ಲ. ಕಡಿಮೆ ರಿಕವರಿ ಬರುವ ಕಡೆಯ ಸಮಸ್ಯೆಯನ್ನು ಮುಂದಿನ ದಿನಗಳಲ್ಲಿ ಬಗೆಹರಿಸೋಣ’ ಎಂದರು.
‘ಕಬ್ಬು ತೂಕ ಮಾಡುವಲ್ಲಿ ಕಾರ್ಖಾನೆಗಳು ಮೋಸ ಮಾಡುತ್ತಿವೆ. ಇದನ್ನು ತಡೆಯಬೇಕು’ ಎಂದು ರೈತರು ಕೂಗಾಡಿದರು.
‘ಇದು ಸಚಿವ ಮುನಿಯಪ್ಪ ಅವರಿಗೆ ಸಂಬಂಧಿಸಿದ ಸಮಸ್ಯೆ. ಅವರ ಗಮನಕ್ಕೆ ತರುತ್ತೇನೆ’ ಎಂದು ಶಿವಾನಂದ ಪಾಟೀಲ ಭರವಸೆ ನೀಡಿದರು.
ಮುಗಳಖೋಡ ಯಲ್ಲಾಲಿಂಗೇಶ್ವರ ಮಠದ ಮುರುಘರಾಜೇಂದ್ರ ಸ್ವಾಮೀಜಿ, ರೈತ ಮುಖಂಡರು, ಸಚಿವರು ಹಾಗೂ ಅಧಿಕಾರಿಗಳನ್ನು ಸನ್ಮಾನಿಸಿದರು.
ಹುಕ್ಕೇರಿ ತಾಲ್ಲೂಕಿನ ಹತ್ತರಗಿ ಟೋಲ್ ನಾಕಾ ಬಳಿ ಶುಕ್ರವಾರ ಕಲ್ಲು ತೂರಾಟದಲ್ಲಿ 11 ಪೊಲೀಸರು ಗಾಯಗೊಂಡಿದ್ದಾರೆ. ದಾಖಲೆ ಪರಿಶೀಲಿಸಿ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುತ್ತೇವೆಆರ್.ಹಿತೇಂದ್ರ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ)
ವಾಣಿಜ್ಯ ಬಳಕೆ ಸಕ್ಕರೆ ದರ ಪರಿಷ್ಕರಿಸುವಂತೆ ಕಾರ್ಖಾನೆಗಳವರು ಪತ್ರ ಬರೆದಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೋರಾಟಕ್ಕೆ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ರೈತರು ಅವರನ್ನೂ ಕೈ ಹಿಡಿದು ಪ್ರಶ್ನಿಸಬೇಕುಶಿವಾನಂದ ಪಾಟೀಲ ಸಕ್ಕರೆ ಸಚಿವ
ಬೈಲಹೊಂಗಲ ಬಂದ್ ಯಶಸ್ವಿ
ಟನ್ ಕಬ್ಬಿಗೆ ₹3500 ದರ ನೀಡಲು ಒತ್ತಾಯಿಸಿ ರೈತಪರ ಸಂಘಟನೆಗಳು ಕಬ್ಬು ಬೆಳೆಗಾರರು ಶನಿವಾರ ಕರೆ ನೀಡಿದ್ದ ಬೈಲಹೊಂಗಲ ಬಂದ್ ಯಶಸ್ವಿ ಆಯಿತು. ತೆರೆದಿದ್ದ ಅಂಗಡಿಗಳ ಮೇಲೆ ರಸ್ತೆಗಿಳಿದ ಬಸ್‌ಗಳು ಹೊಸೂರ ರಸ್ತೆಯ ಇನಾಮದಾರ ಶುಗರ್ಸ್ ಪ್ಯಾಕ್ಟರಿ ಕಚೇರಿ ಮೇಲೆ ಹೋರಾಟಗಾರರು ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಎಲ್ಲ ಬಂದ್ ಮಾಡಲಾಯಿತು. ಗುರ್ಲಾಪುರಕ್ಕೆ ಸಚಿವರ ಭೇಟಿ ಬಳಿಕ ಇಲ್ಲಿ ಹೋರಾಟ ಹಿಂಪಡೆಯಲಾಯಿತು.
ಮುಧೋಳ: ಮುಂದುವರೆದ ಪ್ರತಿಭಟನೆ
ಬಾಗಲಕೋಟೆ ವರದಿ: ಹಿಂದಿನ ವರ್ಷಗಳ ಬಾಕಿ ಬಿಲ್ ಪಾವತಿ ಮತ್ತು ಈ ವರ್ಷ ಕಬ್ಬಿನ ಬೆಲೆ ಗೊಂದಲ ಪರಿಹಾರಕ್ಕೆ ಒತ್ತಾಯಿಸಿ ರೈತರು ಪ್ರತಿಭಟನೆ ಮುಂದುವರೆಸಿದ್ದಾರೆ. ‘ಬಾಕಿ ಬಿಲ್ ಪಾವತಿಸಬೇಕು. 2024–25ನೇ ಸಾಲಿನ ಎರಡನೇ ಕಂತು ನೀಡಬೇಕು‘ ಎಂದು ಪ್ರತಿಭಟನನಿರತ ರೈತರು ಆಗ್ರಹಿಸಿದರು. ವಿಜಯಪುರ ವರದಿ: ಇಂಡಿಯಲ್ಲಿ ಪ್ರತಿಭಟನೆ ಮುಂದುವರಿದಿದೆ.
₹3350 ಘೋಷಿಸಿದ ವೆಂಕಟೇಶ್ವರ ಕಾರ್ಖಾನೆ
ಚಿಕ್ಕೋಡಿ: ಸಮೀಪದ ಬೇಡಕಿಹಾಳದ ವೆಂಕಟೇಶ್ವರ ಪವರ್ ಪ್ರೊಜೆಕ್ಟ್‌ನ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಟನ್ ಕಬ್ಬಿಗೆ ₹3350 ದರ ಘೋಷಣೆ ಮಾಡಿದೆ. ಮಹಾರಾಷ್ಟ್ರ ಮೂಲದ ಉದ್ಯಮಿ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಸ್ವರೂಪ ಮಹಾಡಿಕ್ ಶನಿವಾರ ದರ ಘೋಷಣೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.