ADVERTISEMENT

ಬೆಳಗಾವಿ ಗಡಿಭಾಗದ ಜನ ಸಂಚಾರದಿಂದ ಕೋವಿಡ್ ಹರಡುವ ಭೀತಿ ಹೆಚ್ಚಳ

ಶ್ರೀಕಾಂತ ಕಲ್ಲಮ್ಮನವರ
Published 9 ಜುಲೈ 2020, 19:30 IST
Last Updated 9 ಜುಲೈ 2020, 19:30 IST
ರಾಜ್ಯದ ಗಡಿ ಪ್ರದೇಶವೊಂದರಲ್ಲಿ ಪೊಲೀಸರ ಕಾವಲು
ರಾಜ್ಯದ ಗಡಿ ಪ್ರದೇಶವೊಂದರಲ್ಲಿ ಪೊಲೀಸರ ಕಾವಲು    

ಬೆಳಗಾವಿ: ಜಿಲ್ಲೆಯಲ್ಲಿ ದಿನೇದಿನೇ ಕೋವಿಡ್‌–19 ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿಭಾಗದಲ್ಲಿ ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಸಂಚರಿಸುತ್ತಿರುವ ಜನರನ್ನು ನಿಭಾಯಿಸುವುದೇ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ಚೆಕ್‌ಪೋಸ್ಟ್‌ಗಳನ್ನು ತಪ್ಪಿಸಿ, ಒಳದಾರಿಗಳ ಮೂಲಕ ಸ್ಥಳೀಯರು ಸಂಚರಿಸುತ್ತಿರುವುದು ಜಿಲ್ಲಾಡಳಿತವನ್ನು ಕಂಗೆಡಿಸಿದೆ.

ಜಿಲ್ಲೆಯ ಅಥಣಿ, ಕಾಗವಾಡ, ಚಿಕ್ಕೋಡಿ, ಹುಕ್ಕೇರಿ ಹಾಗೂ ಬೆಳಗಾವಿ ತಾಲ್ಲೂಕುಗಳು ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿವೆ. ಸುಮಾರು 152 ಕಿ.ಮೀ.ವರೆಗೆ ಗಡಿ ಇದೆ. ಗಡಿಯಾಚೆ ಹೋಗುವವರು ಹಾಗೂ ಬರುವವರ ಮೇಲೆ ನಿಗಾ ವಹಿಸಲು 28 ಚೆಕ್‌ಪೋಸ್ಟ್‌ಗಳನ್ನು ಜಿಲ್ಲಾಡಳಿತ ಮಾಡಿದ್ದರೂ ಪ್ರಯೋಜನವಾಗುತ್ತಿಲ್ಲ. ಜನರು ಒಳದಾರಿಗಳ ಮೂಲಕ ಸಂಚರಿಸುತ್ತಿದ್ದಾರೆ.

ಮುಖ್ಯವಾಗಿ ಉದ್ಯೋಗ ಹಾಗೂ ಆರೋಗ್ಯ ಸೇವೆಗಳನ್ನು ಅರಸಿ ಗಡಿಭಾಗದ ಜನರು ಸಂಚರಿಸುತ್ತಾರೆ. ನಿಪ್ಪಾಣಿ ಹಾಗೂ ಸುತ್ತುಮುತ್ತಲಿನ ಜನರು ಕೇವಲ 20 ಕಿ.ಮೀ ದೂರದಲ್ಲಿರುವ ಮಹಾರಾಷ್ಟ್ರದ ಕಾಗಲ ಕೈಗಾರಿಕಾ ಪ್ರದೇಶಕ್ಕೆ ಹೋಗಿ ಉದ್ಯೋಗ ಮಾಡುತ್ತಾರೆ. ಚಿಕ್ಕೋಡಿಯ ಜನರು ಇಚಲಕರಂಜಿಯ ಕೈಗಾರಿಕಾ ಪ್ರದೇಶಕ್ಕೆ ಹೋಗುತ್ತಾರೆ. ಅಥಣಿ, ಕಾಗವಾಡದ ಜನರು ಮಿರಜ್‌, ಸಾಂಗ್ಲಿ ಹಾಗೂ ಜತ್ತಗೆ ಉದ್ಯೋಗ, ವ್ಯಾಪಾರ ಅರಸಿ ಹೋಗುತ್ತಾರೆ. ಇದೇ ರೀತಿ ಮಹಾರಾಷ್ಟ್ರದ ಶಿನೊಳ್ಳಿ ಜನರು ಬೆಳಗಾವಿಗೆ ಬಂದು ವಿವಿಧ ಉದ್ಯೋಗ ಮಾಡುತ್ತಾರೆ.

ADVERTISEMENT

ಅಥಣಿ, ಕಾಗವಾಡ ಹಾಗೂ ಸುತ್ತಮುತ್ತಲಿನ ಜನರು ಮಿರಜ್‌ ಆಸ್ಪತ್ರೆಗೆ ಹೋಗುತ್ತಾರೆ. ಇದೇ ರೀತಿ ಮಹಾರಾಷ್ಟ್ರದ ಗಡಿಯಲ್ಲಿರುವ ಜನರು ಬೆಳಗಾವಿಯ ಆಸ್ಪತ್ರೆಗಳಿಗೆ ಬರುತ್ತಾರೆ. ಇವೆರಡೂ ಕಾರಣಗಳಿಂದಾಗಿ ಜನರ ಓಡಾಟ ಹೆಚ್ಚಾಗಿದೆ. ಲಾಕ್‌ಡೌನ್‌ 2.0 ತೆರವುಗೊಂಡ ನಂತರ ಜನರ ಓಡಾಟ ಹೆಚ್ಚಾಯಿತು. ಮುಖ್ಯರಸ್ತೆಯಲ್ಲಿರುವ ಚೆಕ್‌ಪೋಸ್ಟ್‌ಗಳನ್ನು ತಪ್ಪಿಸಲು ಒಳದಾರಿಗಳಲ್ಲಿ ಸಂಚರಿಸಿದ್ದಾರೆ. ಬೈಕ್‌, ಕಾರು, ಜೀಪ್‌ ತೆಗೆದುಕೊಂಡು ಓಡಾಡುತ್ತಿದ್ದಾರೆ. ಇದರ ಪರಿಣಾಮವಾಗಿ, ಗಡಿಭಾಗದ ಪ್ರದೇಶಗಳಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.

ಅತಿ ಹೆಚ್ಚು: ಮಹಾರಾಷ್ಟ್ರದ ಜೊತೆ ನಂಟು ಹೊಂದಿದವರಲ್ಲಿಯೇ ಹೆಚ್ಚಿನ ಸೋಂಕು ಕಂಡುಬಂದಿದೆ. ಜಿಲ್ಲೆಯ ಒಟ್ಟು 400 ಸೋಂಕಿತರಲ್ಲಿ 186 ಜನರು ಆ ರಾಜ್ಯದ ಜೊತೆ ನಂಟು ಹೊಂದಿದ್ದಾರೆ. ಬೆಳಗಾವಿಯಲ್ಲಿ 74, ಹುಕ್ಕೇರಿ 72, ಚಿಕ್ಕೋಡಿ 18, ಅಥಣಿ 14, ರಾಯಬಾಗ 2, ಗೋಕಾಕ 2, ಸವದತ್ತಿ 2 ಹಾಗೂ ರಾಯಬಾಗದ2 ಪ್ರಕರಣಗಳು ನಂಟು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.